ಬಿಜೆಪಿ ಜತೆಗಿನ ದೋಸ್ತಿ ಮುಗಿಸುವ ಸುಳಿವು ನೀಡಿದ ಶಿವಸೇನೆ
ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗಿನ ದೋಸ್ತಿಯನ್ನು ಶಿವಸೇನೆ ಮುರಿದುಕೊಳ್ಳುವ ಸೂಚನೆ ನೀಡಿದೆ. ತೈಲ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿರುವ ಶಿವಸೇನೆಯ ಸಂಸದ ಸಂಜಯ್ ರಾವತ್, ಬಿಜೆಪಿ ಜತೆಗಿನ ಮೈತ್ರಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ಜತೆಗೆ ನಿಂತು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿಚಾರಗಳಲ್ಲಿ ಜನರ ಆಕ್ರೋಶ ಎದುರಿಸಲು ನಾವು ಸಿದ್ಧರಿಲ್ಲ. ಬಿಜೆಪಿಯ ನೀತಿಗಳಿಂದಾಗಿ ಜನರನ್ನು ಎದುರಿಸುವುದೇ ಕಷ್ಟವಾಗಿದೆ ಎಂದು ರಾವತ್ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ಶಿವಸೇನೆಯ ಕೇಂದ್ರಸ್ಥಾನ ಮಾತೋಶ್ರೀಯಲ್ಲಿ ಸಭೆಯ ನಂತರ ಸಂಜಯ್ ಟ್ವೀಟ್ ಗಳನ್ನು ಮಾಡಿದ್ದಾರೆ. ಕಾದು, ನೋಡಿ ಎಂದು ಸಂದೇಶವನ್ನು ಜನರಿಗೂ ಹಾಗೂ ಬಿಜೆಪಿಗೂ ಅವರು ನೀಡಿದ್ದಾರೆ. ರೈತರ ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ನಡೆದುಕೊಂಡ ರೀತಿ ಬಗ್ಗೆ ಶಿವಸೇನೆ ಟೀಕಿಸಿದೆ.

ಬಿಜೆಪಿ ಜತೆಗೆ ಮೈತ್ರಿಯೇ ಇದ್ದರೂ ಮಹಾರಾಷ್ಟ್ರ ಹಾಗೂ ಕೇಂದ್ರ ಸರಕಾರದ ವಿರುದ್ಧ ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿದೆ. ಶಿವಸೇನೆ ಮೇಲಿಂದ ಮೇಲೆ ಚುನಾವಣೆಗಳನ್ನು ಸೋಲುತ್ತಿದೆ. ಅದರಲ್ಲೂ ಸ್ಥಳೀಯ ಸಂಸ್ಥೆಗಳಲ್ಲಿನ ಸೋಲಿನಿಂದ ಕಂಗೆಟ್ಟಿದೆ.
ಜತೆಗೆ ಎನ್ ಸಿಪಿ ಜತೆಗೆ ಬಿಜೆಪಿ ನಿಕಟವಾಗುತ್ತಿದೆ ಎಂಬ ಬಗ್ಗೆ ಕೂಡ ಶಿವಸೇನೆಗೆ ಆಕ್ಷೇಪವಿದೆ. ಆದ್ದರಿಂದ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ನೀಡಿದ ಬೆಂಬಲ ಹಿಂಪಡೆಯುವ ಮಾತನಾಡುತ್ತಿದೆ ಶಿವಸೇನೆ.
2014ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 122 ಸ್ಥಾನಗಳನ್ನು ಗೆದ್ದಿತ್ತು. ಆಗ 63 ಸ್ಥಾನಗಳಲ್ಲಿ ಗೆದ್ದಿದ್ದ ಶಿವಸೇನೆ ಜತೆಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತ್ತು. ಸರಳ ಬಹುಮತಕ್ಕೆ 145 ಸ್ಥಾನಗಳ ಅಗತ್ಯವಿತ್ತು.












Click it and Unblock the Notifications