ಮೈಸೂರಿನಲ್ಲಿ ಕಾನ್ ಸ್ಟೆಬಲ್ ಮನೆಯಲ್ಲೇ 2 ಕೆ.ಜಿ ಚಿನ್ನ ಕಳ್ಳತನ
ಮೈಸೂರು, ಸೆಪ್ಟೆಂಬರ್ 1: ನಕಲಿ ಕೀ ಬಳಸದೆ, ಮನೆಯ ಹಿಂಬಾಗಿಲು, ಮುಂಬಾಗಿಲು ಯಾವುದನ್ನೂ ಮೀಟಿ ತೆರೆಯದೆ ಮನೆಯಲ್ಲಿನ ಅಲ್ಮೆರಾದಲ್ಲಿಟ್ಟಿದ್ದ ಎರಡು ಕೆ.ಜಿ ಚಿನ್ನ ಕಳ್ಳತನವಾಗಿರುವ ಸಂಗತಿ ಸರಸ್ವತಿಪುರಂನಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಅದೂ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಮನೆಯಲ್ಲೇ ಈ ರೀತಿ ಆಗಿರುವುದು ಅಚ್ಚರಿ ಮೂಡಿಸಿದೆ.
ಸರಸ್ವತಿಪುರಂನಲ್ಲಿರುವ ವಿಜಿ ಕುಮಾರ್ ಮತ್ತು ವನಜಾಕ್ಷಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ವಿಜಿ ಕುಮಾರ್ ಅವರು ವ್ಯಾಪಾರಿ ಆಗಿದ್ದು, ಅವರ ಪತ್ನಿ ವನಜಾಕ್ಷಿ ಮೈಸೂರು ನಗರ ಪೊಲೀಸ್ ವಿಭಾಗದಲ್ಲಿ ಹೆಡ್ ಕಾನ್ ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಜಿ ಕುಮಾರ್ ಅವರ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಮಧ್ಯೆ ನಿನ್ನೆ ಸೋಮವಾರ ಮಧ್ಯಾಹ್ನ ಅವರನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಮನೆಯಲ್ಲಿದ್ದ 2 ಕೆ.ಜಿಯಷ್ಟು ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಒಂದೂವರೆ ಕೆ.ಜಿಯಷ್ಟು ಚಿನ್ನಾಭರಣ ಇವರದ್ದಾಗಿದ್ದು, ಅರ್ಧ ಕೆ.ಜಿಯಷ್ಟು ಚಿನ್ನ ಇವರ ಸಂಬಂಧಿಕರು ತಮ್ಮ ಮನೆ ರಿಪೇರಿಯಲ್ಲಿದೆ ಎಂದು ಇವರ ಮನೆಯಲ್ಲಿಯೇ ಇರಿಸಿದ್ದರು ಎನ್ನಲಾಗಿದೆ. ಆದರೆ ಕಳ್ಳತನ ಮಾತ್ರ ವಿಚಿತ್ರ ರೀತಿಯಲ್ಲಿ ನಡೆದಿದೆ. ಮನೆಗೆ ನಕಲಿ ಕೀ ಬಳಕೆಯಾಗಿಲ್ಲ, ಬಾಗಿಲನ್ನು ಮೀಟಿಲ್ಲ, ಆದರೂ ಚಿನ್ನ ಕಳ್ಳತನ ನಡೆದಿದೆ.

ಸರಸ್ವತಿಪುರಂ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಜಯ್ ಕುಮಾರ್ ಮತ್ತು ಭವ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ. ಯಾವ ಕುರುಹು ಕೂಡ ಕಂಡು ಬರುತ್ತಿಲ್ಲ ಎನ್ನಲಾಗಿದ್ದು, ಮನೆಯವರೇ ಯಾರೋ ತೆಗೆದಿರಬೇಕು ಅಥವಾ ಅವರ ಪರಿಚಿತರು ಕೃತ್ಯ ನಡೆಸಿರಬೇಕೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.











Click it and Unblock the Notifications