ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣ: ನಿಗೂಢ ಸಾವಿನ ಹಿಂದೆ ಪೊಲೀಸ್ ಅಧಿಕಾರಿ ಕೈವಾಡ?

ಮುಂಬೈ, ಮಾರ್ಚ್ 10: ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಿಗೂಢ ರೀತಿಯಲ್ಲಿ ಮೃತಪಟ್ಟ ಆಟೊ ಬಿಡಿಭಾಗಗಳ ಮಾರಾಟಗಾರ ಮನ್ಸುಖ್ ಹಿರೇನ್ ಅವರ ಪತ್ನಿ ಸ್ಫೋಟಕ ಆರೋಪ ಮಾಡಿದ್ದಾರೆ. ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಸಚಿನ್ ವೇಜ್ ಅವರೇ ತಮ್ಮ ಪತಿಯನ್ನು ಹತ್ಯೆ ಮಾಡಿರಬಹುದು ಎಂದು ವಿಮಲಾ ಹಿರೇನ್, ಎಟಿಎಸ್ ಎದುರು ಹೇಳಿಕೆ ನೀಡಿದ್ದಾರೆ.

ಫೆಬ್ರವರಿ 25ರಂದು ದಕ್ಷಿಣ ಮುಂಬೈನಲ್ಲಿರುವ ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದ ಎದುರು ಸ್ಫೋಟಕಗಳು ಹಾಗೂ ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ವಾಹನ ಪತ್ತೆಯಾಗಿತ್ತು. ಅದರ ಮೂಲ ಮಾಲೀಕ ಥಾಣೆಯ ನಿವಾಸಿ ಮನ್ಸುಖ್ ಹಿರೇನ್, ತಮ್ಮ ವಾಹನ ಕಳುವಾಗಿತ್ತು ಎಂದು ಹೇಳಿದ್ದರು. ಮಾರ್ಚ್ 5ರಂದು ಥಾಣೆಯ ಕೊಳ್ಳವೊಂದರಲ್ಲಿ ಅವರ ಶವ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

ಈ ಸಂಬಂಧ ಮಹಾರಾಷ್ಟ್ರ ಎಟಿಎಸ್ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಹಿರೇನ್ ಅವರ 'ಕ್ಲಾಸಿಕ್ ಕಾರ್ ಡೆಕೊರ್' ಆಟೊ ಬಿಜಿನೆಸ್‌ನ ಕಾಯಂ ಗ್ರಾಹಕರಾಗಿದ್ದ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಸಚಿನ್ ವೇಜ್, ಮುಕೇಶ್ ಅಂಬಾನಿ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವಂತೆ ಹಿರೇನ್‌ಗೆ ಸೂಚನೆ ನೀಡಿದ್ದರು ಎಂದು ವಿಮಲಾ ಹೇಳಿಕೆ ದಾಖಲಿಸಿದ್ದಾರೆ.

'ಸಚಿನ್ ವೇಜ್ ಅವರು ಬಂಧನಕ್ಕೆ ಒಳಗಾಗುವಂತೆ ನನ್ನ ಪತಿಗೆ ಸೂಚನೆ ನೀಡಿದ್ದರು. ಎರಡು ಮೂರು ದಿನಗಳಲ್ಲಿ ತಾವು ಜಾಮೀನು ಕೊಡಿಸುವುದಾಗಿ ತಿಳಿಸಿದ್ದರು' ಎಂದು ವಿಮಲಾ ತಿಳಿಸಿದ್ದಾರೆ. ಮುಂದೆ ಓದಿ.

ಕಾರ್ ಕೊಂಡೊಯ್ದಿದ್ದ ಸಚಿನ್

ಕಾರ್ ಕೊಂಡೊಯ್ದಿದ್ದ ಸಚಿನ್

ಪೀಟರ್ ನ್ಯೂಟನ್ ಎಂಬುವವರು ಈ ಸ್ಕಾರ್ಪಿಯೋ ಕಾರ್‌ನ ಮೂಲ ಮಾಲೀಕ. ಆದರೆ ಅವರ ಸಮ್ಮತಿಯೊಂದಿಗೆ ಮೂರು ವರ್ಷಗಳಿಂದ ಅದನ್ನು ತಾವು ಬಳಸುತ್ತಿದ್ದುದ್ದಾಗಿ ವಿಮಲಾ ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ತಮ್ಮ ಗಂಡನಿಂದ ಇನ್‌ಸ್ಪೆಕ್ಟರ್ ವೇಜ್ ಸ್ಕಾರ್ಪಿಯೋವನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಕೆಲವು ತಿಂಗಳ ಬಳಿಕ ಅದನ್ನು ವಾಪಸ್ ನೀಡಿದ್ದರು ಎಂದು ಹೇಳಿದ್ದಾರೆ.

