ಆರ್ಯನ್ ಕೇಸ್: ಸಮೀರ್ ವಾಂಖೆಡೆ ಅವರ ಅತ್ತಿಗೆಯಿಂದ ನವಾಬ್ ಮಲಿಕ್ ವಿರುದ್ಧ ದೂರು
ಮುಂಬೈ ನವೆಂಬರ್ 10: ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಿರುದ್ಧ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಅತ್ತಿಗೆ ದೂರು ದಾಖಲಿಸಿದ್ದಾರೆ. ಸಮೀರ್ ಸೊಸೆ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಮಲಿಕ್ ಮತ್ತು ನಿಶಾಂತ್ ವರ್ಮಾ ವಿರುದ್ಧ ಸಲ್ಲಿಸಿದ ದೂರಿನಲ್ಲಿ ಐಪಿಸಿ ಸೆಕ್ಷನ್ 354, 354 ಡಿ, 503 ಮತ್ತು 506 ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ಕಾಯ್ದೆ 1986 ರ ಸೆಕ್ಷನ್ 4 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
ಸಮೀರ್ ವಾಂಖೆಡೆ ಅವರ ಅತ್ತಿಗೆ ಡ್ರಗ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂದು ಸಚಿವ ನವಾಬ್ ಮಲಿಕ್ ಅವರ ಇತ್ತೀಚಿನ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು. ಟ್ವೀಟ್‌ನಲ್ಲಿ ನವಾಬ್ ಮಲಿಕ್, "ಸಮೀರ್ ದಾವೂದ್ ವಾಂಖೆಡೆ, ನಿಮ್ಮ ಅತ್ತಿಗೆ ಹರ್ಷದಾ ದೀನಾನಾಥ್ ರೆಡ್ಕರ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ? ಅವರ ಪ್ರಕರಣವು ಪುಣೆ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ನೀವು ಉತ್ತರಿಸಬೇಕು. ಪುರಾವೆ ಇಲ್ಲಿದೆ" ಎಂದು ನವಾಬ್ ಬರೆದಿದ್ದರು. ನವಾಬ್ ಮಲಿಕ್ ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯ ಸ್ನ್ಯಾಪ್‌ಶಾಟ್ ಅನ್ನು ಸಹ ಪೋಸ್ಟ್ ಮಾಡಿದ್ದರು. ನವಾಬ್ ಮಲಿಕ್ ಮತ್ತು ನಿಶಾಂತ್ ವರ್ಮಾ ಅವರು ಸೋಮವಾರ ಪುಣೆಯಲ್ಲಿ ಸಮೀರ್ ವಾಂಖೆಡೆ ಅವರ ಅತ್ತಿಗೆ ವಿರುದ್ಧ ಪೊಲೀಸ್ ಪ್ರಕರಣದ ಕುರಿತು ಟ್ವೀಟ್ ಮಾಡಿದ್ದರು. ಮಲಿಕ್ ಮತ್ತು ವರ್ಮಾ ಮಾಡಿದ ಟ್ವೀಟ್‌ನಲ್ಲಿ ವಾಂಖೆಡೆ ಅವರ ಅತ್ತಿಗೆಯ ಹೆಸರಿಸಲಾಗಿದೆ. ಇದರ ಬೆನ್ನಲ್ಲೇ ನವಾಬ್ ಮಲಿಕ್ ವಿರುದ್ಧ ವಾಂಖೆಡೆ ಅವರ ಅತ್ತಿಗೆ ದೂರು ನೀಡಿದ್ದಾರೆ.
ಮಾತ್ರವಲ್ಲದೆ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದ ಆರೋಪಿಗಳು ಸಮೀರ್ ವಾಂಖೆಡೆಯನ್ನು ಬೆದರಿಸಲು ಮಲಿಕ್ ಮತ್ತು ವರ್ಮಾ ಅವರನ್ನು ಪ್ರಚೋದಿಸುತ್ತಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪಟ್ಟಭದ್ರ ಹಿತಾಸಕ್ತಿಯ ಕೆಲವು ವ್ಯಕ್ತಿಗಳು ಪುಣೆಯಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂದು ಆಕೆಯ ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣವು ಪುಣೆಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. "ಟ್ವೀಟ್‌ಗಳಲ್ಲಿ 14 ವರ್ಷಗಳ ಹಿಂದೆ ನಡೆದ ಆಪಾದಿತ ಚಟುವಟಿಕೆಗಳನ್ನು ಉಲ್ಲೇಖಿಸಲಾಗಿದೆ. ಆರೋಪಿಗಳು ನನ್ನ ಸೋದರಮಾವನನ್ನು ಬೆದರಿಸಲು ಬಯಸಿದ್ದಾರೆ. ಜೊತೆಗೆ ನನ್ನ ಜೀವನವನ್ನು ಹಾಳುಮಾಡುತ್ತಿದ್ದಾರೆ. ನನ್ನ ನಮ್ರತೆಯನ್ನು ಆಕ್ರೋಶಗೊಳಿಸಿದ್ದಾರೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೊತೆಗೆ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನದೇವ್ ವಾಂಖೆಡೆ ಅವರು ನವಾಬ್ ಮಲಿಕ್ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಾತ್ರವಲ್ಲದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಸಹೋದರಿ ಯಾಸ್ಮೀನ್ ವಾಂಖೆಡೆ ಅವರು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಚಿವ ನವಾಬ್ ಮಲಿಕ್ ಅವರು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಸಮೀರ್ ಸಹೋದರಿ ಕೂಡ ಯಾಸ್ಮೀನ್ ವಾಂಖೆಡೆ ದೂರು ನೀಡಿದ್ದಾರೆ ಮಲಿಕ್ ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಯಾಸ್ಮೀನ್ ವಾಂಖೆಡೆ ಅವರು ಆರೋಪಿಸಿದ್ದಾರೆ.
