ಮೋದಿ ವಿಷ್ಣುವಿನ 11 ನೇ ಅವತಾರ: ಮಹಾರಾಷ್ಟ್ರ ಬಿಜೆಪಿ ಮುಖಂಡ
ಮುಂಬೈ, ಅಕ್ಟೋಬರ್ 13: ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11 ನೇ ಅವತಾರ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡರೊಬ್ಬರು ಹಾಡಿಹೊಗಳಿದ್ದಾರೆ.
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜೀ ಭಗವಾನ್ ವಿಷ್ಣುವಿನ ಹನ್ನೊಂದನೇ ಅವತಾರ. ಅವರನ್ನು ಅವಮಾನ ಮಾಡುವುದು ಎಂದರೆ ದೇವರಿಗೆ ಅವಮಾನ ಮಾಡಿದಂತೆ ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ಅವಧೂತ್ ವಾಘ್ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಮರಾಠಿ ಚಾನೆಲ್ ವೊಂದರ ಜೊತೆ ಮಾತನಾಡುತ್ತಿದ್ದ ಅವರು, ನಾವು ದೇವರಂಥ ವ್ಯಕ್ತಿಯನ್ನು ಪ್ರಧಾನಿಯಾಗಿ ಹೊಂದಿದ್ದು ಈ ದೇಶದ ಜನರ ಅದೃಷ್ಟ ಎಂದಿದ್ದಾರೆ.

ವಾಘ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, 'ಅವಧೂತ್ ಅವರೊಬ್ಬ ಇಂಜಿನಿಯರಿಂಗ್ ಪದವೀಧರ. ಈ ಹೇಳಿಕೆಯ ನಂತರ ಅವರ ಡಿಗ್ರಿ ಸರ್ಟಿಫಿಕೇಟ್ ಅನ್ನು ಒಮ್ಮೆ ಪರೀಕ್ಷಿಸುವುದು ಒಳಿತು ಎನ್ನಿಸುತ್ತಿದೆ. ಅವರಿಂದ ಇಂಥ ಅಪ್ರಬುದ್ಧ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ' ಎಂದು ಲೇವಡಿ ಮಾಡಿದೆ.
"ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಸಲುವಾಗಿ ಅವರು ಇಂಥ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಏನು ಎಂಬುದು ಈ ದೇಶಕ್ಕೇ ಗೊತ್ತು. ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ" ಎಂದು ಕಾಂಗ್ರೆಸ್ ಹೇಳಿದೆ.












Click it and Unblock the Notifications