ಮಾನವೀಯತೆ ಇನ್ನೂ ಸತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ

Posted By:
Subscribe to Oneindia Kannada

ಮುಂಬೈ, ಮೇ 16 : ಮುಂಬೈನ ಬಡ ಆಟೋ ಚಾಲಕನೊಬ್ಬ ವಿಧಿಯಿಲ್ಲದೆ ತನ್ನ ಎರಡು ವರ್ಷದ ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆಟೋ ಚಲಾಯಿಸುತ್ತಿರುವ ದೃಶ್ಯ ಭಾರೀ ವೈರಲ್ ಆಗಿದ್ದು, ಆತನಿಗೆ ಎಲ್ಲೆಡೆಯಿಂದ ಸಹಾಯ ಹರಿದುಬರುತ್ತಿದೆ.

ಉತ್ತರಪ್ರದೇಶದ ಗೋರಖ್ಪುರ ಮೂಲದ ಆಟೋ ಚಾಲಕ ಮೊಹಮ್ಮದ್ ಸಯೀದ್ ಹೆಂಡತಿ ಪಾರ್ಶ್ವವಾಯು ಪೀಡಿತೆಯಾಗಿದ್ದರಿಂದ ಅನಿವಾರ್ಯವಾಗಿ ಸಯೀದ್ ತನ್ನ ಮಗನನ್ನು ಮನೆಯಲ್ಲೇ ಬಿಡಲಾರದೆ ಆಟೋದಲ್ಲಿಯೇ ಕುಳ್ಳರಿಸಿಕೊಂಡು ದುಡಿಮೆ ಮಾಡುತ್ತಿದ್ದ.

Help pours in for auto driver in Mumbai

ಈ ಚಿತ್ರವನ್ನು ಟ್ವಿಟ್ಟರಿನಲ್ಲಿ ಹಾಕಿದವರು ಚಿತ್ರ ನಿರ್ದೇಶಕ ವಿನೋದ್ ಕಪ್ರಿ. ಅವರು ನಂತರ ಆಟೋ ಚಾಲಕನ ಬ್ಯಾಂಕ್ ವಿವರಗಳನ್ನು ಕೂಡ ಪಡೆದುಕೊಂಡು ಟ್ವಿಟ್ಟರಿನಲ್ಲಿ ಹಾಕಿದ್ದರು. ಇದು ಮುಂಬೈ ಮಿರರ್ ನಲ್ಲಿ ಪ್ರಕಟವಾಗುತ್ತಿದ್ದಂತೆ ಸಹಾಯ ಪ್ರವಾಹೋಪಾದಿಯಲ್ಲಿ ಹರಿದುಬಂದಿದೆ.

ವಿನೋದ್ ಕಪ್ರಿಯವರು ಚಿತ್ರ ತೆಗೆಯುವಾಗ ಆತನ ಎರಡು ವರ್ಷದ ಮಗ ಆತನ ತೊಡೆಯ ಮೇಲೆ ಮಲಗಿದ್ದ. ಈ ಕರುಳು ಚುರ್ ಎನ್ನಿಸುವಂಥ ಚಿತ್ರ ಟ್ವಿಟ್ಟರ್ ಬಳಕೆದಾರರ ಹೃದಯ ತಟ್ಟಿ, ಹಲವಾರು ದಾನಿಗಳು ಹಣ ಸಹಾಯ ಮಾಡಿದ್ದಾರೆ.

ಮಮ್ಮಲ ಮರುಗಿದ ಓದುಗರು ಆತನ ಮಗ ಮುಝಮ್ಮಿಲ್, ಮಗಳು ಮುಸ್ಕಾನ್ ಮತ್ತು ಹೆಂಡತಿ ಯಾಸ್ಮಿನ್ ರಿಗೆ ಆಶ್ರಯ ನೀಡಲು ಕೂಡ ಮುಂದೆ ಬಂದಿದ್ದಾರೆ. ಸಹಾಯದಿಂದ ಗದ್ಗಿತರಾಗಿರುವ ಸಯೀದ್, ತನ್ನ ಹೆಂಡತಿ ಆರೋಗ್ಯವಂತಳಾದ ಮೇಲೆ ಸಹಾಯ ಮಾಡಿದವರಿಗೆಲ್ಲ ಅಡುಗೆ ಮಾಡಿ ಬಡಿಸುವುದಾಗಿ ಹೇಳಿದ್ದಾರೆ. ಇದನ್ನು ಓದಿದವರಿಗೆಲ್ಲ ಕಣ್ಣೀರು ಬರಲು ಇಷ್ಟು ಸಾಕಲ್ಲವೆ?

ಜನಸಾಮಾನ್ಯರು ಮಾತ್ರವಲ್ಲ, ಮುನ್ನಭಾಯಿ ಎಂಬಿಬಿಎಸ್ ಖ್ಯಾತಿಯ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಬೈಕುಲ್ಲಾ ಶಾಸಕ ವಾರಿಸ್ ಪಠಾಣ್, ಟಿವಿ ನಟ ನಕುಲ್ ಮೆಹ್ತಾ ಮುಂತಾದ ಖ್ಯಾತನಾಮರು ಕೂಡ ಸಹಾಯಹಸ್ತ ಚಾಚಿದ್ದಾರೆ. ಇನ್ನು ಕರೆ ಮಾಡಿ ಎನ್‌ಜಿಓಗಳಿಗಂತೂ ಲೆಕ್ಕವೇ ಇಲ್ಲ. ವೈದ್ಯರು ಕೂಡ ಆತನ ಹೆಂಡತಿಗೆ ಚಿಕಿತ್ಸೆ ಮಾಡಲು ಮುಂದೆ ಬಂದಿದ್ದಾರೆ.

ಉರಿಬಿಸಿಲನ್ನು ತಾಳದೆ ಮಗ ಅಳುತ್ತಿದ್ದ, ಹಸಿವೆಯಿಂದ ಬಳಲುತ್ತಿದ್ದ, ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಆಗದೆ ಕಿರಿಕಿರಿ ಅನುಭವಿಸುತ್ತಿದ್ದ. ಸಾಲದೆಂಬಂತೆ, ಆತನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಚಲಾಯಿಸುವಾಗ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸನೊಬ್ಬ 450 ರುಪಾಯಿ ದಂಡ ಕೂಡ ವಿಧಿಸಿದ್ದ.

ದೇವರ ದಯೆ, ಎಲ್ಲ ದಾನಿಗಳ ಹಾರೈಕೆಯಿಂದಾಗಿ ಒಂದಿಲ್ಲೊಂದು ದಿನ ತನ್ನ ಹೆಂಡತಿ ಆರೋಗ್ಯ ಮರಳಿ ಪಡೆಯುತ್ತಾಳೆ ಎಂದು ಹೇಳುವಾಗ ಆತನ ಕಣ್ಣಲ್ಲಿಯೂ ಹನಿ ಜಾರಿರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
See of humanity has come to the help of auto driver, whose wife is bedridden with paralysis, who had to drive auto with his two year old son on the lap. A film director Vinod Kapri posted a photo on the twitter with details of bank to help him.
Please Wait while comments are loading...