'2020ರ ನವೆಂಬರ್‌ನಲ್ಲಿ ಸಚಿನ್ ವೇಜ್ ಸ್ಕಾರ್ಪಿಯೋ ತೆಗೆದುಕೊಂಡು ಹೋಗಿದ್ದರು. ನನ್ನ ಪತಿ ಅವರಿಗೆ ಬಹುಕಾಲದಿಂದ ಪರಿಚಯ. ಫೆ. 2ರಂದು ವೇಜ್ ಅವರು ತಮ್ಮ ಚಾಲಕ ಮೂಲಕ ಕಾರನ್ನು ಮರಳಿಸಿದ್ದರು. ಬಳಿಕ ಅದನ್ನು ನನ್ನ ಪತಿ ನಿತ್ಯ ಬಳಸುತ್ತಿದ್ದರು. ಆದರೆ ಅದರಲ್ಲಿ ತಾಂತ್ರಿಕ ಸಮಸ್ಯೆಗಳು ಬರುತ್ತಿದ್ದವು. ಫೆ. 17ರಂದು ಮುಂಬೈ ಕಡೆಗೆ ಹೋಗುವಾಗ ವಿಖ್ರೋಲಿ ಪ್ರದೇಶದ ಬಳಿ ಚಕ್ರಗಳು ಜಾಮ್ ಆಗಿದ್ದರಿಂದ ಅಲ್ಲಿಯೇ ನಿಲ್ಲಿಸಿ ಮನೆಗೆ ವಾಪಸ್ ಆಗಿದ್ದರು. ಆದರೆ ಮರು ದಿನ ಅಲ್ಲಿಗೆ ಹೋದಾಗ ಕಾರು ಇರಲಿಲ್ಲ. ಈ ಬಗ್ಗೆ ವಿಖ್ರೋಲಿ ಪೊಲೀಸರಿಗೆ ದೂರು ಕೂಡ ಸಲ್ಲಿಸಿದ್ದರು' ಎಂದು ಅವರು ವಿವರಿಸಿದ್ದಾರೆ.

ಪತಿ ಹೆಸರಲ್ಲಿ ಪತ್ರ ಬರೆಸಿದ್ದರು

ಪತಿ ಹೆಸರಲ್ಲಿ ಪತ್ರ ಬರೆಸಿದ್ದರು

'ಸಚಿನ್ ವೇಜ್ ನನ್ನ ಪತಿಯ ಹೇಳಿಕೆ ಪಡೆದಿದ್ದರು. ಮಾರ್ಚ್ 2ರಂದು ಪತಿ, ಸಚಿನ್ ವೇಜ್ ಅವರು ತಮ್ಮ ವಕೀಲರ ಮೂಲಕ ಮನ್ಸುಖ್ ಹೆಸರಿನಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಮುಂಬೈ ಹಾಗೂ ಥಾಣೆಯ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಿಸಿ ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯದವರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿಸಿದ್ದರು. ಆದರೆ ನನ್ನ ಪತಿ ಮನೆಯಲ್ಲಿ ಬಹಳ ಆರಾಮಾಗಿ ಇದ್ದರು' ಎಂದು ಹೇಳಿದ್ದಾರೆ.

'ಮಾರ್ಚ್ 3ರಂದು ಎಲ್ಲವೂ ಬದಲಾಯಿತು. ಅಂದು ರಾತ್ರಿ 9 ಗಂಟೆಗೆ ಮನೆಗೆ ಬಂದ ಪತಿ, ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವಂತೆ ಸಚಿನ್ ವೇಜ್ ಹೇಳುತ್ತಿದ್ದಾರೆ. ನನಗೆ 2-3 ದಿನಗಳಲ್ಲಿ ಜಾಮೀನು ನೀಡುವುದಾಗಿ ತಿಳಿಸಿದ್ದಾರೆ ಎಂದಿದ್ದರು' ಎಂಬುದಾಗಿ ವಿಮಲಾ ಹೇಳಿಕೆ ನೀಡಿದ್ದಾರೆ.

ಪೊಲೀಸ್ ಅಧಿಕಾರಿಯ ಭೇಟಿಗೆ ತೆರಳಿದ್ದರು

ಪೊಲೀಸ್ ಅಧಿಕಾರಿಯ ಭೇಟಿಗೆ ತೆರಳಿದ್ದರು

ಮಾರ್ಚ್ 4ರಂದು ತಮ್ಮ ಸಂಬಂಧಿಯೊಬ್ಬರಿಗೆ ಕರೆ ಮಾಡಿದ ಮನ್ಸುಖ್, ತಾವು ಈ ಪ್ರಕರಣದಲ್ಲಿ ಶೀಘ್ರವೇ ಬಂಧನಕ್ಕೆ ಒಳಗಾಗಲಿದ್ದು, ಜಾಮೀನು ದೊರಕಿಸಲು ಪ್ರಮುಖ ವಕೀಲರನ್ನು ಸಂಪರ್ಕಿಸುವಂತೆ ಹೇಳಿದ್ದರು. ಮರುದಿನ ರಾತ್ರಿ 8.30ಕ್ಕೆ ಮನೆಗೆ ಮರಳಿದ್ದ ಮನ್ಸುಖ್, ಕಂಡಿವಲಿ ಕ್ರೈಂ ಬ್ರ್ಯಾಂಚ್‌ನ ಪೊಲೀಸ್ ಅಧಿಕಾರಿ ತಾವ್ಡೆ ಅವರನ್ನು ಭೇಟಿಯಾಗಲು ತೆರಳುವುದಾಗಿ ತಿಳಿಸಿದ್ದರು. ಅವರು ಬೈಕ್‌ನಲ್ಲಿ ಕೂಡ ಹೊರಟಿರಲಿಲ್ಲ. ಆಟೋ ರಿಕ್ಷಾದಲ್ಲಿ ಹೋಗುವುದಾಗಿ ಹೇಳಿ ಹೊರಟರು. ಅವರನ್ನು ನೋಡಿದ್ದು ಅದೇ ಕೊನೆ ಎಂದು ವಿಮಲಾ ಹೇಳಿದ್ದಾರೆ.

ಮುಳುಗಿ ಸಾಯಲು ಸಾಧ್ಯವೇ ಇಲ್ಲ

ಮುಳುಗಿ ಸಾಯಲು ಸಾಧ್ಯವೇ ಇಲ್ಲ

'ನನ್ನ ಪತಿಯ ದೇಹ ಪತ್ತೆಯಾದಾಗ ಅವರ ಮುಖದ ಸುತ್ತಲೂ ಒಂದು ಸ್ಕಾರ್ಫ್ ಇತ್ತು. ಚೆನ್ನಾಗಿ ಸುತ್ತಿದ ಐದಾರು ಸ್ಕಾರ್ಫ್‌ಗಳು ಅವರ ಜೇಬಿನಲ್ಲಿದ್ದವು. ನನ್ನ ಪತಿ ಒಳ್ಳೆಯ ಈಜುಗಾರ. ಅವರು ಮುಳುಗಿ ಸಾಯಲು ಸಾಧ್ಯವೇ ಇಲ್ಲ. ಅವರು ಮನೆಯಿಂದ ಹೋಗುವಾಗ ಕಪ್ಪು ಮಾಸ್ಕ್ ಧರಿಸಿದ್ದರು. ಮೊಬೈಲ್ ಫೋನ್, ಚಿನ್ನದ ಸರ, ವಾಚ್, ಪರ್ಸ್, ವಿವಿಧ ಎಟಿಎಂ ಕಾರ್ಡ್‌ಗಳು ಮತ್ತು ಸ್ವಲ್ಪ ಹಣ ಇತ್ತು. ಆದರೆ ಅವರ ಮೃತದೇಹದೊಂದಿಗೆ ಇದಾವುದೂ ಇರಲಿಲ್ಲ. ಹೀಗಾಗಿ ನನ್ನ ಗಂಡನನ್ನು ಕೊಲೆ ಮಾಡಲಾಗಿದೆ ಎಂದು ನಂಬುತ್ತೇನೆ. ಪೊಲೀಸ್ ಅಧಿಕಾರಿ ಸಚಿನ್ ವೇಜ್ ಅವರೇ ನನ್ನ ಗಂಡನನ್ನು ಕೊಂದಿರಬಹುದು' ಎಂದು ಅವರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+