ಸಿಎಂ ಸ್ಥಾನ ಬೇಡ: ಉದ್ಧವ್ ಠಾಕ್ರೆ ಆಫರ್ ತಿರಸ್ಕರಿಸಿದ ಶಿಂದೆ
ಮುಂಬೈ, ಜೂನ್ 23: ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಸ್ಥಿತಿ ಮುಂದುವರಿದಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರಕಾರ ಲಗಾಡಿ ಎದ್ದಿದೆ. ಏಕನಾಥ್ ಶಿಂದೆ ಬಣದ ಜೊತೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಐವತ್ತಕ್ಕೂ ಹೆಚ್ಚು ಶಾಸಕರು ಏಕನಾಥ್ ಶಿಂದೆಯ ಕ್ಯಾಂಪ್‌ನಲ್ಲಿ ಇದ್ದಾರೆಂದು ಹೊಸ ಮಾಹಿತಿ ಬಂದಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ಸರಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ ಏಕನಾಥ್ ಶಿಂದೆ ಜೊತೆ ಸಂಧಾನ ಮತ್ತು ಮಾತುಕತೆ ನಡೆಸಲು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ತಮ್ಮ ಕಡೆಯ ಜನರನ್ನು ಕಳುಹಿಸಿ ಏಕನಾಥ್ ಶಿಂದೆ ಜೊತೆ ನೇರವಾಗಿ ಮಾತನಾಡಿಸಿದ್ದಾರೆ. ತಾವೇ ಖುದ್ದಾಗಿ ಫೋನ್ ಮೂಲಕ ಮಾತನಾಡಿಯೂ ಇದ್ದಾರೆ.
ಮಹಾ ಬಿಕ್ಕಟ್ಟು: ಇನ್ನೊಬ್ಬ ಶಾಸಕ ಸಿಕ್ಕರೆ, ಏಕನಾಥ್ ಶಿಂಧೆ ರೂಟ್ ಕ್ಲಿಯರ್!
ಮೂಲಗಳ ಪ್ರಕಾರ, ಏಕನಾಥ್ ಶಿಂದೆಗೆ ಸಿಎಂ ಸ್ಥಾನ ನೀಡಲು ಎಂವಿಎ ಮೈತ್ರಿಕೂಟ ಒಪ್ಪಿಕೊಂಡಿದೆ. ಉದ್ಧವ್ ಠಾಕ್ರೆ ಸಿಎಂ ಸ್ಥಾನದ ಆಫರ್ ಅನ್ನು ಶಿಂದೆ ಮುಂದೆಯೂ ಇಟ್ಟಿದ್ದಾರೆನ್ನಲಾಗಿದೆ.
ನಿನ್ನೆ ಲೈವ್ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಜನರನ್ನ ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ತಾನು ಸಿಎಂ ಸ್ಥಾನಕ್ಕೆ ಅಂಟಿ ಕೂರುವುದಿಲ್ಲ. ಯಾವಾಗ ಬೇಕಾದರೂ ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಪತ್ರ ನನ್ನ ಕೈಲಿದೆ ಎಂದು ಹೇಳಿದ್ದಾರೆ. ಅದಾದ ಬೆನ್ನಲ್ಲೇ ಅವರು ಶಿಂದೆಗೆ ಸಿಎಂ ಸ್ಥಾನದ ಆಫರ್ ಕೊಟ್ಟಿದ್ದಾರೆ.
