ಅಂಬಾನಿ ಯೋಜನೆಗೆ ನೆರವಾಗಲು 'ಅವನಿ' ಹತ್ಯೆ : ಠಾಕ್ರೆ
ಮುಂಬೈ, ನವೆಂಬರ್ 08: ಉದ್ಯಮಿ ಅನಿಲ್ ಅಂಬಾನಿ ಅವರ ಉದ್ದೇಶಿತ ಯಾವತ್ಮಲ್ ಯೋಜನೆ ಅನುಷ್ಠಾನಕ್ಕಾಗಿ ಅವನಿ ಎಂಬ ಹೆಣ್ಣುಹುಲಿಯನ್ನು ಬಲಿಪಡೆಯಲಾಗಿದೆ.
ಕೇಂದ್ರ ಸರ್ಕಾರದ ಅಣತಿಯಂತೆ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ಈ ಹತ್ಯೆಯ ನೇರ ಹೊಣೆ ಹೊರಬೇಕಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
ಅನಿಲ್ ಅಂಬಾನಿ ಯೋಜನೆಯನ್ನು ಉಳಿಸುವ ಸಲುವಾಗಿ ಅವನಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸರ್ಕಾರ ತನ್ನ ಆತ್ಮಸಾಕ್ಷಿಯನ್ನು ಅಂಬಾನಿಗೆ ಮಾರಿಕೊಂಡಿದೆ" ಎಂದು ಠಾಕ್ರೆ ಟೀಕಿಸಿದರು

ಅವನಿಯಿಂದ ಮೃತಪಟ್ಟವರ ಬಗ್ಗೆ ನನಗೆ ಅನುಕಂಪವಿದೆ. ಆದರೆ ಇದು ವಿಶ್ವಾದ್ಯಂತ ನಡೆಯುತ್ತಿದೆ. ಜನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಾಗ, ಆಸುಪಾಸಿನಲ್ಲಿ ಸಹಜವಾಗಿಯೇ ಅವು ಮನುಷ್ಯರ ಮೇಲೆ ದಾಳಿ ಮಾಡುತ್ತವೆ" ಎಂದು ಹೇಳಿದ್ದಾರೆ. ಆದರೆ ಅದಕ್ಕಾಗಿ ಅವನಿಯನ್ನು ಹತ್ಯೆ ಮಾಡುವ ಅಗತ್ಯವಿರಲಿಲ್ಲ ಎಂದಿದ್ದಾರೆ.
ರಾಜ್ ಠಾಕ್ರೆ ಆರೋಪಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಅನಿಲ್ ಅಂಬಾನಿ ನೇತೃತ್ವದ ಉದ್ಯಮ ಸಮೂಹದ ವಕ್ತಾರರು, "ನಮ್ಮ ಉದ್ಯಮ ಸಮೂಹ ಯಾವತ್ಮಲ್ ಜಿಲ್ಲೆಯಲ್ಲಿ ಯಾವುದೇ ಯೋಜನೆ ಹೊಂದಿಲ್ಲ" ಎಂದಿದ್ದಾರೆ.
ಆದರೆ, ಅಲ್ಲಿನ ಜಿಲ್ಲಾಡಳಿತ ನೀಡಿರುವ ಹೇಳಿಕೆ ಪ್ರಕಾರ, ಉದ್ದೇಶಿತ ಯೋಜನೆಯ ಜಾಗ, ಹುಲಿ ಹತ್ಯೆಯಾದ ಸ್ಥಳ ರಾಲೇಗಾಂವ್ ಮಾರ್ಗ ಸಮೀಪದಲ್ಲೇ ಇದೆ. ಆದರೆ, 13 ಮಂದಿಯನ್ನು ಕೊಂದ ನರಭಕ್ಷಕ ಹುಲಿ ಹತ್ಯೆ ಮತ್ತು ಯೋಜನೆಗೆ ಸಂಬಂಧ ಇಲ್ಲ ಎಂದಿದೆ.












Click it and Unblock the Notifications