Get Updates
Get notified of breaking news, exclusive insights, and must-see stories!

ಬೀದಿ ನಾಯಿಗಳಿಗೆ ಆಹಾರ ನೀಡಿದ ಮುಂಬೈ ಮಹಿಳೆಗೆ 8 ಲಕ್ಷ ರೂ. ದಂಡ

ಥಾಣೆ, ಡಿಸೆಂಬರ್ 17: ಬೀದಿ ನಾಯಿಗಳಿಗೆ ಆಹಾರ ನೀಡಿದ ಮಹಿಳೆಗೆ 8 ಲಕ್ಷ ರೂ. ದಂಡ ವಿಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವಸತಿ ಕಟ್ಟಡದಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರ ಮೇಲೆ ತಮ್ಮ ವಸತಿ ಆವರಣದೊಳಗೆ ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ ಸುಮಾರು 8 ಲಕ್ಷಕ್ಕೂ ಹೆಚ್ಚು ದಂಡವನ್ನು ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ. 40ಕ್ಕೂ ಹೆಚ್ಚು ಕಟ್ಟಡಗಳನ್ನು ಒಳಗೊಂಡಿರುವ ಎನ್‌ಆರ್‌ಐ ಕಾಂಪ್ಲೆಕ್ಸ್‌ನ ನಿರ್ವಹಣಾ ಸಮಿತಿಯು ದಂಡ ವಿಧಿಸಿದೆ.

ಹಸಿದವರಿಗೆ ಅನ್ನ ಹಾಕಬೇಕು ಎಂಬ ಮಾತಿದೆ. ಹಸಿದ ಹೊಟ್ಟೆಗಳಿಗೆ ಹಾಕಿದರೆ ಪುಣ್ಯ ಬರುತ್ತದೆ ಎಂಬ ಮಾತುಗಳನ್ನು ಕೇಳಿರುತ್ತೇವೆ. ಆದರೆ ಅಪಾರ್ಟಮೆಂಟ್ ಗಳಲ್ಲಿ ವಾಸಿಸುವ ಜನರು ಹಸಿದ ನಾಯಿಗಳಿಗೆ ಆಹಾರ ನೀಡುವುದರಿಂದ ಅನೇಕ ತೊಂದರೆಗಳಾಗುತ್ತಿವೆ. ಅಲ್ಲಿಗೂ ಹಸಿದ ನಾಯಿಗೆ ಅನ್ನದಾನ ಮಾಡುವ ಜನರಿಗೆ ತೊಂದರೆ ಆಗಿರುವುದು ನಾಯಿಗಳಿಂದ ಅಲ್ಲ ಬದಲಾಗಿ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ ಜನರಿಂದ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಂಶು ಸಿಂಗ್, "ಕಾಂಪ್ಲೆಕ್ಸ್ ಆವರಣದೊಳಗೆ ಬೀದಿನಾಯಿಗಳಿಗೆ ಆಹಾರ ನೀಡುವವರಿಗೆ ಹೌಸಿಂಗ್ ಸೊಸೈಟಿ ದಿನಕ್ಕೆ 5,000 ದಂಡ ವಿಧಿಸುತ್ತದೆ. ಇದನ್ನು ಕಸ ಹಾಕುವ ಶುಲ್ಕವಾಗಿ ವಿಧಿಸಲಾಗಿದೆ. ಇದುವರೆಗೆ ನನ್ನ ದಂಡದ ಮೊತ್ತ 8 ಲಕ್ಷಕ್ಕಿಂತ ಹೆಚ್ಚಿದೆ" ಎಂದಿದ್ದಾರೆ.

 Mumbai Woman Fined Rs 8 Lakh For Feeding Stray Dogs

ಇನ್ನೊಬ್ಬ ನಿವಾಸಿ ತಮಗೆ ವಿಧಿಸಲಾದ ದಂಡದ ಮೊತ್ತವು ಆರು ಲಕ್ಷ ಎಂದು ಹೇಳಿದ್ದಾರೆ. ನಿವಾಸಿ ಲೀಲಾ ವರ್ಮಾ ಎಂಬುವವರು ತಮ್ಮ ಮೇಲೆ ದಂಡ ವಿಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ನಾಯಿಗಳಿಗೆ ಆಹಾರ ನೀಡುತ್ತಿರುವ ಸದಸ್ಯರನ್ನು ಸೊಸೈಟಿ ಕಾವಲುಗಾರರು ಹಿಂಬಾಲಿಸಿ ಅವರ ಹೆಸರನ್ನು ನಮೂದಿಸುತ್ತಾರೆ. ನಂತರ ಅದನ್ನು ವ್ಯವಸ್ಥಾಪಕ ಸಮಿತಿಗೆ ವರದಿ ಮಾಡಲಾಗುತ್ತದೆ. ಅದು ದಂಡವನ್ನು ಲೆಕ್ಕಾಚಾರ ಮಾಡುತ್ತದೆ ಎಂದಿದ್ದಾರೆ.

