ಭಾರತ ಚಿನ್ನದಂತ ಭವಿಷ್ಯಕ್ಕಾಗಿ ಕಾದಿದೆ : ಮೋದಿ
ಮುಂಬೈ, ಅ.5 : ಭಾರತ ದೇಶ ಬಂಗಾರದಂತಹ ಭವಿಷ್ಯಕ್ಕಾಗಿ ಕಾಯುತ್ತಿದೆ ಆದರೆ, ದೇಶದಲ್ಲಿರುವ ಚಿನ್ನದ ವ್ಯಾಪಾರಿಗಳು ಆತಂಕ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನಿ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ India International Bullion Summit ಅನ್ನು ಉದ್ದೇಶಿಸಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಭಾರತ ಬಂಗಾರದಂತಹ ಅವಕಾಶಕ್ಕಾಗಿ ಕಾಯುತ್ತಿದೆ. ಆದರೆ, ದೇಶದ ಬಂಗಾರದ ವ್ಯಾಪಾರಿಗಳು ಆತಂಕಗೊಂಡಿದ್ದಾರೆ ಎಂದು ಮೋದಿ ಹೇಳಿದರು.

ದೇಶದ ಪ್ರತಿಯೊಬ್ಬ ಜನರು ಚಿನ್ನದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಚಿನ್ನವನ್ನು ಹೊಂದಿರುವುದು ಗೌರವ ಮತ್ತು ಸುಕ್ಷತೆಯ ಸಂಕೇತ ಎಂದು ಜನರು ಭಾವಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಚಿನ್ನ ಖರೀದಿ ಮಾಡಬೇಡಿ ಎಂದು ಕರೆ ನೀಡುತ್ತಿದೆ ಎಂದು ಮೋದಿ ಆರೋಪಿಸಿದರು.
ಚಿನ್ನದ ಕಳ್ಳಸಾಗಣೆಯಿಂದಾಗಿ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಾಜ ವಿರೋಧಿ ಶಕ್ತಿಗಳ ಗುಂಪಿನಿಂದಾಗಿ ಚಿನ್ನದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಆಮದು ಪ್ರಮಾಣ ಹೆಚ್ಚಾಗಿರುವುದರಿಂದ ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದು ಹೇಳುತ್ತಿದೆ. ದೇಶದ ರಫ್ತು ಪ್ರಮಾಣ ಹೆಚ್ಚಾಗಬೇಕು, ಆಮದು ಪ್ರಮಾಣ ಕಡಿಮೆ ಆಗಬೇಕು ಇದಕ್ಕೆ ಅಗತ್ಯ ಕ್ರಮಗಳನ್ನು ಕೇಂದ್ರ ಕೈಗೊಳ್ಳಬೇಕು ಎಂದು ನರೇಂದ್ರ ಮೋದಿ ಹೇಳಿದರು.
ರಾತ್ರಿ ಪೆಟ್ರೋಲ್ ಬಂಕ್ ಮುಚ್ಚುವ ಕೇಂದ್ರ ಪ್ರಸ್ತಾವನೆ ಬಗ್ಗೆ ವ್ಯಂಗ್ಯವಾಡಿದ ಮೋದಿ, ಇಂತಹ ನೀತಿಗಳನ್ನು ಜಾರಿಗೆ ತರುವ ಕೇಂದ್ರ ಸರ್ಕಾರಕ್ಕೆ ಏನಾಗಿದೆ? ಎಂದು ನನಗೆ ತಿಳಿದಿಲ್ಲ. ನಾವು ಪ್ರತಿಪಕ್ಷ ಸ್ಥಾನದಲ್ಲಿದ್ದೇವೆ ಆದರೆ, ರೂಪಾಯಿ ಮೌಲ್ಯ ಸರಿಯಾಗಲಿ ದೇಶದ ಜನರ ಜೀವನ ಮಟ್ಟ ಸುಧಾರಿಸಲಿ ಎಂದು ಬಯಸುತ್ತಿದ್ದೇವೆ ಎಂದು ಮೋದಿ ತಿಳಿಸಿದರು.
ಗೋವಾ, ಕೊಚ್ಚಿ, ಅಹಮದಾಬಾದ್, ಚೆನ್ನೈ ವಿಮಾನನಿಲ್ದಾಣಗಳಲ್ಲಿ ಹೆಚ್ಚಿನ ಜನರು ಚಿನ್ನವನ್ನು ಕಳ್ಳಸಾಗಣೆ ಮಾಡಲು ಹೋಗಿ ಸಿಕ್ಕಿ ಬೀಳುತ್ತಿದ್ದಾರೆ ಎಂದ ಮೋದಿ, ದೇಶದಲ್ಲಿರುವ ಸಣ್ಣ-ಪುಟ್ಟ ಚಿನ್ನದ ವ್ಯಾಪಾರಿಗಳ ಜೀವನ ಮಟ್ಟ ಸುಧಾರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಫ್ತಿನ ಕುರಿತು ಯಾವುದೇ ನಿಯಮಗಳನ್ನು ರೂಪಿಸಿಕೊಂಡಿಲ್ಲ. ಕೇಂದ್ರ ಸರ್ಕಾರಕ್ಕಾಗಿ ಕಾಯುವ ಬದಲು ಪ್ರತಿ ರಾಜ್ಯಗಳು ತಮ್ಮ ರಫ್ತು ನೀತಿಯ ನಿಯಮಗಳನ್ನು ಸಿದ್ಧಪಡಿಸಬೇಕು ಎಂದು ಮೋದಿ ಸಲಹೆ ನೀಡಿದರು.
ಚಿನ್ನದ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಮೋದಿ, ಇದರಿಂದ ವ್ಯಾಪಾರಸ್ತರ ಸಂಕಷ್ಟಗಳ ಬಗ್ಗೆ ತಿಳಿದುಕೊಂಡಂತಾಯಿತು. ದೇಶವನ್ನು ಚಿನ್ನದ ರೀತಿ ಹೊಳೆಯುವಂತೆ ಮಾಡೋಣ ಎಂದು ಅವರು ಕರೆ ನೀಡಿದರು.
Let us make our nation Sone Ki Chidiya once again! Thank you for calling me. I understand your problem too: Narendra Modi
— narendramodi_in (@narendramodi_in) October 5, 2013
Our goldsmiths should not suffer from unemployment. Why not the bullion market take skill development initiative to train young goldsmiths.
— narendramodi_in (@narendramodi_in) October 5, 2013
Today I am saying it sadness that success of Gold Control Act maybe debatable, but skill of our gold smiths, there came a big gap: Modi ji
— narendramodi_in (@narendramodi_in) October 5, 2013












Click it and Unblock the Notifications