ಬಿಗ್‌ಬಾಸ್ ಮನೆಗೆ Standup ಕಾಮಿಡಿಯನ್ ಮುನಾವರ್ ಫಾರೂಕಿ ಎಂಟ್ರಿ?
ಮುಂಬೈ, ಸೆ. 13: ಸ್ಟಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ತನ್ನ ಶೋಗಳ ಮೂಲಕ ಜನರನ್ನು ರಂಜಿಸಿದ್ದ ಫಾರೂಕಿ ಆಕ್ಷೇಪಾರ್ಹ ಹೇಳಿಕೆಗಳ ಮೂಲಕವೇ ಜೈಲು, ಅನೇಕರ ವಿರೋಧ ಎದುರಿಸಿದರು.
ಭಗವಾನ್ ರಾಮ ಮತ್ತು ಸೀತಾ ದೇವಿಯ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಫಾರುಕಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಹಿಂದುಪರ ಸಂಘಟನೆಯೊಂದು ನೀಡಿದ ದೂರಿನ ಮೇರೆಗೆ ಕಳೆದ 10 ತಿಂಗಳಲ್ಲಿ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಫಾರೂಕಿ ಶೋ ರದ್ದುಗೊಂಡಿತ್ತು. ಅನೇಕ ಕಡೆಗಳಲ್ಲಿ ಪ್ರದರ್ಶನ ನೀಡಲು ಹಾಸ್ಯನಟನಿಗೆ ಅನುಮತಿ ನಿರಾಕರಿಸಲಾಗಿತ್ತು.
ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್, ರಾಜಾಸಿಂಗ್ ಅವರು ಫಾರೂಕಿ ಅವರ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡಿದ ಕಾರಣ ಅವರನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದರು.

ಹಾಸ್ಯ ಕಾರ್ಯಕ್ರಮದ ವೇಳೆ ಹಿಂದೂ ದೇವತೆಗಳು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನ ಮೇರೆಗೆ ಮುನಾವರ್ ಮತ್ತು ಇತರ ನಾಲ್ವರನ್ನು ಮಧ್ಯಪ್ರದೇಶ ಪೊಲೀಸರು ಜನವರಿ 1 ಹೊಸ ವರ್ಷದ ದಿನದಂದು ಇಂದೋರ್‌ನಲ್ಲಿರುವ ಕೆಫೆ ಬಳಿ ಬಂಧಿಸಿದ್ದರು. ಬಳಿಕ ಮುನಾವರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಶೋ ಮೂಲಕವೇ ಸಾಕಷ್ಟು ಏರಿಳಿತ ಕಂಡ ಮುನಾವರ್ ನಂತರ ನಟಿ ಕಂಗನಾ ರನೌತ್ ನಡೆಸಿಕೊಡುತ್ತಿದ್ದ 'ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಮುನಾವರ್ ಫಾರುಕಿ ಸ್ಪರ್ಧಾಳುವಾಗಿ ಭಾಗವಹಿಸಿದ್ದರು. ತುಸು ಬಿಗ್‌ಬಾಸ್ ಮಾದರಿಯಲ್ಲಿಯೇ ಇರುವ ಲಾಕ್‌ಅಪ್ ರಿಯಾಲಿಟಿ ಶೋ ನಲ್ಲಿ ಅಂತಿಮವಾಗಿ ಮುನಾವರ್ ಫಾರುಕಿ ವಿಜೇತರಾಗಿದ್ದರು. ಈಗ ಇದರ ಮುಂದುವರೆದ ಭಾಗದಂತೆ ಹಿಂದಿ ಆವೃತ್ತಿಯ ಬಿಗ್ ಬಾಸ್ 16ರಲ್ಲಿ ಸ್ಪರ್ಧಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಗುಜರಾತಿನ ಜುನಾಗಢ್ ಮೂಲದ ಫಾರೂಕಿ 2002ರಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ತನ್ನ ತಾಯಿ, ಮನೆ ಕಳೆದುಕೊಂಡರು. ನಂತರ ಮುಂಬೈಗೆ ವಲಸೆ ಬಂದ ಫಾರೂಕಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಗ್ರಾಫಿಕ್ ಡಿಸೈನರ್ ಆಗಿದ್ದ ಫಾರೂಕಿ 2017ರ ಬಳಿಕ ಹಲವು ಒಟಿಟಿ ವೇದಿಕೆಗಳ ಮೂಲಕ ತಮ್ಮ rap ಸಂಗೀತ, ಹಾಸ್ಯದ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದರು. ಜೊತೆಗೆ ವಿವಾದಗಳ ಜೊತೆಗೆ ಜನಪ್ರಿಯತೆ ಗಳಿಸಿದರು.
ಈಗ ಸಲ್ಮಾನ್ ಖಾನ್ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ವರದಿ ಬಂದಿದೆ. ಫಾರೂಕಿ ಜೊತೆಗೆ ಸ್ಪರ್ಧಿಯಾಗಿ ಬಿಗ್ ಬಾಸ್ ಒಟಿಟಿ ವಿನ್ನರ್ ದಿವ್ಯಾ ಅಗರವಾಲ್, ನಾಗಿನ್ ಖ್ಯಾತಿಯ ತೇಜಸ್ವಿ ಪ್ರಕಾಶ್ ಬಿಗ್ ಬಾಸ್ 15ರ ವಿಜೇತರಾಗಿದ್ದಾರೆ.












Click it and Unblock the Notifications