ಕಾಂಪ್ಲೆಕ್ಸ್ ಆವರಣದೊಳಗೆ ನಾಯಿಗಳಿಗೆ ಆಹಾರ ನೀಡುತ್ತಿರುವವರಿಗೆ ದಂಡ ವಿಧಿಸಲು ಸೊಸೈಟಿಯ ವ್ಯವಸ್ಥಾಪಕ ಸಮಿತಿಯು ನಿರ್ಧಾರ ಕೈಗೊಂಡಿದೆ. ಈ ಅಭ್ಯಾಸವು ಜುಲೈ 2021ರಲ್ಲಿ ಪ್ರಾರಂಭವಾಗಿದೆ. ಊಟ ಹಾಕಿದ ಹಲವಾರು ಬೀದಿ ನಾಯಿಗಳು ಕಾಂಪ್ಲೆಕ್ಸ್ ಒಳಗೆ ತಿರುಗುತ್ತವೆ ಮತ್ತು ಅವುಗಳು ಸ್ಥಳವನ್ನು ಮಲೀನಗೊಳಿಸುತ್ತವೆ. ಹೌಸಿಂಗ್ ಸೊಸೈಟಿಯು ನಾಯಿಗಳಿಗೆ ಆವರಣವನ್ನು ನಿರ್ಮಿಸಿದೆ. ಆದರೆ ಕೆಲವು ಸದಸ್ಯರು ಈ ಪ್ರಾಣಿಗಳಿಗೆ ತೆರೆದ ಸ್ಥಳದಲ್ಲಿ ಆಹಾರವನ್ನು ನೀಡುತ್ತಿರುವುದರಿಂದ ನಾಯಿಗಳು ಪ್ರದೇಶವನ್ನು ಕೊಳಕು ಮಾಡುತ್ತವೆ ಎಂಬ ಆರೋಪವಿದೆ.

 Mumbai Woman Fined Rs 8 Lakh For Feeding Stray Dogs

ಮಕ್ಕಳು ಟ್ಯೂಷನ್‌ಗೆ ಹೋಗುವಾಗ ಬೀದಿ ನಾಯಿಗಳು ಹಿಂದೆ ಹಿಂಬಾಲಿಸುತ್ತಿದ್ದು ಮಕ್ಕಳು ಭಯ ಪಡುತ್ತಿದ್ದಾರೆ. ಮಾತ್ರವಲ್ಲದೆ ಬೀದಿ ನಾಯಿಗಳ ಭಯಕ್ಕೆ ಹಿರಿಯ ನಾಗರಿಕರು ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ವಸತಿ ಸಮುಚ್ಚಯದ ಕಾರ್ಯದರ್ಶಿ ವಿನಿತಾ ಶ್ರೀನಂದನ್ ಮಾಧ್ಯಮಗಳಿಗೆ ತಿಳಿಸಿದರು. "ನಂತರ ಈ ನಾಯಿಗಳು ಪಾರ್ಕಿಂಗ್ ಸ್ಥಳ ಮತ್ತು ಇತರ ಪ್ರದೇಶಗಳನ್ನು ಮಣ್ಣಾಗಿಸುವುದರಿಂದ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗುತ್ತವೆ. ಇದರಿಂದ ಜನರಿಗೆ ತೊಂದರೆ ಉಂಟುಮಾಡುತ್ತದೆ. ನಾಯಿಗಳು ರಾತ್ರಿಯಿಡೀ ಕೂಗುವುದರಿಂದ ನಿವಾಸಿಗಳು ಸರಿಯಾಗಿ ಮಲಗಲು ಸಾಧ್ಯವಿಲ್ಲ," ಎಂದು ಅವರು ಹೇಳಿದ್ದಾರೆ.

