ಹತ್ಯೆಯಾದ ನರಭಕ್ಷಕಿ 'ಅವನಿ' ವಾರದಿಂದ ಆಹಾರವನ್ನೇ ಸೇವಿಸಿರಲಿಲ್ಲ!
ಮುಂಬೈ, ನವೆಂಬರ್ 8: ಎರಡು ವರ್ಷಗಳಲ್ಲಿ 13 ಜನರನ್ನು ಕೊಂದ ಕಾರಣಕ್ಕೆ 'ನರಭಕ್ಷಕಿ' ಹಣೆಪಟ್ಟಿಯೊಂದಿಗೆ ಗುಂಡೇಟಿಗೆ ಬಲಿಯಾದ ಹೆಣ್ಣು ಹುಲಿ 'ಅವನಿ' ಒಂದು ವಾರಕ್ಕೂ ಹೆಚ್ಚು ಸಮಯದಿಂದ ಏನನ್ನೂ ತಿಂದಿರಲಿಲ್ಲ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.
ಅವನಿಯನ್ನು ಕೊಲ್ಲುವ ಒಂದು ವಾರ ಮುಂಚೆಯಿಂದಲೂ ಆಕೆ ಆಹಾರ ಸೇವಿಸದೆ ಹಸಿವಿನಿಂದಲೇ ಇದ್ದಳು. ಅವನಿಯ 11 ತಿಂಗಳ ಒಂದು ಹೆಣ್ಣು ಮತ್ತು ಒಂದು ಗಂಡು ಮರಿ ಆಕೆಯ ಹತ್ಯೆಯ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಈ ಮರಿಗಳೂ ಕೂಡ ಒಂದು ವಾರದಿಂದ ಆಹಾರ ತಿಂದಿದ್ದವೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಮಿಡ್ ಡೇ ಪತ್ರಿಕೆಯ ವರದಿ ಪ್ರಕಾರ, ಅವನಿಯ ಹೊಟ್ಟೆಯಲ್ಲಿ ಯಾವ ಆಹಾರ ಪದಾರ್ಥವೂ ಇರಲಿಲ್ಲ ಎನ್ನುವುದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ನರಭಕ್ಷಕ ಅವನಿ ಹಲವು ದಿನಗಳಿಂದ ಏನನ್ನೂ ತಿಂದಿರಲಿಲ್ಲ ಎನ್ನುವುದನ್ನು ಇದು ಸೂಚಿಸಿದೆ.
ಅವನಿ ಹತ್ಯೆಯಾದ ಬಳಿಕ ವಾರದಿಂದಲೂ ಆಕೆಯ ಮರಿಗಳು ಆಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕಳವಳದ ಧ್ವನಿ ಎತ್ತಿದ್ದಾರೆ.
ಈ ಮರಿಗಳು ಮತ್ತಷ್ಟು ಹಸಿವಿನಿಂದ ನರಳುವಂತಾಗಬಾರದು ಎಂಬ ಉದ್ದೇಶದಿಂದ ಕಾಡಿನ ಅಲ್ಲಲ್ಲಿ ಮಾಂಸದ ತುಣುಕುಗಳನ್ನು ಇರಿಸುತ್ತಿದ್ದಾರೆ.

ಸಣ್ಣ ಪುಟ್ಟ ಬೇಟೆಯಾಡಬಲ್ಲವು
ಹುಲಿ ಮರಿಗಳು ಹಂದಿ, ನೀಲಗಾಯಿ ಜಿಂಕೆ ಮರಿಗಳು ಮತ್ತು ಮೊಲಗಳಂತಹ ಸಣ್ಣ ಪ್ರಾಣಿಗಳನ್ನು ಕೊಂದು ತಿಂದು ದೀರ್ಘಕಾಲ ಬದುಕಬಲ್ಲವು. ನಾವು ಅವುಗಳನ್ನು ಈಗಲೇ ಅಥವಾ ಸ್ವಲ್ಪ ಸಮಯದ ಬಳಿಕ ಸೆರೆ ಹಿಡಿಯುತ್ತೇವೆ. ಈ ಮರಿಗಳಿಗೆ ಏನಾದರೂ ಆದರೆ ನಾವು ಅದನ್ನು ಸಹಿಸಿಕೊಳ್ಳುವುದು ಕಷ್ಟ ಎಂದು ಅರಣ್ಯ ಸಂರಕ್ಷಣೆ ವಿಭಾಗದ (ವನ್ಯಜೀವಿ) ಹೆಚ್ಚವರಿ ಪ್ರಧಾನ ಮುಖ್ಯಸ್ಥ ಸುನಿಲ್ ಲಿಮಾಯೆ ಹೇಳಿದ್ದಾರೆ.

