ಹೆತ್ತ ಮಗಳಿಗೆ ನೇಣು ಬಿಗಿದ ತಾಯಿ; ಕಾರಣ ಬಲುಕರಾಳ!
ಪಾಲ್ಗರ್, ಜೂನ್.26: ಒಂದು ಹರಡುತ್ತಿರುವ ಕೊರೊನಾವೈರಸ್. ಇನ್ನೊಂದು ಭಾರತ ಲಾಕ್ ಡೌನ್ ನಿಂದ ಸೃಷ್ಟಿಯಾಗಿರುವ ಅತಂತ್ರ ಪರಿಸ್ಥಿತಿ. ಇಡೀ ದೇಶವೇ ಮಹಾಮಾರಿ ಹೊಡೆತಕ್ಕೆ ಎಷ್ಟರ ಮಟ್ಟಿಗೆ ಹೈರಾಣಾಗಿದೆ. ಜನರ ಮನಸ್ಥಿತಿ ಎಷ್ಟರ ಮಟ್ಟಿಗೆ ರೋಸಿ ಹೋಗಿದೆ ಎನ್ನುವುದಕ್ಕೆ ಇದೊಂದು ಘಟನೆಯೇ ಜೀವಂತ ಸಾಕ್ಷಿ.
Recommended Video
ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ಸಾವಿರಾರು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಸರ್ಕಾರವು ಲಾಕ್ ಡೌನ್ ನಿಯಮಗಳನ್ನು ದಿನದಿಂದ ದಿನಕ್ಕೆ ಕಠಿಣಗೊಳಿಸುತ್ತಿದೆ. ಸರ್ಕಾರ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಬಡವರ ದುಡಿಮೆಗೆ ಕುತ್ತು ಎದುರಾಗಿದೆ.
ಹೆತ್ತ ಮಗಳ ಹಸಿವಿನ ನೋವು ತೀರಿಸಲು ಆಗದಂತಾ ಪರಿಸ್ಥಿತಿಯಲ್ಲಿ ತಾಯಿಯೇ ಮಗಳನ್ನು ಕೊಂದು ಹಾಕಿರುವಂತಾ ಮನಕಲುಕುವಂತಾ ಘಟನೆ ಮಹಾರಾಷ್ಟ್ರದ ಪಾಲ್ಗರ್ ನಲ್ಲಿರುವ ಜವಾಹರ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಸುಂದರ ಕುಟುಂಬವಾಯಿತು ಸಾವಿನ ಮನೆ
ಪಾಲ್ಗರ್ ನ ಜವಾಹರ್ ಪ್ರದೇಶದಲ್ಲಿ ತಂದೆ ತಾಯಿ ಹಾಗೂ ಮಗಳಿದ್ದ ಸುಂದರ ಸಂಸಾರವದು. ಮಹಾಮಾರಿ ಕೊರೊನಾವೈರಸ್ ಮತ್ತು ಲಾಕ್ ಡೌನ್ ಪ್ರಭಾವದ ಕರಿನೆರಳಿಗೆ ಇಂದು ಇಡೀ ಕುಟುಂಬವೇ ಸಾವಿನ ಮನೆಯಾಗಿ ಪರಿವರ್ತನೆಯಾಗಿದೆ. ಹಾಲುಣಿಸಿ ಬೆಳೆಸಿದ ಮಗಳಿಗೆ ಹೆತ್ತ ತಾಯಿಯೇ ನೇಣು ಬಿಗಿದು ಕೊಂದಿದ್ದಾಳೆ.

ಮೂವರಿದ್ದ ಮುದ್ದಾದ ಕುಟುಂಬಕ್ಕೆ ಹಸಿವಿನ ನೋವು
ತಂದೆ ದಿಲೀಪ್ ತಾಯಿ ಮಂಗಳಾ ಜೊತೆಗೆ ಪುಟ್ಟ ಮಗಳು ರೋಷನಿ ಚೆಂದದ ಬದುಕು ಕಟ್ಟಿಕೊಂಡಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರಾಗಿ ದಿಲೀಪ್ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಕಳೆದ ಮೂರು ತಿಂಗಳಿನಿಂದಲೂ ಉದ್ಯೋಗ ಇರಲಿಲ್ಲ. ಹೊಟ್ಟೆ ಹಸಿವು ನೀಗಿಸಲು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನೆಲ್ಲ ಮಾರಾಟ ಮಾಡಿದ್ದು ಆಯಿತು. ಆದಾಯದ ಮೂಲವೇ ಬಂದ್ ಆಗಿದ್ದು, ಹಸಿವಿನ ನೋವು ತಾಳದೇ ಹೆತ್ತ ತಾಯಿ ಮಂಗಳಾ ತನ್ನ ಮಗಳು ರೋಷನಿಗೆ ತನ್ನ ಸೀರೆಯಿಂದ ನೇಣು ಬಿಗಿದಿದ್ದಾರೆ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಕಂದನ ಕೊಂದು ತಾಯಿ ಜೀವಂತವಾಗಿ ಉಳಿಯಲಿಲ್ಲ?
ಕಳೆದ ಜೂನ್.24ರಂದು ಮನೆಯಿಂದ ದೂರದಲ್ಲಿದ್ದ ಮರಕ್ಕೆ ಪುಟ್ಟ ಕಂದಮ್ಮನ್ನು ಹೆತ್ತ ತಾಯಿಯೇ ನೇಣು ಬಿಗಿದು ಕೊಂದಿದ್ದಾರೆ. ಅನಂತರದಲ್ಲಿ ತಾಯಿ ಮಂಗಳಾ ಕೂಡಾ ಜೀವಂತವಾಗಿ ಉಳಿಯಲಿಲ್ಲ. ಮಗಳು ರೋಷಿನಿಯನ್ನು ಕೊಂದ ತಾಯಿ ಕೂಡಾ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳಿಗೆ ನೇಣು ಬಿಗಿದ ಸೀರೆಯಲ್ಲೇ ತಾನೂ ಕೂಡಾ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ತಾಯಿ ಮತ್ತು ಮಗಳಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಹೇಗಿದೆ ಗೊತ್ತಾ ಲಾಕ್ ಡೌನ್ ಕಂಡೀಷನ್?
ಭಾರತದ ಮಟ್ಟಿಗೆ ಮಹಾರಾಷ್ಟ್ರದಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 1,47,741 ಜನರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದೆ. ಈ ಪೈಕಿ 77,453 ಮಂದಿಗೆ ಗುಣಮುಖರಾಗಿದ್ದರೆ, 63,342 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಮಹಾರಾಷ್ಟ್ರದಲ್ಲಿ ಮಹಾಮಾರಿಗೆ 6931ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ.












Click it and Unblock the Notifications