ಮೈಸೂರು : ಸತ್ತಂತೆ ನಾಟಕವಾಡಲು ಹೋಗಿ ಹೆಣವಾದ
ಮೈಸೂರು, ಫೆ. 20 : ಪೋಷಕರಿಗೆ ಬೆದರಿಸಲು ವಿಷ ಕುಡಿದ ಶಾಲಾ ಬಾಲಕನೊಬ್ಬ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಶಾಲೆಗೆ ಹೋಗುವಂತೆ ಪೋಷಕರು ಬುದ್ಧಿವಾದ ಹೇಳಿದ್ದೆ ಆತ್ಮಹತ್ಯೆಗೆ ಕಾರಣವಾಗಿದೆ.
ಮೃತಪಟ್ಟ ಬಾಲಕನನ್ನು ಟಿ.ನರಸೀಪುರ ತಾಲೂಕಿನ ದೊಡ್ಡಪುರ ಗ್ರಾಮದ ಕಾಂತರಾಜ್ ಅರಸ್ (13) ಎಂದು ಗುರುತಿಸಲಾಗಿದೆ. ಕ್ರಿಮಿನಾಶಕ ಕುಡಿದು ಪೋಷಕರನ್ನು ಬೆದರಿಸಲು ಹೋದ ಕಾಂತರಾಜ್ ಸಾವನ್ನಪ್ಪಿದ್ದಾನೆ.

ಯಾವಾಗಲೂ ಶಾಲೆಗೆ ಗೈರು ಹಾಜರಾಗುತ್ತಿದ್ದ ಕಾಂತರಾಜ್‌ನನ್ನು ಬೆಂಗಳೂರಿನಿಂದ ಮೈಸೂರಿಗೆ ಕಳುಹಿಸಲಾಗಿತ್ತು. ಅಜ್ಜಿ ಮನೆಯಲ್ಲಿದ್ದುಕೊಂಡು ಕಾಂತರಾಜ್ ಓದು ಮುಂದುವರೆಸುತ್ತಿದ್ದ. [ಮಂಗಳೂರು : ಹಾವು ಹಿಡಿಯಲು ಹೋಗಿ ಸಾವು ತಂದುಕೊಂಡ]
7ನೇ ತರಗತಿ ಓದುತ್ತಿದ್ದ ಕಾಂತರಾಜ್ ಮೈಸೂರಿನಲ್ಲಿಯೂ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಇದನ್ನು ಗಮನಿಸಿದ ಅಜ್ಜಿಮನೆಯವರು ಸರಿಯಾಗಿ ಶಾಲೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದರು. ಇದರಿಂದ ಕೋಪಗೊಂಡ ಕಾಂತರಾಜ್ ಗುರುವಾರ ಸಂಜೆ ವಿಷಸೇವಿಸುವ ನಾಟಕವಾಡಿದ್ದ.
ಅಜ್ಜಿಮನೆಯ ಜಮೀನಿಗೆ ತೆರಳಿದ್ದ ಅವನು ಕ್ರಿಮಿನಾಶಕ ಕುಡಿದು ಅಜ್ಜಿಮನೆಯವರನ್ನು ಹೆದರಿಸಲು ಪ್ರಯತ್ನ ನಡೆಸಿದ್ದ. ಆದರೆ, ಕ್ರಿಮಿನಾಶಕ ಸೇವಿಸಿದ ಕಾಂತರಾಜ್ ಜಮೀನಿನಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾನೆ.
ಅರಮನೆಗೆ ಪ್ರವೇಶ ನಿಷಿದ್ಧ : ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದಾದೇವಿ ಅವರಿಂದ ದತ್ತುಪುತ್ರ ಸ್ವೀಕಾರ ಸಮಾರಂಭ ಫೆ. 23ರಂದು ನಡೆಯಲಿದೆ. ಆದ್ದರಿಂದ ಫೆ. 22ರ ಮಧ್ಯಾಹ್ನ 1.30ರ ನಂತರ ಮತ್ತು ಫೆ. 23ರಂದು ಅರಮನೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.












Click it and Unblock the Notifications