ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯೇ ಮುಂದಿನ ಮುಖ್ಯಮಂತ್ರಿ: ಕಂಡಿಷನ್ಸ್ ಅಪ್ಲೈ!
ಮುಂಬೈ, ನವೆಂಬರ್.26: ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳೆಲ್ಲ ಸೇರಿಕೊಂಡು ಭಾರತೀಯ ಜನತಾ ಪಕ್ಷಕ್ಕೆ ಸರಿಯಾಗಿ ಪಾಠ ಕಲಿಸಿವೆ. ಬಹುಮತವಿಲ್ಲದೇ, ಶಾಸಕರ ಬೆಂಬಲವೂ ಇಲ್ಲದೇ ಸರ್ಕಾರ ರಚಿಸಲು ಮುಂದಾದ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ.
ಹೈಕಮಾಂಡ್ ಆದೇಶಕ್ಕೋ ಅಥವಾ ಜೊತೆಗೆ ಬಂದ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಮೇಲಿನ ಭರವಸೆ ಮೇಲೆಯೋ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ತಪ್ಪಿಗೆ ದೇವೇಂದ್ರ ಫಡ್ನವೀಸ್ ಈಗ ಸಿಎಂ ಸೀಟ್ ಬಿಟ್ಟು ಕೆಳಗೆ ಇಳಿದಿದ್ದಾರೆ. ಇನ್ನೊಂದೆಡೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಕೂಡಾ ರಾಜೀನಾಮೆ ಸಲ್ಲಿಸಿ ಮತ್ತೆ ಮರಳಿ ಗೂಡು ಸೇರಲು ಹಾತೊರೆಯುತ್ತಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಮಹಾರಾಷ್ಟ್ರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂದಿನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಇಂದೇ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಅವರನ್ನು ಭೇಟಿ ಮಾಡಲಿರುವ ಉದ್ಧವ್ ಠಾಕ್ರೆ, ಸರ್ಕಾರ ರಚಿಸಲು ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಮಿತ್ರಪಕ್ಷಗಳಿಗೆ ಆಹ್ವಾನ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ.

ಡಿಸೆಂಬರ್.01ರಂದು ಉದ್ಧವ್ ಠಾಕ್ರೆ ಪಟ್ಟಾಭಿಷೇಕ
ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷದ ಶಾಸಕರೆಲ್ಲ ಸೇರಿಕೊಂಡು ಜಂಟಿ ಸಭೆ ನಡೆಸಿದರು. ಈ ವೇಳೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರನ್ನು ಮುಂದಿನ ಮುಖ್ಯಮಂತ್ರಿ ಎಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೇ, ಮುಂದಿನ ಡಿಸೆಂಬರ್.01ರಂದು ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತವನ್ನೂ ಫಿಕ್ಸ್ ಮಾಡಲಾಯಿತು. ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಸಲು ಮಿತ್ರಪಕ್ಷದ ಶಾಸಕರು ತೀರ್ಮಾನಿಸಿದ್ದಾರೆ.

ಮಹಾರಾಷ್ಟ್ರ ಹೊಸ ಸಿಎಂಗೂ ಪದ'ಗ್ರಹಣ'
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂದಿನ ಮುಖ್ಯಮಂತ್ರಿ ಎಂದು ಸರ್ವಾನುಮತಗಳಿಂದ ಆಯ್ಕೆಯೇನೋ ಆಗಿದ್ದಾರೆ. ಆದರೆ, ರಾಜಕಾರಣದ ಆಟ ಇಷ್ಟಕ್ಕೇ ಮುಗಿಯೋದಿಲ್ಲ. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಉದ್ಧವ್ ಠಾಕ್ರೆ ಅವರಿಗೆ ಸಿಗೋದೇ ಆರು ತಿಂಗಳ ಅವಕಾಶ. ಏಕೆಂದರೆ ಉದ್ಧವ್ ಠಾಕ್ರೆ ವಿಧಾನಸಭೆಯ ಸದಸ್ಯರಲ್ಲ. ಮುಂದಿನ ಆರು ತಿಂಗಳಿನಲ್ಲೇ ರಾಜ್ಯದ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲೇಬೇಕಾದ ಪರಿಸ್ಥಿತಿಯಿದೆ.

ಬೆಳಗ್ಗೆ 8 ಗಂಟೆಯಿಂದಲೇ ವಿಧಾನಸಭೆ ಕಲಾಪ ಶುರು
ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ಬಿಜೆಪಿ ಶಾಸಕ ಕಾಳಿದಾಸ್ ಕೊಲಂಬಕರ್ ಅವರನ್ನು ನೇಮಕವಾಗಿದ್ದಾರೆ. ನವೆಂಬರ್.27ರಂದು ಬೆಳಗ್ಗೆ 8 ಗಂಟೆಯಿಂದಲೇ ವಿಧಾನಸಭೆ ಕಲಾಪ ಆರಂಭವಾಗಲಿದೆ. ಈ ವೇಳೆ ಮೊದಲಿಗೆ ವಿಧಾನಸಭೆಯ ಎಲ್ಲ ಶಾಸಕರಿಗೆ ಪ್ರಮಾಣವಚನ ಬೋಧಿಸಲಾಗುತ್ತದೆ ಎಂದು ಈಗಾಗಲೇ ನೂತನ ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಲಂಬಕರ್ ತಿಳಿಸಿದ್ದಾರೆ.

ಮುಂಬೈನಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಘಾರ
ಇನ್ನು, ಬಿಜೆಪಿ ಸರ್ಕಾರ ಉರಳುತ್ತಿದ್ದಂತೆ ಶಿವಸೇನೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮುಂಬೈನಲ್ಲಿ ನೆರೆದ ಶಿವಸೇನೆ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ ಕೂಗಿದರು. ಶಿವಸೇನೆ ಮುಖ್ಯಸ್ಥರ ಆಯ್ಕೆ ಬೆನ್ನಲ್ಲೇ ಶಿವಸೇನೆಗೆ ಜೈಕಾರ ಕೂಗುತ್ತಾ, ಪಟಾಕಿ ಸಿಡಿಸಿ ಸಿಹಿ ಹಂಚಿದರು.












Click it and Unblock the Notifications