ರಾಜ್ ಠಾಕ್ರೆ ಎಂಎನ್ಎಸ್ ಗೆಲುವು ಕಂಡಿದ್ದು ಒಂದು ಕ್ಷೇತ್ರದಲ್ಲಿ ಮಾತ್ರ!
ಮುಂಬೈ, ಅಕ್ಟೋಬರ್ 25: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವ ನಿರ್ಮಾಣ ಸೇವಾ (ಎಂಎನ್‍ಎಸ್) ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. 101 ಕ್ಷೇತ್ರಗಳಲ್ಲಿ ಎಂಎನ್ಎಸ್ ಸ್ಪರ್ಧಿಸಿತ್ತು. ಕಲ್ಯಾಣ್ ಗ್ರಾಮೀಣ ಕ್ಷೇತ್ರದಲ್ಲಿ ಎಂಎನ್ಎಸ್ ಅಭ್ಯರ್ಥಿ ಪ್ರಮೋದ್ ರಾಜು ರತನ್ ಪಾಟೀಲ್ ಅವರು ಜಯ ದಾಖಲಿಸಿದ್ದಾರೆ.
ಪ್ರಮೋದ್ ರಾಜು ರತನ್ ಅವರು ಶಿವಸೇನೆಯ ರಮೇಶ್ ಮಾತ್ರೆ ಅವರನ್ನು 7,154 ಮತಗಳ ಅಂತರದಿಂದ ಸೋಲಿಸಿದ್ದಾರೆ. ರಮೇಶ್ ಅವರು 86668 ಮತ(43.84%) ಗಳಿಸಿದರೆ. ಪ್ರಮೋದ್ ಅವರು 93818(47.46%) ಮತ ಗಳಿಸಿದರೆ, ನೋಟಾ 6082 ಮತ ಬಂದಿದೆ.
2009ರ ಚುನಾವಣೆಯಲ್ಲಿ ಎಂಎನ್‍ಎಸ್ ಅಭ್ಯಥಿಯಾಗಿ ಸ್ಪರ್ಧಿಸಿದ್ದ ಪ್ರಮೋದ್ ರಾಜು ಅವರ ಹಿರಿಯ ಸಹೋದರ ರಮೇಶ್ ರತನ್ ಪಾಟೀಲ್ , ರಮೇಶ್ ಮಾತ್ರೆ ವಿರುದ್ಧವೇ 9,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರಲ್ಲಿ ಕಾಂಗ್ರೆಸ್ ಸೇರಿದ ರಮೇಶ್ ಪಾಟೀಲ್ ಅವರನ್ನು ಶಿವಸೇನೆಯ ಭೊಯಿರ್ ಸುಭಾಷ್ ಗಣು ಪಾಟೀಲ್ 44,212 ಮತಗಳಿಂದ ಸೋಲಿಸಿದ್ದರು.

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಮತದಾನ ನಡೆದು, ಅಕ್ಟೋಬರ್ 24ರಂದು ಫಲಿತಾಂಶ ಹೊರಬಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡಿದ್ದವು. ಎರಡೂ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಫಲಿತಾಂಶ ಕುತೂಹಲ ಕೆರಳಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 164 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದವು.
ಮಹಾರಾಷ್ಟ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್ಸಿಪಿ ಅಲ್ಲದೆ, ರಾಜ್ ಠಾಕ್ರೆ ಅವರ ಎಂಎನ್ಎಸ್, ಎಐಎಂಐಎಂ, ವಂಚಿತ್ ಬಹುಜನ್ ಅಘಾಡಿ, ಸ್ವಾಭಿಮಾನಿ ಶೇತ್ಕಾರಿ ಸಂಘಟನಾ ಮುಂತಾದ ಸಣ್ಣ ಪುಟ್ಟ ಪಕ್ಷಗಳು ತಮ್ಮ ಛಾಪು ಮೂಡಿಸಲು ಮುಂದಾಗಿದ್ದವು. 288 ಸ್ಥಾನಗಳ ಪೈಕಿ ಬಿಜೆಪಿ 105, ಶಿವಸೇನಾ 56, ಎನ್ಸಿಪಿ 54, ಕಾಂಗ್ರೆಸ್ 44, ಎಂಎನ್ಎಸ್ 1.












Click it and Unblock the Notifications