ಕೇಂದ್ರ ಸಚಿವ ನಾರಾಯಣ್ ರಾಣೆ ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು
ಮುಂಬೈ, ಆಗಸ್ಟ್ 24: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆಯವರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
'ದೇಶದ ಸ್ವಾತಂತ್ರ್ಯ ದಿನದ ಬಗ್ಗೆಯೇ ಸಿಎಂಗೆ ತಿಳಿದಿಲ್ಲ' ಎಂದು ರಾಣೆ ಸಿಎಂ ವಿರುದ್ಧ ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮಂಗಳವಾರ ಈ ಸಂಬಂಧ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದವು. ಪುಣೆಯಲ್ಲಿ ಒಂದು ದೂರು ಹಾಗೂ ನಾಸಿಕ್‌ನಲ್ಲಿ ಮತ್ತೊಂದು ದೂರನ್ನು ದಾಖಲಿಸಲಾಗಿದೆ. ದೂರಿನ ಮೇರೆಗೆ ಪೊಲೀಸರು ಕೇಂದ್ರ ಸಚಿವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಸೇನೆ ಸ್ಥಳೀಯ ಮುಖ್ಯಸ್ಥರ ದೂರಿನ ಮೇರೆಗೆ ನಾಸಿಕ್ ಸೈಬರ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನಂತರ ಕೇಂದ್ರ ಸಚಿವರ ಬಂಧನಕ್ಕೆ ಪೊಲೀಸ್ ಕಮಿಷನರ್ ಆದೇಶಿಸಿದ್ದು, ಇದಕ್ಕಾಗಿ ಡಿಸಿಪಿ ಸಂಜಯ್ ಬಾರ್ಕುಂಡ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಯುವಸೇನೆಯ ದೂರಿನ ಮೇರೆಗೆ ಪುಣೆ ನಗರದ ಚತುರ್ ಶೃಂಗಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 153 ಹಾಗೂ 505ರ ಅಡಿಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಸೋಮವಾರ ರಾಯಗಢ ಜಿಲ್ಲೆಯಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ, ಈಚೆಗೆ ಮೋದಿ ಸಂಪುಟ ಸೇರಿದ್ದ, ಮಾಜಿ ಶಿವಸೇನಾ ಮುಖ್ಯಸ್ಥ ರಾಣೆ, ಉದ್ಧವ್ ಠಾಕ್ರೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಠಾಕ್ರೆ ಆಗಸ್ಟ್ 15ರಂದು ರಾಜ್ಯದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷಗಳ ಲೆಕ್ಕವನ್ನೇ ಮರೆತಿದ್ದರು. ಮುಖ್ಯಮಂತ್ರಿಯಾದವರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರು ತಮ್ಮ ಭಾಷಣ ಸಮಯದಲ್ಲಿ, ಸ್ವಾತಂತ್ರ್ಯ ದೊರೆತು ಎಷ್ಟು ವರ್ಷವಾಯಿತು ಎಂಬುದರ ಬಗ್ಗೆ ವಿಚಾರಿಸಲು ಹಿಂದಕ್ಕೆ ವಾಲಿದರು. ನಾನು ಆ ಸಮಯ ಆ ಸ್ಥಳದಲ್ಲಿದ್ದಿದ್ದರೆ ಅವರಿಗೆ ಸರಿಯಾಗಿ ಬಾರಿಸುತ್ತಿದ್ದೆ' ಎಂದಿದ್ದರು.
ಆ ದಿನ ಭಾಷಣಕ್ಕೂ ಮುನ್ನ ಠಾಕ್ರೆ ತಮ್ಮ ಸಹಾಯಕರೊಂದಿಗೆ ಆ ಮಾಹಿತಿಗಳನ್ನು ಪರಿಶೀಲಿಸಬೇಕಾಗಿತ್ತು ಎಂದು ರಾಣೆ ಹೇಳಿದ್ದರು.
ಈ ಬೆನ್ನಲ್ಲೇ ರಾಣೆ ಹೇಳಿಕೆಗೆ ಆಡಳಿತರೂಢ ಶಿವಸೇನೆಯಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳು ಬಂದಿದ್ದವು. ಮುಂಬೈ ಹಾಗೂ ಇತರ ಸ್ಥಳಗಳಲ್ಲಿ ರಾಣೆ ವಿರುದ್ಧ ಹಲವು ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಬಾಲಠಾಕ್ರೆ ನೇತೃತ್ವದ ಪಕ್ಷದೊಂದಿಗೆ ಆರಂಭಿಕ ಅವಧಿಯಲ್ಲಿದ್ದ ನಾರಾಯಣ್ ರಾಣೆ, ಐದು ದಶಕಗಳ ಹಿಂದೆ ಚೆಂಬೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದುದನ್ನು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿತ್ತು.
ರತ್ನಗಿರಿ- ಸಿಂಧುದುರ್ಗದ ಶಿವಸೇನಾ ಸಂಸದ ವಿನಾಯಕ್ ರಾವತ್, 'ರಾಣೆ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಬಿಜೆಪಿ ನಾಯಕರನ್ನು ಮೆಚ್ಚಿಸಲು ರಾಣೆ ಶಿವಸೇನೆ ಹಾಗೂ ನಾಯಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಮೋದಿ ಅವರಿಗೆ ದಾರಿ ತೋರಿಸಬೇಕು' ಎಂದು ಟೀಕಿಸಿದ್ದರು.
ಇದೇ ಸಂದರ್ಭ, ರಾಣೆ ಜನಾಶೀರ್ವಾದ ಯಾತ್ರೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಒಟ್ಟು 42 ಎಫ್‌ಐಆರ್‌ಗಳನ್ನು ಮುಂಬೈ ಪೊಲೀಸರು ದಾಖಲಿಸಿದ್ದಾರೆ. ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ಹಾಗೂ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಮುಂಬೈ ವಿವಿಧಡೆ ನಡೆದ ಬಿಜೆಪಿ ಯಾತ್ರೆ ಸಂದರ್ಭ ಕೇಂದ್ರ ಸಚಿವ ನಾರಾಯಣ್ ರಾಣೆ ಹಾಗೂ ಪಕ್ಷದ ಕಾರ್ಯಕರ್ತರು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ಕಾರಣವಾಗಿ ಮಹಾರಾಷ್ಟ್ರ ಸರ್ಕಾರ ಹದಿನೇಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಮುಂಬೈ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 20ರವರೆಗೂ ರಾಣೆ ಹಾಗೂ ಪಕ್ಷದ ಕಾರ್ಯಕರ್ತರ ವಿರುದ್ಧ ಹತ್ತೊಂಬತ್ತು ಎಫ್‌ಐಆರ್‌ಳನ್ನು ದಾಖಲಿಸಲಾಗಿದೆ.












Click it and Unblock the Notifications