ಮುಂಬೈ ಕಟ್ಟಡ ದುರಂತ: ಸಾವಿನ ಸಂಖ್ಯೆ 17ಕ್ಕೆ ಏರಿಕೆ
ಮುಂಬೈ, ಸಪ್ಟೆಂಬರ್.22: ಮಹಾರಾಷ್ಟ್ರದ ಭಿವಾಂಡಿ ಪ್ರದೇಶದಲ್ಲಿ ಸಂಭವಿಸಿದ 3 ಅಂತಸ್ತಿದ ಕಟ್ಟಡ ಕುಸಿತದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಟ್ಟಡಡದ ಅವಶೇಷಗಳಡಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ಬೆಳಗಿನ ಜಾವ 3.45ರ ಸಂದರ್ಭದಲ್ಲಿ ಭಿವಾಂಡಿಯಲ್ಲಿ ಕಟ್ಟಡ ದುರಂತ ಸಂಭವಿಸಿತ್ತು. ಮೂರು ಅಂತಸ್ತಿನ ಕಟ್ಟಡ ಕುಸಿತದಿಂದಾಗಿ ಸ್ಥಳದಲ್ಲೇ ಎಂಟು ಮಂದಿ ಪ್ರಾಣ ಬಿಟ್ಟಿದ್ದು, ಸ್ಥಳೀಯರೇ ಕಟ್ಟಡಗಳಡಿ ಸಿಲುಕಿದ್ದ ಕನಿಷ್ಠ 20 ಕಾರ್ಮಿಕರನ್ನು ರಕ್ಷಿಸಿದ್ದರು.
ಭಿವಾಂಡಿ ಕಟ್ಟಡ ದುರಂತದ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿ, ಆಸ್ಪತ್ರೆಗಳಿಗೆ ರವಾನಿಸಲಾಯಿತು. ಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದು, ದುರಂತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಮಂಗಳವಾರವೂ ರಕ್ಷಣಾ ಕಾರ್ಯಾಚರಣೆ:
ಕಟ್ಟಡದ ಅವಶೇಷಗಳಡಿ ಇನ್ನೂ 26ಕ್ಕಿಂತ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಮಂಗಳವಾರ ಕೂಡಾ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತದೆ ಎಂದು ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ ಕಮಿಷನರ್ ಪಂಕಜ್ ಆಶಿಯಾ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾಗಿರುವ ಹೆಚ್ಚುವರಿ ಸಿಬ್ಬಂದಿಯನ್ನು ಮುಂಬೈ ಮತ್ತು ಪುಣೆಯಿಂದ ಕರೆಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಕಟ್ಟಡ ಸುರಕ್ಷಿತವಲ್ಲ ಎಂದು ನೋಟಿಸ್:
ಭಿವಾಂಡಿಯಲ್ಲಿದ್ದ 3 ಅಂತಸ್ತಿನ ಕಟ್ಟಡವು ಅಸ್ಥಿರಗೊಂಡಿದ್ದು, ವಾಸಕ್ಕೆ ಸುರಕ್ಷಿತವಲ್ಲ. ಸಾಧ್ಯವಾದಷ್ಟು ಬೇಗ ಅಲ್ಲಿಂದ ಮನೆಗಳನ್ನು ಖಾಲಿ ಮಾಡುವಂತೆ ಮೊದಲೇ ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ ನೋಟಿಸ್ ಜಾರಿಗೊಳಿಸಿತ್ತು. ಇದನ್ನು ಲಘುವಾಗಿ ತೆಗೆದುಕೊಂಡು, ಮನೆ ಖಾಲಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಇಂಥದೊಂದು ದುರಂತ ಸಂಭವಿಸಿದೆ ಎಂದು ಕಮಿಷನರ್ ಪಂಕಜ್ ಆಶಿಯಾ ಹೇಳಿದ್ದಾರೆ.












Click it and Unblock the Notifications