ಮಹಾರಾಷ್ಟ್ರ ಅಗ್ನಿ ಅವಘಡ: ಒಂದು ವಾರದಲ್ಲಿ ವರದಿ ಸಲ್ಲಿಕೆಗೆ ಸೂಚನೆ
ಅಹಮದ್‌ನಗರ, ನವೆಂಬರ್ 6: ಮಹಾರಾಷ್ಟ್ರದ ಅಹಮದ್‌ನಗರದ ಕೊವಿಡ್-19 ಆಸ್ಪತ್ರೆಯಲ್ಲಿ ಶನಿವಾರ ನಡೆದ ಅಗ್ನಿ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಸಿಎಂ ಉದ್ಧವ್ ಠಾಕ್ರೆ ಸೂಚನೆ ನೀಡಿದ್ದಾರೆ.
ಈ ನಡುವೆ ಆರೋಗ್ಯ ಸಚಿವ ರಾಜೇಶ್ ಟೋಪೆ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಘಟನೆಯ ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಶನಿವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಅಹಮದ್‌ನಗರದ ಕೊವಿಡ್-19 ಆಸ್ಪತ್ರೆಯ ತುರ್ತು ನಿಗಾ ಘಟಕದ ವಾರ್ಡಿನಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಮಂದಿ ಸ್ಥಳದಲ್ಲೇ ಸಜೀವದಹನವಾದರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ. ಅಹ್ಮದ್‌ನಗರದ ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ, ಬೆಂಕಿ ದುರಂತದಲ್ಲಿ 10 ರೋಗಿಗಳು ಸಾವನ್ನಪ್ಪಿದ್ದು, ಒಬ್ಬ ರೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದ್ದಾರೆ.

20ಕ್ಕೂ ಹೆಚ್ಚು ರೋಗಿಗಳ ಸ್ಥಳಾಂತರ:
ಶನಿವಾರ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಜಿಲ್ಲಾ ಉಸ್ತುವಾರಿ ಸಚಿವ ಹಸನ್ ಮುಶ್ರೀಫ್ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಜೊತೆಗೆ ಮಾತನಾಡಿದರು. ಅಹಮದ್‌ನಗರ ಕೊವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರ ರೋಗಿಗಳಿಗೆ ಯಾವುದೇ ತೊಂದರೆ ಆಗಬಾರದು. ಉಳಿದ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೊಡಿಸುವಂತೆ ನೋಡಿಕೊಳ್ಳಲು ಸಿಎಂ ಉದ್ಧವ್ ಠಾಕ್ರೆ ತಿಳಿಸಿದರು.

ಅಹಮದ್‌ನಗರ ಮುನ್ಸಿಪಲ್ ಕಾರ್ಪೊರೇಷನ್‌ನ ಮುಖ್ಯ ಅಗ್ನಿಶಾಮಕ ಅಧಿಕಾರಿ ಶಂಕರ್ ಮಿಸಾಲ್ ಈ ಬಗ್ಗೆ ಮಾತನಾಡಿದರು. ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಪೊಲೀಸರೊಂದಿಗೆ ಸೇರಿಕೊಂಡು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಹೇಳಿದರು. ಈ ವರ್ಷದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡು 15 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದರು.












Click it and Unblock the Notifications