ಮಹಾರಾಷ್ಟ್ರದ ರಾಜಕೀಯದಲ್ಲಿ ಬಿಸಿ ಮುಟ್ಟಿಸಿದ ನವಾಬ್ ಮಲಿಕ್ ಯಾರು, ಆಸ್ತಿ ಎಷ್ಟು?
ಮುಂಬೈ ಫೆಬ್ರವರಿ 23: ಮಹಾರಾಷ್ಟ್ರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ವಕ್ತಾರ ನವಾಬ್ ಮಲಿಕ್ ಅವರನ್ನು ಇಡಿ ಬಂಧಿಸಿದೆ. ಬೆಳಗ್ಗೆಯಿಂದ ಇಡಿ ತಂಡ ಮಲಿಕ್‌ನನ್ನು ವಿಚಾರಣೆ ನಡೆಸುತ್ತಿದೆ. ಸುಮಾರು ಏಳು ಗಂಟೆಗಳ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆ. ನವಾಬ್ ಮಲಿಕ್ ಬಂಧನದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಸಿ ಏರಿದೆ. ಆಡಳಿತಾರೂಢ ಶಿವಸೇನೆ ಮತ್ತು ಎನ್‌ಸಿಪಿ ಮಲಿಕ್ ವಿರುದ್ಧದ ಇಡಿ ಕ್ರಮವನ್ನು ಕೇಂದ್ರದ ಆದೇಶದ ಪಿತೂರಿ ಎಂದು ಹೇಳಿಕೊಂಡಿವೆ. ಬಹಳ ಸಮಯದಿಂದಲೂ ನವಾಬ್ ಮಲಿಕ್ ರಾಜಕೀಯವಾಗಿ ಚರ್ಚೆಯಲ್ಲಿದ್ದಾರೆ. ಅವರ ವಿರುದ್ಧ ಕೈಗೊಂಡ ಕ್ರಮ ದೊಡ್ಡ ಸಂಚು ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ನವಾಬ್ ಮಲಿಕ್ ಯಾರು ಮತ್ತು ಅವರು ಎಷ್ಟು ಆಸ್ತಿ ಹೊಂದಿದ್ದಾರೆ?. ಇದಕ್ಕೂ ಮುನ್ನ ಅವರ ವಿರುದ್ಧ ಯಾವ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ನೋಡೋಣ.

ದೇವೇಂದ್ರ ಫಡ್ನವಿಸ್ ಗಂಭೀರ ಆರೋಪ
ನವಾಬ್ ಮಲಿಕ್ ಅವರು ಕುರ್ಲಾದಲ್ಲಿ ಹಲವು ವರ್ಷಗಳ ಹಿಂದೆ ಅತ್ಯಂತ ಅಗ್ಗದ ಬೆಲೆಗೆ ಖರೀದಿಸಿದ ಜಮೀನಿಗೆ ಸಂಬಂಧಿಸಿದಂತೆ ಇಡಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಭೂಗತ ಪಾತಕಿಗಳಿಂದ ಈ ಜಮೀನನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮಲಿಕ್ ವಿರುದ್ಧದ ಈ ಗಂಭೀರ ಆರೋಪವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೆಲವು ತಿಂಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದರು. ಮಲಿಕ್ ಈ ಜಮೀನಿನ ಮೌಲ್ಯವನ್ನು ಕಡಿಮೆ ತೋರಿಸಿದ್ದಾರೆಂದು ಫಡ್ನವೀಸ್ ಹೇಳಿದ್ದರು.
ಇಂದು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರನ್ನು ಇಡಿ ವಿಚಾರಣೆಗೊಳಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಇಕ್ಬಾಲ್ ಕಸ್ಕರ್‌ನ ಸಾಕ್ಷ್ಯದ ಮೇರೆಗೆ ಇಡಿ ನವಾಬ್ ಮಲಿಕ್‌ನನ್ನು ವಿಚಾರಣೆಗೊಳಪಡಿಸಿದೆ ಎಂದು ಹೇಳಲಾಗುತ್ತಿದೆ.

ಎನ್‌ಸಿಬಿಯ ಮೇಲೆ ನವಾಬ್ ಮಲಿಕ್ ಗಂಭೀರ ಆರೋಪ
ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಹೆಸರು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸದಲ್ಲ. ಆದರೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಕ್ರೂಸ್ ಡ್ರಗ್ ಕೇಸ್ ವಿಚಾರವಾಗಿ ಬಂಧಿಸಿದಾಗ ಅವರು ಎನ್‌ಸಿಬಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದರು. ಈ ವಿಷಯದಲ್ಲಿ ನವಾಬ್ ಮಲಿಕ್ ಬಹಿರಂಗವಾಗಿಯೇ ಆರೋಪಗಳನ್ನು ಮಾಡಿದರು. ಈ ವೇಳೆ ನವಾಬ್ ಮಲಿಕ್ ಭಾರೀ ಸುದ್ದಿಯಲ್ಲಿದ್ದರು. ಅವರು ಎನ್‌ಸಿಬಿಯ ಆಗಿನ ವಲಯ ನಿರ್ದೇಶಕರ ವಿರುದ್ಧ ಹರಿಹಾಯ್ದಿದ್ದರು. ಇಡೀ ವಿಚಾರದಲ್ಲಿ ಎನ್‌ಸಿಬಿ ಕೂಡ ವಿಚಾರದ ಆಳಕ್ಕೆ ಇಳಿಯಬೇಕಾಯಿತು.

