ಸರ್ಕಾರ ರಚನೆ ವಿಷಯದಲ್ಲಿ ಉದ್ಧವ್ ಠಾಕ್ರೆ ಮಾತೇ ಅಂತಿಮ: ಆದಿತ್ಯ ಠಾಕ್ರೆ
ಮುಂಬೈ, ನವೆಂಬರ್ 1: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಶಿವಸೇನೆ ಶಾಸಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
"ರಾಜ್ಯದಲ್ಲಿ ಸರ್ಕಾರ ರಚನೆ ವಿಳಂಬವಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಆದರೆ ಸರ್ಕಾರ ರಚನೆಯ ಕುರಿತಂತೆ ನಾನು ಮಾತನಾಡಲು ಬಯಸುವುದಿಲ್ಲ. ಈ ವಿಷಯದಲ್ಲಿ ಉದ್ಧವ್ ಜೀ ಅವರ ಮಾತೇ ಅಂತಿಮ" ಎಂದು ವರ್ಲಿ ಶಾಸಕ ಆದಿತ್ಯ ಠಾಕ್ರೆ ಪತ್ರಕರ್ತರಿಗೆ ಹೇಳಿದ್ದಾರೆ.
ಶಿವಸೇನೆ ಇಟ್ಟಿರುವ 50:50 ಒಪ್ಪಂದಕ್ಕೆ ಬರಲು ಬಿಜೆಪಿ ಸಿದ್ಧವಿಲ್ಲ. ಎರಡೂವರೆ ವರ್ಷ ಶಿವಸೇನೆ ಮತ್ತು ಮತ್ತೆರಡೂವರೆ ವರ್ಷ ಬಿಜೆಪಿ ಮುಖ್ಯಮಂತ್ರಿ ಹುದ್ದೆ ಪಡೆಯಬೇಕು ಎಂಬ ಶಿವಸೇನೆಯ ಬೇಡಿಕೆಗೆ ಬಿಜೆಪಿ ಸೊಪ್ಪುಹಾಕುತ್ತಿಲ್ಲ.

ಈ ನಡುವೆ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ತಾನೇ ಇಟ್ಟುಕೊಂಡು ಶಿವಸೇನೆಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ಸಚಿವ ಸಂಪುಟದ ಆಯಕಟ್ಟಿನ ಹುದ್ದೆ ನೀಡಲು ಒಪ್ಪಿಕೊಂಡಿದೆ. ಶಿವಸೇನೆಯಿಂದ ಒಬ್ಬರು, ಬಿಜೆಪಿಯಿಂದ ಒಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲು ಅದು ನಿರ್ಧರಿಸಿದೆ. ಆದರೆ ಇದಕ್ಕೆ ಶಿವಸೇನೆ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ.
ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ.












Click it and Unblock the Notifications