ಅತ್ಯಾಚಾರ ಆಗಿರಬಹುದು, ಆದರೆ ನನ್ನಿಂದಲ್ಲ: ಅಲೋಕ್ ನಾಥ್
ಮುಂಬೈ, ಅಕ್ಟೋಬರ್ 09: ಹಿಂದಿ ಕಿರುತೆರೆ ನಿರ್ಮಾಪಕಿ, ಬರಹಗಾರ್ತಿ ವಿನ್ತಾ ನಂದಾ ಅವರು ತಮ್ಮ ಮೇಲೆ ಮಾಡಿದ ಅತ್ಯಾಚಾರದ ಆರೋಪಕ್ಕೆ ಖ್ಯಾತ ಪೋಷಕ ನಟ ಅಲೊಕ್ ನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
"ಈ ಆರೋಪವನ್ನು ನಾನು ಒಪ್ಪುವುದೂ ಇಲ್ಲ, ತಳ್ಳಿಹಾಕುವುದೂ ಇಲ್ಲ. ಏಕೆಂದರೆ ನಾನೇನೇ ಹೇಳಿದರೂ ಇಂದಿನ ಕಾಲದಲ್ಲಿ ಒಬ್ಬ ಮಹಿಳೆ ಏನು ಮಾತನಾಡುತ್ತಾರೋ ಅದನ್ನಷ್ಟೇ ಜಗತ್ತು ನಂಬುತ್ತದೆ" ಎಂದು ಅವರು ಹೇಳಿದ್ದಾರೆ.
"ಅತ್ಯಾಚಾರ ನಡೆದಿದ್ದು ಸತ್ಯವಿರಬಹುದು. ಆದರೆ ಅದನ್ನು ಬೇರೆ ಯಾರೋ ಮಾಡಿದ್ದಿರಬಹುದು. ನಾನಲ್ಲ. ಯಾವತ್ತಿಗೂ ಮಹಿಳೆಯರ ಧ್ವನಿಗೆ ಹೆಚ್ಚಿನ ಬೆಲೆ ಇದೆ. ಆದ್ದರಿಂದ ನಾನು ಈಗಲೇ ಏನು ಹೇಳುವುದಕ್ಕೆ ಹೋಗುವುದಿಲ್ಲ" ಎಂದು ಅವರು ಹೇಳಿದರು.

"ನನ್ನ ಘನತೆಯನ್ನು ಹಾಳುಮಾಡೂವುದಕ್ಕೆಂದೇ ಪ್ರಯತ್ನಿಸುತ್ತಿರುವ ಜನರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲಿ? ಆಕೆ(ವಿನ್ತಾ ನಂದಾ) ಇಂದು ಏನು ಸಾಧನೆ ಮಾಡಿದ್ದಾರೋ ಅವೆಲ್ಲಕ್ಕೂ ಕಾರಣ ನಾನು. ಆದರೆ ನನ್ನ ಮೇಲೆ ಇಂಥ ಆರೋಪ ಮಾಡಿದ್ದು ನೋವಾಗಿದೆ" ಎಂದು ಅಲೋಕ್ ನಾಥ್ ಹೇಳಿದ್ದಾರೆ.
'ತಾರಾ' ಧಾರಾವಾಹಿಯಿಂದ ಪ್ರಸಿದ್ಧಿ ಪಡೆದ ನಿರ್ಮಾಪಕಿ ವಿನ್ತಾ ನಂದಾ, ಎರಡು ದಶಕಗಳ ಹಿಂದೆ ತಮ್ಮ ಮೇಲೆ ಅತ್ಯಾಚಾರ ನಡೆದಿತ್ತು, ಅದಕ್ಕೆ ಕಾರಣ 'ಸಂಸ್ಕಾರಿ' ನಟ ಎಂದು ಹೆಸರ ಮಾಡಿದ ಅತ್ಯುತ್ತಮ ನಟ ಎಂದು ಆರೋಪಿಸಿದ್ದರು. ನಂತರ ತಾವು ಅಲೋಕ್ ನಾಥ್ ಅವರ ಬಗ್ಗೆಯೇ ಆರೋಪ ಮಾಡುತ್ತಿರುವುದಾಗಿ ಚಾನೆಲ್ ವೊಂದಕ್ಕೆ ಖಚಿತಪಡಿಸಿದ್ದರು.












Click it and Unblock the Notifications