ನನ್ನನ್ನು ಆನ್‌ಲೈನ್‌ನಲ್ಲಿ ಹಿಂಬಾಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ಗಳಲ್ಲಿ ಇತ್ತೀಚೆಗೆ ನಾನು ಪೋಸ್ಟ್ ಮಾಡಿದ್ದ ನನ್ನ ವೈಯಕ್ತಿಕ ಫೋಟೋಗಳನ್ನು ಮಾಧ್ಯಮದವರಿಗೆ ಅಕ್ರಮವಾಗಿ ನೀಡುತ್ತಿದ್ದಾರೆ ಎಂದು ಯಾಸ್ಮೀನ್ ದೂರಿದ್ದಾರೆ. ಕಳೆದ ವಾರ ಯಾಸ್ಮೀನ್ ವಾಂಖೆಡೆಯವರಿಂದ ದೂರು ಸ್ವೀಕರಿಸಿದ್ದೇವೆ. ಆದರೆ, ಇಲ್ಲಿವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ಒಶಿವಾರಾ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Sameer Dawood Wankhede, is your sister-in-law Harshada Dinanath Redkar involved in the drug business ?
— Nawab Malik نواب ملک नवाब मलिक (@nawabmalikncp) November 8, 2021
You must answer because her case is pending before the Pune court.
Here is the proof pic.twitter.com/FAiTys156F
ಮುಂಬೈ ಡ್ರಗ್ ಕೇಸ್ ಕೈಗೆತ್ತಿಕೊಂಡಾಗಿನಿಂದಾಗಲೂ ಸಮೀರ್ ವಾಂಖೆಡೆ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಲೇ ಇವೆ. ಪ್ರಕರಣದ ಅರೋಪಿ ಪ್ರಭಾಕರ್ ಡ್ರಗ್ ಪ್ರಕರಣದಲ್ಲಿ 25 ಕೋಟಿ ಡೀಲ್ ನಡೆದಿದೆ ಎಂದು ದೂರಿದ್ದರು. ಇದರಲ್ಲಿ ಸಮೀರ್ ವಾಂಖೆಡೆ ಅವರು ಸೇರಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು. ಇದರೊಂದಿಗೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಸಮೀರ್ ಅವರ ಮೇಲೆ ಫೋರ್ಜರಿ ಆರೋಪಗಳನ್ನು ಮಾಡಿದ್ದಾರೆ. ಡ್ರಗ್ ಕೇಸ್‌ಗೆ ಸಂಬಂಧಿಸಿದಂತೆ ಮಾಲ್ಡೀವ್ಸ್‌ನಲ್ಲಿ ಹಣದ ವ್ಯವಹಾರ ಮಾಡಿಕೊಳ್ಳಲಾಗಿದೆ. ಈ ವೇಳೆ ಸಮೀರ್ ಕೂಡ ಮಾಲ್ಡೀವ್ಸ್‌ನಲ್ಲಿದ್ದರು ಎಂದು ನೇರವಾಗಿ ಆರೋಪ ಮಾಡಿದ್ದರು. ಸಮೀರ್ ವಿವಾಹದ ಬಗ್ಗೆ ಜೊತೆಗೆ ಸಮೀರ್ ಅವರ 'ತಾಯಿಯ ಧರ್ಮ'ದ ಮೇಲೆ ಟಾರ್ಗೆಟ್ ಮಾಡಲಾಗಿತ್ತು. ಈಗ ನವಾಬ್ ಸಮೀರ್ ಅವರ ಅತ್ತಿಗೆ ವಿರುದ್ಧ ಧ್ವನಿ ಎತ್ತಿದ್ದಾರೆ. ಇಷ್ಟೆಲ್ಲಾ ಆರೋಪಗಳನ್ನು ತಳ್ಳಿ ಹಾಕಿದ ಸಮೀರ್ ವಾಂಖೆಡೆ ತನಿಖೆಗೆ ತಾವು ಸಿದ್ಧ ಎಂದಿದ್ದಾರೆ. ನವಾಬ್ ಮಲಿಕ್ ವಿನಾಕಾರಣ ತಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆಂದು ದೂರಿದ್ದಾರೆ. ಒಟ್ಟಾರೆಯಾಗಿ ಮುಂಬೈ ಡ್ರಗ್ಸ್ ಕೇಸ್ ಬೇರೆ ಯಾವುದೋ ಹಂತಕ್ಕೆ ಬಂದು ತಲುಪುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ಸುಳ್ಳಲ್ಲ.