ಶಿವಸೇನೆ ನಾಶವಾಗುವುದನಲ್ಲಿ ತಪ್ಪಿಸಲು ಮೈತ್ರಿ ಸರ್ಕಾರದಿಂದ ಹೊರಬರಬೇಕು: ಏಕನಾಥ್ ಶಿಂಧೆ

ಎನ್‌ಸಿಪಿ, ಕಾಂಗ್ರೆಸ್‌ನಿಂದಲೂ ತಂತ್ರ
ನಿನ್ನೆ ಬುಧವಾರ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಸುಪ್ರಿಯಾ ಸುಳೆ, ಸಚಿವ ಜಿತೇಂದ್ರ ಆಹವಾದ್ ಹಾಗು ಉದ್ಧವ್ ಠಾಕ್ರೆ ಅವರು ಭೇಟಿಯಾಗಿ ರಾಜಕೀಯ ವಿದ್ಯಮಾನಗಳನ್ನು ಚರ್ಚಿಸಿದ್ದಾರೆ. ಈ ವೇಳೆ, ಏಕನಾಥ್ ಶಿಂದೆಗೆ ಸಿಎಂ ಸ್ಥಾನವನ್ನು ಕೊಟ್ಟು ಸರಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ನಿರ್ಧರಿಸಲಾಯಿತು. ಅದರಂತೆ ಶಿಂದೆ ಮುಂದೆ ಸಿಎಂ ಸ್ಥಾನದ ಆಫರ್ ಕೊಡಲಾಗಿರುವುದು ತಿಳಿದುಬಂದಿದೆ. ಪಕ್ಷದ ಅಧ್ಯಕ್ಷ ಸ್ಥಾನ ಪಡೆದು ಸಿಎಂ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧ ಎಂದು ಉದ್ಧವ್ ಸ್ಪಷ್ಟವಾಗಿ ಹೇಳಿದರೆನ್ನಲಾಗಿದೆ.

ಸಿಎಂ ಸ್ಥಾನದ ಆಫರ್ ಬೇಡ ಎಂದ ಶಿಂದೆ
ಉದ್ಧವ್ ಠಾಕ್ರೆ ಕೊಟ್ಟಿರುವ ಸಿಎಂ ಸ್ಥಾನದ ಆಫರ್ ಅನ್ನು ಏಕನಾಥ್ ಶಿಂದೆ ನಯವಾಗಿಯೇ ತಿರಸ್ಕರಿಸಿದ್ದಾರೆ. ಸಾಕಷ್ಟು ಶಾಸಕರ ಬೆಂಬಲ ಹೊಂದಿರುವ ಶಿಂದೆ ತಾನು ವೈಯಕ್ತಿಕ ಲಾಭಕ್ಕೋಸ್ಕರ ಬಂಡಾಯ ಎದ್ದಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ಹಿತಾಸಕ್ತಿ ದೃಷ್ಟಿಯಿಂದ ನಡೆದುಕೊಳ್ಳುತ್ತಿದ್ದೇನೆ. ಪಕ್ಷದ ಹಿಂದುತ್ವ ಸಿದ್ಧಾಂತವನ್ನು ಬಲಿಕೊಡುವ ನಿರ್ಧಾರಗಳನ್ನು ತಾನು ತೆಗೆದುಕೊಳ್ಳುವುದಿಲ್ಲ ಎಂದು ಏಕನಾಥ ಶಿಂದೆ ಸ್ಪಷ್ಟಪಡಿಸಿದ್ದಾರೆ.

ಏಕನಾಥ್ ಶಿಂದೆ ಅಸಮಾಧಾನ ಏನು?
ಏಕನಾಥ್ ಶಿಂದೆ ಶಿವಸೇನಾ ಪಕ್ಷದಿಂದ ಬಂಡಾಯ ಏಳಲು ಒಳಗಿನ ಕಾರಣ ಏನೇ ಇರಲಿ ಅವರು ಬಾಹ್ಯವಾಗಿ ಕೊಡುತ್ತಿರುವ ಕಾರಣ ಹಿಂದುತ್ವದ್ದಾಗಿದೆ. ಶಿವಸೇನಾ ಹಿಂದುತ್ವ ಮತ್ತು ಮರಾಠ ಸ್ವಾಭಿಮಾನ ಎರಡೂ ಮೇಳೈಸಿದ ಸಿದ್ಧಾಂತದ ತಳಹದಿಯಲ್ಲಿ ನಿರ್ಮಾಣಗೊಂಡು ರೂಪುಗೊಂಡ ಪಕ್ಷವಾಗಿದೆ. ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಸರಕಾರ ರಚನೆ ಆದ ಬಳಿಕ ಶಿವಸೇನಾ ತನ್ನ ಹಿಂದುತ್ವ ಸಿದ್ಧಾಂತವನ್ನು ಕೈಚೆಲ್ಲಿದೆ ಎಂಬುದು ಏಕನಾಥ್ ಶಿಂದೆಯ ಬೇಸರ.
ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ತಮಗೆ ಹಿಂದುತ್ವದ ಪಾಠ ಹೇಳಿಕೊಟ್ಟಿದ್ದಾರೆ. ಅವರಿಂದಾಗಿ ತಾನು ಹಿಂದುತ್ವದ ಕಲಿಗಳಾಗಿದ್ದೇವೆ. ಈಗ ಶಿವಸೇನಾ ಹಿಂದುತ್ವದಿಂದ ದೂರ ಉಳಿದಿರುವ ಸಂಗತಿಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಎನ್‌ಸಿಪಿ ಮತ್ತು ಕಾಂಗ್ರೆಸ್ ಸಖ್ಯವನ್ನು ತ್ಯಜಿಸಿ ಬಿಜೆಪಿಗೆ ಶಿವಸೇನಾ ಬೆಂಬಲ ಕೊಡಬೇಕು ಎಂಬುದು ಏಕನಾಥ್ ಶಿಂದೆ ಮುಂದಿಟ್ಟಿರುವ ಬೇಡಿಕೆಯಾಗಿದೆ.

ಹಿಂದುತ್ವ ಬಿಟ್ಟಿಲ್ಲ ಎಂದ ಠಾಕ್ರೆ
ಶಿವಸೇನಾ ಹಿಂದುತ್ವ ಮರೆತಿದೆ ಎಂದು ಏಕನಾಥ್ ಶಿಂದೆ ಮಾಡಿರುವ ಆರೋಪಗಳಿಗೆ ಉದ್ಧವ್ ಠಾಕ್ರೆ ಸ್ಪಷ್ಟನೆ ನೀಡಿದ್ದು, ತಮ್ಮ ಪಕ್ಷ ಹಿಂದುತ್ವ ಸಿದ್ಧಾಂತವನ್ನು ಬಿಡುವುದಿಲ್ಲ ಎಂದಿದ್ದಾರೆ.
"ಹಿಂದುತ್ವವು ಶಿವಸೇನಾದ ಭಾಗವಾಗಿಯೇ ಇದೆ. ವಿಧಾನಸಭೆಯಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದ ಮಹಾರಾಷ್ಟ್ರದ ಮೊದಲ ಸಿಎಂ ನಾನೇ ಇರಬೇಕು. ಆದಿತ್ಯ ಠಾಕ್ರೆ ಇತ್ತೀಚೆಗೆ ಶಿಂದೆ ಜೊತೆ ಅಯೋಧ್ಯೆಗೆ ಹೋಗಿ ಬಂದರು" ಎಂದು ಉದ್ಧವ್ ತಿಳಿಸಿದ್ದಾರೆ.
"ನನ್ನ ಸ್ವಂತ ಜನರೇ ನಾನು ಸಿಎಂ ಆಗುವುದು ಬೇಡ ಅಂತಿದ್ದಾರೆ. ಸಿಎಂ ಕುರ್ಚಿಗೆ ಅಂಟಿ ಕೂರುವ ವ್ಯಕ್ತಿ ನಾನಲ್ಲ. ರಾಜೀನಾಮೆ ಪತ್ರ ಬರೆದು ಇಟ್ಟುಕೊಂಡಿದ್ದೇನೆ. ನನಗೆ ಸಂಖ್ಯೆ ಮುಖ್ಯವಲ್ಲ, ಜನರು ಮುಖ್ಯ," ಎಂದು ಉದ್ಧವ್ ಠಾಕ್ರೆ ವಿದಾಯದ ರೀತಿಯ ಮಾತುಗಳನ್ನು ಆಡಿದ್ದಾರೆ.
(ಒನ್ಇಂಡಿಯಾ ಸುದ್ದಿ)