ಅದ್ದೂರಿ ಮೈಸೂರು ದಸರಾ ಆಚರಣೆಯತ್ತ ಎಲ್ಲರ ಚಿತ್ತ!
ಮೈಸೂರು, ಜುಲೈ 24; ಐತಿಹಾಸಿಕ ಮೈಸೂರು ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಂಡಿದೆ. ಇದು ಮೈಸೂರಿನ ಮಂದಿ ಮಾತ್ರವಲ್ಲದೇ ಎಲ್ಲರೂ ಖುಷಿಪಡುವಂತಾಗಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸರಳವಾಗಿ ದಸರಾ ಆಚರಣೆ ಮಾಡಿರುವುದು ಮತ್ತು ಸಾರ್ವಜನಿಕರಿಗೆ ಅವಕಾಶ ನೀಡದೆ ಇದ್ದುದ್ದು ಜನರಲ್ಲಿ ನಿರಾಸೆಯನ್ನು ಮೂಡಿಸಿತ್ತು.
ಇದು ದಸರಾ ಸುತ್ತ ಬದುಕು ಕಟ್ಟಿಕೊಂಡಿದ್ದವರ ಮೇಲೆಯೂ ಪರಿಣಾಮ ಬೀರಿತ್ತು. ದಸರಾ ಮತ್ತು ಪ್ರವಾಸಿಗರನ್ನು ನಂಬಿ ಬದುಕು ಕಟ್ಟಿಕೊಂಡಿದ್ದ ಮೈಸೂರು ನಗರದ ವ್ಯಾಪಾರಿಗಳು, ಹೋಟೆಲ್ ಉದ್ಯಮ, ಟಾಂಗಾ ವಾಲಾಗಳು, ಟ್ರಾವೆಲ್ಸ್ ಹೀಗೆ ಹಲವು ಕ್ಷೇತ್ರದ ಜನ ದಸರಾ ಅದ್ಧೂರಿಯಾಗಿ ನಡೆಯದ ಕಾರಣ ಸಂಕಷ್ಟ ಅನುಭವಿಸಿದ್ದರು.
ಜುಲೈ 19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮೈಸೂರು ದಸರಾ ಮಹೋತ್ಸವ 2022ರ ಆಚರಣೆಯ ಅಂಗವಾಗಿ ಉನ್ನತ ಮಟ್ಟದ ಸಭೆ ನಡೆಯಿತು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅದ್ಧೂರಿ ದಸರಾ, ಜನರಲ್ಲಿ ಸಂಭ್ರಮ
ಹಾಗೆ ನೋಡಿದರೆ ಆಷಾಢ ಕಳೆಯುತ್ತಿದ್ದಂತೆಯೇ ಮೈಸೂರಿನಲ್ಲಿ ದಸರಾ ಕಳೆ ಆರಂಭವಾಗುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಕೊರೊನಾ ಕಾರಣ ಎರಡು ವರ್ಷಗಳ ಕಾಲ ಇಂತಹ ಸಂಭ್ರಮ ಕಂಡಿರಲಿಲ್ಲ. ಆದರೆ ಈ ಬಾರಿ ಹಿಂದಿನಂತೆ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನ ಮಾಡಿರುವುದು ಮತ್ತೆ ಜನರಲ್ಲಿ ಸಡಗರ ಸಂಭ್ರಮ ಮೂಡುವಂತೆ ಮಾಡಿದೆ. ಅಷ್ಟೇ ಅಲ್ಲದೆ ದಸರಾ ಸುತ್ತ ತಮ್ಮ ಬದುಕು ಕಟ್ಟಿಕೊಂಡಿದ್ದ ವಿವಿಧ ಉದ್ದಿಮೆ ಕ್ಷೇತ್ರಗಳಲ್ಲಿಯೂ ಆಶಾಭಾವನೆ ಮೂಡಿದೆ.