ಚರ್ಮದ ಮಾದರಿ ರವಾನೆ
'ಅವನಿ'ಗೆ ಗುಂಡಿಕ್ಕಿದ ಸ್ಥಳದಲ್ಲಿ ದೊರೆತ ಆಕೆಯ ಚರ್ಮದ ಮಾದರಿಗಳನ್ನು ನಾಗಪುರದ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರಾಸಾಯನಿಕ ವಿಶ್ಲೇಷಣೆಗಾಗಿ ರವಾನಿಸಲಾಗಿದೆ. ಕೊಲ್ಲಲು ಬಳಸಲಾದ ಆಯುಧಗಳನ್ನೂ ಕಳುಹಿಸಲಾಗಿದೆ. ಆ ಚರ್ಮದಲ್ಲಿ ಅನಸ್ತೇಷಿಯಾ ಅಥವಾ ಮತ್ತು ಬರಿಸುವ ಔಷಧಿಗಳ ಅಂಶಗಳು ಇರುತ್ತವೆಯೇ ಎಂಬುದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ.

ಶೂಟರ್ ತಂದೆಯ ಆಕ್ರೋಶ
ನರಭಕ್ಷಕಿ ಅವನಿಯನ್ನು ಹತ್ಯೆ ಮಾಡಿದ ಶೂಟರ್ ಅಸ್ಘರ್ ಅಲಿ ಅವರ ತಂದೆ ಶಫತ್ ಅಲಿ ಖಾನ್, ಅರಣ್ಯ ಇಲಾಖೆಯ ಕಾರ್ಯಾಚರಣೆಯನ್ನು ಟೀಕಿಸುತ್ತಿರುವವರಿಗೆ ವಾಸ್ತವದ ಅರಿವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಣಿದಯಾ ಸಂಘಟನೆಗಳ ಕಾರ್ಯಕರ್ತರು ಮಾಡುತ್ತಿರುವ ಆಧಾರ ರಹಿತ ಆರೋಪಗಳನ್ನು ಹೊರಕ್ಕೆಳೆಯುವುದಾಗಿ ಅವರು ಹೇಳಿದ್ದಾರೆ.
ಹುಲಿಯನ್ನು ಹತ್ಯೆ ಮಾಡುವ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು 'ಕೊಲೆಗಡುಕರು' ಎಂದು ಕರೆದಿರುವ ಸಚಿವೆ ಮೇನಕಾ ಗಾಂಧಿ ವಿರುದ್ಧ ಕಿಡಿ ಕಾರಿರುವ ಅಲಿಖಾನ್, ತಮ್ಮ ಮಗನ ವಿರುದ್ಧ ಮಾನಹಾನಿಯುಂಟಾಗುವ ಮಟ್ಟದ ಆರೋಪ ಮಾಡಿದರೆ ಅಗತ್ಯ ಬಿದ್ದರೆ ಕಾನೂನು ಸಮರಕ್ಕೂ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಎರಡು ವರ್ಷಗಳಿಂದ ನರಭಕ್ಷಕ
ಯವಾತ್ಮಾಲ್ ಅರಣ್ಯದಲ್ಲಿದ್ದ ಆರು ವರ್ಷ ವಯಸ್ಸಿನ 'ಅವನಿ' ಕಳೆದ ಎರಡು ವರ್ಷಗಳಿಂದ ನರಭಕ್ಷಕ ಹುಲಿಯಾಗಿ ಪರಿವರ್ತನೆಯಾಗಿತ್ತು. ಅವನಿಯ ಹಾವಳಿ ತಡೆಯಲಾರದೆ ಹಲವರು ಆನ್ ಲೈನ್ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ಈ ಹುಲಿಯನ್ನು 'ಕಂಡಲ್ಲಿ ಗುಂಡಿಕ್ಕುವ ಆದೇಶ'ವನ್ನು ನೀಡಿತ್ತು.

ಮನುಷ್ಯರ ಮಾಂಸದ ರುಚಿ
ಎರಡು ಮರಿಗಳನ್ನು ಹೊಂದಿರುವ ಅವನಿ ಸುಮಾರು 150 ಸಿಬ್ಬಂದಿ, ಆನೆಗಳು, ಹುಲಿ ಹಿಡಿಯುವ ಪರಿಣಿತರು, ಶೂಟರ್ ಗಳಿಗೆ ಮೂರು ತಿಂಗಳಿನಿಂದ ಸಿಗದೆ ತಪ್ಪಿಸಿಕೊಳ್ಳುತ್ತಿತ್ತು. ಅವನಿಯನ್ನು ಜೀವಂತವಾಗಿ ಹಿಡಿಯುವ ಎಲ್ಲಾ ಪ್ರಯತ್ನವೂ ವಿಫಲವಾಗಿದ್ದವು. 2012 ರಲ್ಲಿ ಯವಾತ್ಮಾಲ್ ಕಾಡಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ 'ಅವನಿ'ಗೆ ಕಳೆದ ಎರಡು ವರ್ಷಗಳಿಂದ ಮನುಷ್ಯರ ಮಾಂಸದ ರುಚಿ ಹತ್ತಿತ್ತು. ಇದರಿಂದಾಗಿ ಸುತ್ತಮುತ್ತಲ ಗ್ರಾಮದ ಜನರು ನಿದ್ದೆಗೆಡಬೇಕಾಯಿತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications