ಮಹಾರಾಷ್ಟ್ರಕ್ಕೆ ಶಿವಸೇನೆಯ ಸಿಎಂ; ಕುತೂಹಲ ಮೂಡಿಸಿದ ಹೇಳಿಕೆ
ಮುಂಬೈ, ನವೆಂಬರ್ 01 : ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಹಗ್ಗಜಗ್ಗಾಟ ಮುಂದುವರೆದಿದೆ. ಅತಂತ್ರ ಫಲಿತಾಂಶ ಬಂದ ಹಿನ್ನಲೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸರ್ಕಾರ ರಚನೆಯ ಕಸರತ್ತು ಮಾಡುತ್ತಿವೆ.
ಶುಕ್ರವಾರ ಶಿವಸೇನೆ ನಾಯಕ ಮತ್ತು ವಕ್ತಾರ ಸಂಜಯ್ ರಾವತ್, "ಶಿವಸೇನೆಯವರು ಮಹಾರಾಷ್ಟ್ರಕ್ಕೆ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಈ ಹೇಳಿಕೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
"50:50 ರ ಅನುಪಾತದಲ್ಲಿ ಸರ್ಕಾರ ರಚನೆ ಮಾಡಲು ರಾಜ್ಯದ ಜನರು ಬಿಜೆಪಿ ಮತ್ತು ಶಿವಸೇನೆಗೆ ಬೆಂಬಲ ನೀಡಿದ್ದಾರೆ. ಸರ್ಕಾರ ರಚನೆ ವಿಚಾರದಲ್ಲಿ ಬಿಜೆಪಿ ಏಕಪಕ್ಷೀಯ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಿಲ್ಲ" ಎಂದು ಸಂಜಯ್ ರಾವ್ ಸ್ಪಷ್ಟಪಡಿಸಿದ್ದಾರೆ.

ಶಿವಸೇನೆ ಮುಖ್ಯಸ್ಥ ನಮ್ಮ ಬಳಿ ಬೇರೆ ಆಯ್ಕೆಗಳಿವೆ ಎಂಬ ಸಂದೇಶವನ್ನು ಸಾರಿದ್ದಾರೆ. ಬಳಿಕ ಸಂಜಯ್ ರಾವತ್ ಶಿವಸೇನೆ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ರಾಜಕೀಯ ಚಟುವಟಿಕೆಗಳನ್ನು ಮತ್ತಷ್ಟು ಬಿರುಸುಗೊಳಿಸಿದೆ.
ಶಿವಸೇನೆ ನಾಯಕರು ಗುರುವಾರ ರಾಜ್ಯಪಾಲರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರು. ಅಕ್ಟೋಬರ್ 30ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ ನಿಗದಿಯಾಗಿದ್ದ ಸಭೆಯನ್ನು ಶಿವಸೇನೆ ನಾಯಕರು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ್ದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಂದಿಲ್ಲ. ಇದರಿಂದಾಗಿ ಸರ್ಕಾರ ರಚನೆ ಕಗ್ಗಂಟಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಚುನಾವಣಾ ಪೂರ್ಣ ಮೈತ್ರಿಯಂತೆ ಎರಡೂ ಪಕ್ಷಗಳು ಒಟ್ಟಾಗಿ ಸರ್ಕಾರವನ್ನು ರಚನೆ ಮಾಡಲಿದೆ. ಆದರೆ, ಖಾತೆಗಳ ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಿಲ್ಲ.
ಚುನಾವಣೆಯಲ್ಲಿ ಕಾಂಗ್ರೆಸ್ 44 ಮತ್ತು ಎನ್‌ಸಿಪಿ 54 ಸ್ಥಾನದಲ್ಲಿ ಗೆದ್ದಿವೆ. 13 ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಎನ್‌ಸಿಪಿ ಸರ್ಕಾರ ರಚನೆ ವಿಚಾರದಲ್ಲಿ ಶಿವಸೇನೆಗೆ ಬೆಂಬಲ ನೀಡಲಿದೆ ಎಂಬ ಸುದ್ದಿಗಲು ದಟ್ಟವಾಗಿ ಹಬ್ಬಿವೆ.












Click it and Unblock the Notifications