ಸಮೀರ್ ವಾಂಖೆಡೆ ವಿರುದ್ಧ ಆರೋಪಗಳ ಸುರಿಮಳೆ
ಕಳೆದ ಕೆಲ ತಿಂಗಳ ಹಿಂದೆ ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ವಶಕ್ಕೆ ಪಡೆದಿತ್ತು. ನಾನಾ ಆಯಾಮಗಳಲ್ಲಿ ತನಿಖೆ ನಡೆಸಿತ್ತು. ಈ ವೇಳೆ ನವಾಬ್ ಮಲಿಕ್ ಸಂಬಂಧಿಯ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿತ್ತು. ಇದಾದ ಬಳಿಕ ನವಾಬ್ ಮಲಿಕ್ ಎನ್‌ಸಿಬಿ ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳನ್ನು ನಿಲ್ಲಿಸಲೇ ಇಲ್ಲ. ಅಷ್ಟೇ ಅಲ್ಲ, ಸಮೀರ್ ವಾಂಖೆಡೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ನವಾಬ್ ಮಲಿಕ್ ಗಂಭೀರವಾದ ಆರೋಪಗಳನ್ನು ಮಾಡಿದ್ದರು. ವಾಂಖೆಡೆಯಲ್ಲಿ ಧರ್ಮ ಬದಲಿಸಿ ಮದುವೆಯಾಗಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿ ಬಂದಿದ್ದವು. ಮಲಿಕ್ ವಾಂಖೆಡೆಯನ್ನು ವಸೂಲಾತಿ ದಂಧೆ ನಡೆಸುತ್ತಿರುವ ಅಧಿಕಾರಿ ಎಂದೂ ಕರೆದಿದ್ದರು. ನಕಲಿ ದಾಖಲೆಗಳ ಮೂಲಕ ವಾಂಖೆಡೆ ಉದ್ಯೋಗ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

ದೇವೇಂದ್ರ ಫಡ್ನವಿಸ್ ಆರೋಪವೇನು?
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮಲಿಕ್ ಅವರು ಭೂಗತ ಜಗತ್ತಿನ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂಬೈ ಸ್ಫೋಟದ ಆರೋಪಿ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸರ್ದಾರ್ ವಾಲಿ ಶಾ ಖಾನ್ ಇಬ್ಬರನ್ನು ಫಡ್ನವಿಸ್ ಹೆಸರಿಸಿದ್ದರು. ದಾವೂದ್ ಸಹೋದರಿ ಹಸೀನಾ ಪರ್ಕರ್ ಅವರ ಅಂಗರಕ್ಷಕರಾಗಿದ್ದ ಮೊಹಮ್ಮದ್ ಸಲೀಂ ಪಟೇಲ್ ಅವರ ಹೆಸರು ಬಹಿರಂಗಪಡಿಸಿದ್ದರು. ಹಸೀನಾಳ ಸಂಪೂರ್ಣ ಭೂಮಿ ಮೊಹಮ್ಮದ್ ಸಲೀಂ ಪಟೇಲ್ ಹೆಸರಿನಲ್ಲಿದೆ. ಮಲಿಕ್ ಈ ಇಬ್ಬರು ಆರೋಪಿಗಳಿಂದ ಕುರ್ಲಾ ಬಳಿ ಸುಮಾರು ಮೂರು ಎಕರೆ ಜಮೀನು ಖರೀದಿಸಿದ್ದು, ಅದಕ್ಕೆ ಅತ್ಯಂತ ಕಡಿಮೆ ಬೆಲೆ ನೀಡಲಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ. ಜಮೀನು ಖರೀದಿಸಿದಾಗ ಆರೋಪಿಗಳು ಟಾಡಾ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದರು ಎಂದು ಫಡ್ನವೀಸ್ ಬಹಿರಂಗಪಡಿಸಿದ್ದಾರೆ. ಈ ಇಬ್ಬರ ಬಗ್ಗೆ ನವಾಬ್ ಮಲಿಕ್ ಗೆ ಗೊತ್ತಿಲ್ಲವೇ ಎಂದು ಕೇಳಿದ್ದರು. ಅಷ್ಟಕ್ಕೂ ಟಾಡಾ ಆರೋಪಿಗಳಿಂದ ಜಮೀನು ಖರೀದಿಸಿದ್ದು ಏಕೆ?

