Mysuru: ಅರ್ಧಗಂಟೆಯಲ್ಲೇ 600 ಭಾರತ್ ಅಕ್ಕಿ ಚೀಲ ಖಾಲಿ!
ಮೈಸೂರು: ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಭಾರತ್ ಅಕ್ಕಿಗೆ ಬೇಡಿಕೆ ಹೆಚ್ಚಾಗಿದೆ. ಕೇವಲ ಅರ್ಧಗಂಟೆಯಲ್ಲಿ 600 ಬ್ಯಾಗ್ ಭಾರತ್ ರೈಸ್ ಮಾರಾಟವಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮತ್ತಷ್ಟು ನೆರವು ನೀಡುವ ನಿಟ್ಟಿನಲ್ಲಿ ಅಗತ್ಯ ಆಹಾರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಮೈಸೂರಿನಲ್ಲಿಯೂ ಚಾಲನೆ ದೊರೆತಿದೆ.

ನಗರದ ಹೆಬ್ಬಾಳಿನ ಕಾವೇರಿ ವೃತ್ತ ಮತ್ತು ಎನ್.ಆರ್. ಮೊಹಲ್ಲಾದ ಮಾರುತಿ ಸರ್ಕಲ್‌ನಲ್ಲಿ ಭಾರತ್ ಅಕ್ಕಿಯನ್ನು ಸಂಸದ ಪ್ರತಾಪ ಸಿಂಹ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿತರಣೆ ಮಾಡಿದರು. ಕಾವೇರಿ ವೃತ್ತದಲ್ಲಿ 10 ಕೆಜಿಯ 300 ಬ್ಯಾಗ್‌ಗಳನ್ನು ಮಾರಾಟ ಮಾಡಿದರೆ, ಮಾರುತಿ ಸರ್ಕಲ್‌ನಲ್ಲಿ 300 ಬ್ಯಾಗ್‌ಗಳನ್ನು ಮಾರಾಟ ಮಾಡಲಾಯಿತು.
ಭಾರತ್ ಅಕ್ಕಿಯನ್ನು ಪಡೆಯಲು ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಅರ್ಧ ಗಂಟೆಯೊಳಗೆ ಟ್ರಕ್‌ನಲ್ಲಿ ತಂದಿದ್ದ ಬ್ಯಾಗ್‌ಗಳು ಖಾಲಿಯಾದವು. ಒಂದು ಕೆ.ಜಿ ಅಕ್ಕಿಗೆ ₹29 ದರ ನಿಗದಿ ಮಾಡಲಾಗಿದೆ.
ಹೆಬ್ಬಾಳಿನ ಕಾವೇರಿ ಸರ್ಕಲ್‌ನಲ್ಲಿ ಭಾರತ್ ಅಕ್ಕಿ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ ಸಂಸದ ಪ್ರತಾಪ ಸಿಂಹ ಮಾತನಾಡಿ, ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಭಾರತ್ ಅಕ್ಕಿ ಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ನಿರಂತರವಾಗಿ ಭಾರತ್ ಅಕ್ಕಿ ಮಾರಾಟವಾಗಲಿದೆ ಎಂದು ಹೇಳಿದರು.
ಇಂತಹ ಜನಪರ ಕಾರ್ಯಕ್ರಮಗಳನ್ನು ಮೋದಿ ನೇತೃತ್ವದ ಸರಕಾರ ಮಾಡುತ್ತಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಭಾರತ್ ಅಕ್ಕಿ ದುರುಪಯೋಗವಾಗದಂತೆ ಮೊಬೈಲ್ ಸಂಖ್ಯೆ ಪಡೆದು ಒಬ್ಬರಿಗೆ ಒಂದೇ ಬ್ಯಾಗ್ ನೀಡಲಾಗುವುದು ಎಂದರು.












Click it and Unblock the Notifications