ಬೀದಿ ನಾಯಿಗಳಿಗೆ ಆಹಾರ ಹಾಕಿದ್ದಕ್ಕಾಗಿ ಅಲ್ಲಿನ ಅಪಾರ್ಟ್​ಮೆಂಟ್ ಜನರು ಈ ರೀತಿ ನಡೆದುಕೊಂಡಿದ್ದು, ಅಮಾನವೀಯ ಅನಿಸುತ್ತದೆ. ಜನರ ಆಕ್ರೋಶಕ್ಕೆ ಗುರಿಯಾದ ನಾಯಿ ಪ್ರಿಯರು ಜನವಸತಿ ಇರುವ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು. ಹಸಿದ ಬೀದಿ ನಾಯಿಗಳು ಆಹಾರ ಹಾಕದೆ ಇದ್ದಾಗ ಆಹಾರಕ್ಕಾಗಿ ನಾಯಿಗಳು ಹುಡುಕಾಟ ನಡೆಸುವಾಗ ಬಡಾವಣೆಯ ಮಕ್ಕಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆಗಳು ನಡೆದಿವೆ. ಹಸಿದ ಹೊಟ್ಟೆಗಳ ನೋವು ಹಸಿದ ಹೊಟ್ಟೆಗಳಿಗೆ ಅರ್ಥ ಆಗುತ್ತದೆ. ಇನ್ನು, ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿದರೇ ದೇವರು ನಮಗೆ ಯಾವುದೋ ರೂಪದಲ್ಲಿ ಅನ್ನ ನೀಡುತ್ತಾನೆ ಎಂಬ ನಂಬಿಕೆಯಿದೆ. ದುಡ್ಡು ಇರುವ ಶ್ರೀಮಂತರ ಮನೆಯಲ್ಲಿನ ಪ್ರಾಣಿಗಳು ಸರಿಯಾದ ಸಮಯಕ್ಕೆ ಉತ್ತಮ ಗುಣಮಟ್ಟದ ಆಹಾರವನ್ನು ತಿನ್ನುತ್ತವೆ. ಆದರೆ, ಬೀದಿ ನಾಯಿಗಳು ಕೆಲವೊಮ್ಮೆ ಆಹಾರ ಇಲ್ಲದೇ ನರಳುತ್ತಿರುವ ದೃಶ್ಯಗಳು ಸಾಮಾನ್ಯ ಆಗಿರುತ್ತವೆ. ಬೀದಿ ನಾಯಿಗಳಿಗೆ ಒಮ್ಮೆ ಆಹಾರ ನೀಡಿದರೇ ಆ ವ್ಯಕ್ತಿಯನ್ನು ಗುರುತಿಸಿ ಬಾಲ ಅಲ್ಲಾಡಿಸಿಕೊಂಡು ಬರುತ್ತವೆ. ಆದರೆ, ಬೀದಿ ನಾಯಿಗಳು ಮಕ್ಕಳಿಗೆ ಕಚ್ಚುವುದರಿಂದ ಪಾಲಕರು ಆತಂಕವಾಗಿದ್ದಾರೆ.

ಬೀದಿ ನಾಯಿಗಳಿಗೆ ಆಹಾರ ಹಾಕುವುದು ಉತ್ತಮ ಕೆಲಸ ಆದರೆ, ಹಸಿದ ನಾಯಿಗಳಿಗೆ ಯಾರು ಆಹಾರ ಹಾಕದೇ ಇದ್ದಾಗ ಅವುಗಳು ಮಕ್ಕಳ ಮೇಲೆ ದಾಳಿ ಮಾಡುತ್ತವೆ ಎಂದು ಪೋಷಕರ ಆಕ್ರೋಶ. ಹಾಗಾದರೆ ಬೀದಿ ನಾಯಿಗಳಿಗೆ ಆಹಾರ ನೀಡುವುದು ಕಾನೂನುಬಾಹಿರವೇ ಎಂಬ ಪ್ರಶ್ನೆ ಎದುರಾಗುತ್ತದೆ. ಇನ್ನು 2011ರಲ್ಲಿ ದೆಹಲಿ ಹೈಕೋರ್ಟ್ ಬೀದಿ ನಾಯಿಗಳಿಗೆ ಆಹಾರ ನೀಡಲು ಅನೇಕ ನಿಯಮಗಳನ್ನು ವಿಧಿಸಿತ್ತು.

ಭಾರತ ಸಂವಿಧಾನದ ಪ್ರಕಾರ, ನಾಗರಿಕರು ಎಲ್ಲಾ ಜೀವಿಗಳಿಗೆ ಕಾಳಜಿ ತೋರಿಸುವ ಕರ್ತವ್ಯವನ್ನು ಹೊಂದಿದ್ದಾನೆ. ಬೀದಿ ಪ್ರಾಣಿಗಳಿಗೆ ಆಹಾರವನ್ನು ನೀಡುವುದನ್ನು ನಿಷೇಧಿಸಲು ಯಾವುದೇ ಕಾನೂನು ಇಲ್ಲ ಎಂದು ಬೀದಿ ಪ್ರಾಣಿಗಳ ಪರ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ತೀರ್ಪು ಎತ್ತಿಹಿಡಿದಿವೆ.

ದೆಹಲಿ ಹೈಕೋರ್ಟ್ 2011ರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವವರಿಗೆ ಕೆಲವು ನಿಯಮಗಳನ್ನು ಪಾಲಿಸಲು ಗೈಡ್​ಲೈನ್ಸ್​ ನೀಡಿವೆ. ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲದೇ ಇದ್ದರೆ ಆಹಾರವನ್ನು ಹಾಕಬಹುದು. ಸಾರ್ವಜನಿಕ ಬೀದಿಗಳು, ಪುಟ್​ಪಾತ್, ಪಾದಚಾರಿ ಮಾರ್ಗಗಳು, ಇನ್ನು, ಅಪಾರ್ಟ್​ಮೆಂಟ್​ನ ಪ್ರವೇಶದ್ವಾರಗಳ ಹೊರಗಿನ ಸಾಮಾನ್ಯ ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನಾಯಿ ಪ್ರಿಯರು ನೀಡಬಹುದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಆದರಿಲ್ಲಿ ಮಹಿಳೆಗೆ 8 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಬೀದಿ ನಾಯಿಗಳ ಪಾಲನೆ ಮತ್ತು ನಿಯಂತ್ರಣ ಯಾರ ಹೊಣೆ ಎಂದು ಪ್ರಶ್ನಿಸುವಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+