'ನಾವು ಸಾವರ್ಕರ್ ವಿರೋಧಿಯಲ್ಲ, ಆದರೆ...' ಮೌನ ಮುರಿದ ಮನಮೋಹನ್ ಸಿಂಗ್
ಮುಂಬೈ, ಅಕ್ಟೋಬರ್ 17: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವ ಬಿಜೆಪಿ ಪ್ರಣಾಳಿಕೆಯ ಸಂಕಲ್ಪಕ್ಕೆ ಪ್ರತಿಕ್ರಿಯೆ ನೀಡಿದ ಮನಮೋಹನ್ ಸಿಂಗ್, ಸಾವರ್ಕರ್ ಈ ಹೆಗ್ಗಳಿಕೆಗೆ ಸೂಕ್ತರಲ್ಲ ಎಂದಿದ್ದಾರೆ.
"ನಾವು ಸಾವರ್ಕರ್ ಅವರ ವಿರೋಧಿಯಲ್ಲ. ಅವರ ಸಿದ್ಧಾಂತಗಳ ವಿರೋಧಿ. ತಮ್ಮ ಹಿಂದುತ್ವ ಸಿದ್ಧಾಂತವನ್ನು ಎಲ್ಲೆಡೆ ಪ್ರಚಾರ ಮಾಡಲು ಪ್ರಯತ್ನಿಸಿದ ಅವರು ಈ ಗೌರವಕ್ಕೆ ಸೂಕ್ತರಲ್ಲ ಎಂಬುದು ನನ್ನ ಭಾವನೆ" ಎಂದು ಮನಮೋಹನ್ ಸಿಂಗ್ ಹೇಳಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪತ್ರಿಕಾ ಘೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ ಮನಮೋಹನ್ ಸಿಂಗ್, "ನಾವ್ಯಾರೂ ಸಾವರ್ಕರ್ ಅವರ ವಿರೋಧಿಯಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ಸಾವರ್ಕರ್ ಅವರ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಿದ್ದನ್ನು ನಾನು ನೆನಪಿಸುತ್ತೇನೆ. ಆದರೆ ಸಾವರ್ಕರ್ ಅವರ ಹಿಂದುತ್ವ ಸಿದ್ಧಾಂತಕ್ಕೆ ನಮ್ಮ ವಿರೋಧ" ಎಂದು ಸಿಂಗ್ ಹೇಳಿದರು.

ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಚುನಾವನೆಗೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಬಿಜೆಪಿ, ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡುವುದನ್ನೂ ಅದರಲ್ಲಿ ಸೇರಿಸಿತ್ತು. ಅದನ್ನು ವಿಪಕ್ಷಗಳು ಬಲವಾಗಿ ವಿರೋಧಿಸಿದ್ದವು.












Click it and Unblock the Notifications