ಅಲ್ಪಸಂಖ್ಯಾತ ಕಲ್ಯಾಣ ಸಚಿವರ ಸಂಪೂರ್ಣ ವಿವರ
ನವಾಬ್ ಮಲಿಕ್ ಪ್ರಸ್ತುತ ಮಹಾರಾಷ್ಟ್ರದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿದ್ದಾರೆ. ನವಾಬ್ ಮಲಿಕ್ ಮೂಲತಃ ಉತ್ತರ ಪ್ರದೇಶದವರು. ನವಾಬ್ ಮಲಿಕ್ ಅವರ ಕುಟುಂಬವು ಬಲರಾಂಪುರದ ಉತ್ರೌಲಾ ತೆಹಸಿಲ್ ಪ್ರದೇಶದ ಧುಸ್ವಾ ಗ್ರಾಮದಲ್ಲಿ ವಾಸಿಸುತ್ತಿತ್ತು ಮತ್ತು ಇಲ್ಲಿಯೇ ನವಾಬ್ ಮಲಿಕ್ 1959 ರಲ್ಲಿ ಜನಿಸಿದರು. 1970 ರಲ್ಲಿ, ನವಾಬ್ ಮಲಿಕ್ ಅವರ ಕುಟುಂಬ ಸದಸ್ಯರು ಮುಂಬೈಗೆ ತೆರಳಿದರು. ಬಳಿಕ ಅಲ್ಲಿಯೇ ವಾಸಿಸಲು ಪ್ರಾರಂಭಿಸಿದರು. ನವಾಬ್ ಮಲಿಕ್ ತಮ್ಮ ಪ್ರೌಢಶಾಲೆಯನ್ನು ಅಂಜುಮನ್ ಹೈಸ್ಕೂಲ್‌ನಿಂದ ಮತ್ತು ನವಾಬ್ ಮಲಿಕ್ ಬುರ್ಹಾನಿ ಕಾಲೇಜಿನಲ್ಲಿ 12 ನೇ ತರಗತಿಯನ್ನು ಪಡೆದರು.

ನವಾಬ್ ಮಲಿಕ್ ಮಾಡಿದ ಸಾಲವೆಷ್ಟು
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನೀಡಿರುವ ಅಫಿಡವಿಟ್‌ನಲ್ಲಿ ನವಾಬ್ ಮಲಿಕ್ ತಮ್ಮ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಅಫಿಡವಿಟ್ ಪ್ರಕಾರ ನವಾಬ್ ಮಲಿಕ್ ಅವರ ಒಟ್ಟು ಆಸ್ತಿ 5,74,69,000 ಎಂದು ಹೇಳಲಾಗಿದೆ. ಇದರೊಂದಿಗೆ 45 ಲಕ್ಷ ಸಾಲವಿದೆ ಎಂದು ನವಾಬ್ ಮಲಿಕ್ ಹೇಳಿದ್ದಾರೆ. ಇದಲ್ಲದೆ ನವಾಬ್ ಮಲಿಕ್ ಮತ್ತು ಅವರ ಪತ್ನಿ ಮೆಹಜಬೀನ್ ಮಲಿಕ್ ಕೂಡ ಅನೇಕ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಅವರು ಮಲಿಕ್ ಸ್ಟೀಲ್, ಹೀರಾ ಡೈಮಂಡ್, ಮಲಿಕಾ ಇನ್ಫ್ರಾ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಪಾಲನ್ನು ಹೊಂದಿದ್ದಾರೆ. ನವಾಬ್ ಮಲಿಕ್ ತನ್ನ ಪತ್ನಿಯ ಹೆಸರಿನಲ್ಲಿ ಸ್ಕೋಡಾ ಕಾರು ನೋಂದಣಿಯಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇದೀಗ ನವಾಬ್ ಮಲಿಕ್ ಅವರ ಸ್ಥಳೀಯ ಸ್ಥಳವಾದ ಉತ್ತರ ಪ್ರದೇಶದ ಬಲರಾಮ್‌ಪುರದೊಂದಿಗೆ ಸಂಬಂಧವನ್ನು ಮುಂದುವರೆಸಲು ಅವರು ಮತ್ತು ಅವರ ಪತ್ನಿ ಹಲವಾರು ಎಕರೆ ಕೃಷಿಯೋಗ್ಯ ಭೂಮಿಯನ್ನು ಹೊಂದಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದ ಉಸ್ಮಾನಾಬಾದ್‌ನಲ್ಲಿ ಕೃಷಿ ಭೂಮಿಯೂ ಇದೆ.












Click it and Unblock the Notifications