ಶಾಸಕರು ನೀಡಿದ ಸಲಹೆ ಏನು?
ಈ ಬಾರಿ ಭಾರತದ 75ನೇ ವರ್ಷ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ದಸರಾ ಆಚರಣೆ ಯಾಗಿರುವುದರಿಂದ ದೇಶ ಮತ್ತು ವಿಶ್ವಮಟ್ಟದಲ್ಲಿ ದಸರಾವನ್ನು ಕೊಂಡೊಯ್ದು ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುವ ಕೆಲಸಕ್ಕೂ ಸರ್ಕಾರ ಮುಂದಾಗುವಂತೆ ಮಾಡುವ ಕೆಲಸಗಳು ನಡೆಯುತ್ತಿವೆ. ಎಲ್ಲ ದೇಶದ ಭಾರತದ ರಾಯಭಾರಿಗಳ ಮೂಲಕ ದಸರಾ ಕುರಿತು ಪ್ರಚಾರ ಮಾಡಲು ಮತ್ತು ಆಯಾ ದೇಶಗಳ ಜನರು ಮೈಸೂರಿಗೆ ಬರಲು ವಿಶೇಷ ಪ್ಯಾಕೇಜ್ ಮಾಡಲು ಕ್ರಮ ಕೈಗೊಳ್ಳುವಂತೆ ಮೈಸೂರಿನ ಶಾಸಕ ಎಸ್. ಎ. ರಾಮದಾಸ್ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ದಸರಾ ವಿಶೇಷ ಬ್ರಾಂಡ್ ಮಾಡುವ ಚಿಂತನೆ
ಇನ್ನು ಸರ್ಕಾರದ ಗಮನಸೆಳೆದಿರುವ ಶಾಸಕ ರಾಮದಾಸ್ ಅವರು ದಸರಾವನ್ನು ವಿಶೇಷ ಬ್ರಾಂಡ್ ಆಗಿ ಮಾಡಬೇಕು. ದೇಶದ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲೂ ದಸರಾ ರನ್, ಮ್ಯಾರಥಾನ್ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆ ಅಲ್ಲಿನ ಪ್ರವಾಸೋದ್ಯಮದ ಜೊತೆಯಲ್ಲಿ ನಮ್ಮ ಪ್ರವಾಸೋದ್ಯಮ ಜೋಡಿಸಿಕೊಂಡು ಪ್ರಚಾರ ಮಾಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಯೋಗದ ಮೂಲಕ ಮೈಸೂರು ವಿಶ್ವದ ಗಮನ ಸೆಳೆದಿದೆ ಆದರೆ ಕೊರೊನಾ ಕಾರಣದಿಂದ ಮೈಸೂರಿಗೆ ಬರುವ ವಿದೇಶಿಗರ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ಮತ್ತೆ ವಿದೇಶಿಗರನ್ನು ಸೆಳೆಯುವ ಮತ್ತು ಅವರಿಗೆ ಉತ್ತಮ ಆಯ್ದ ಮನೆಗಳಲ್ಲಿರಿಸಿ ಊಟೋಪಚಾರ, ಉಡುಗೆ ತೊಡುಗೆ, ಸಂಸ್ಕೃತಿ ಕಲಿಸುವ ಕೆಲಸವೂ ಆಗಬೇಕಾಗಿದೆ. ಹಾಗೆ ಮಾಡಿದರೆ ಮೈಸೂರು ದಸರಾದೊಂದಿಗೆ ಇಲ್ಲಿನ ಸಂಸ್ಕೃತಿಯನ್ನು ಪರಿಚಯಿಸಲು ಸಾಧ್ಯವಾಗಲಿದೆ.

ಮೈಸೂರನ್ನು ಟೂರಿಸ್ಟ್ ಹಬ್ ಮಾಡಲು ಕ್ರಮ
ಇದೆಲ್ಲದರ ನಡುವೆ ಭಾರತದ 75 ವರ್ಷಗಳ ಕಾಲದ ಸಾಧನೆಯನ್ನು ಸ್ಥಳೀಯ ಕಲಾವಿದರ ಜತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರನ್ನು ಸೇರಿಸಿ ಪ್ರತಿದಿನ ಒಂದಾದರೂ ಕಾರ್ಯಕ್ರಮ ನೀಡಬೇಕೆನ್ನುವ ಉದ್ದೇಶವಿದ್ದು, ಮೈಸೂರು ದಸರಾ ಮೂಲಕವಾಗಿ ವಿಶ್ವದಲ್ಲಿ ಮೈಸೂರನ್ನು ಟೂರಿಸ್ಟ್ ಹಬ್ ಆಗಿ ಮಾಡಲು ಬೇಕಾದ ಅಗತ್ಯ ಕೆಲಸಗಳನ್ನು ಮಾಡಲಾಗುತ್ತಿದೆ.
ಕಳೆದ ಬಾರಿ ದಸರಾಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಕಾರ್ಯಕ್ರಮ ಹೊರತು ಪಡಿಸಿ ಉಳಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿ ಗಜಪಯಣದಿಂದ ಆರಂಭವಾಗಿ ಅಂತಿಮ ಪಂಜಿನ ಕವಾಯತ್ ವರೆಗೆ ಎಲ್ಲ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ದಸರಾ ಪ್ರಾಧಿಕಾರ ರಚನೆಯತ್ತ ತೀರ್ಮಾನ
ಈ ಬಾರಿಯ ದಸರಾ ಮಹೋತ್ಸವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತೆ ಮಾಡಲು ಸರ್ಕಾರ ಮುಂದಾಗಿದ್ದು, ದಸರಾ ಪ್ರಾಧಿಕಾರ ರಚನೆ ಬಗ್ಗೆಯೂ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಒಟ್ಟಾರೆ ಈ ಬಾರಿಯ ದಸರಾದತ್ತ ಭಾರೀ ನಿರೀಕ್ಷೆ ಮಾಡಿಕೊಳ್ಳಲಾಗುತ್ತಿದೆ. ಹಿಂದಿನ ಐತಿಹಾಸಿಕ ದಸರಾದ ವೈಭವ ಮರಳುವ ಲಕ್ಷಣ ಕಾಣುತ್ತಿದೆ. ಹೀಗಾಗಿ ಸ್ಥಳೀಯರು ಮತ್ತು ಪ್ರವಾಸಿಗರು ಮೈಸೂರು ದಸರಾದಲ್ಲಿ ಭಾಗವಹಿಸಿ ಸಂಭ್ರಮಿಸಲು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.












Click it and Unblock the Notifications