ಕೊರೊನಾ ಸೋಂಕಿನ ಹೊಸ ಲಕ್ಷಣಗಳು ಪತ್ತೆ; ತೀವ್ರ ತಲೆನೋವು, ಶ್ರವಣ ಸಮಸ್ಯೆಯೂ ಒಂದು...
ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೊಸ ಸ್ವರೂಪ ಪಡೆಯುತ್ತಿದೆ. ರೂಪಾಂತರಗಳ ಸೃಷ್ಟಿ ಸೋಂಕಿನ ಕುರಿತ ಯಾವುದೇ ಊಹೆಯನ್ನು ಕಷ್ಟವಾಗಿಸಿದೆ. ಸೋಂಕಿನ ಸ್ವರೂಪ ಬದಲಾದಂತೆ ಅದರ ಲಕ್ಷಣಗಳೂ ಬದಲಾಗುತ್ತಿವೆ.
ಜ್ವರ, ಕೆಮ್ಮು, ಗಂಟಲು ನೋವು, ಶೀತ, ಉಸಿರಾಟದಲ್ಲಿ ಏರುಪೇರು ಕೊರೊನಾ ಸೋಂಕಿನ ಕೆಲವು ಸಾಮಾನ್ಯ ಲಕ್ಷಣಗಳಾಗಿದ್ದವು. ಈ ಲಕ್ಷಣಗಳ ಆಧಾರದ ಮೇಲೆ ಕೊರೊನಾ ಸೋಂಕಿನ ಶೀಘ್ರ ಪತ್ತೆ ಕಾರ್ಯ ಸಾಧ್ಯವಾಗಿತ್ತು. ಇದೀಗ ಇನ್ನೂ ಕೆಲವು ಹೊಸ ಲಕ್ಷಣಗಳನ್ನು ಮಹಾರಾಷ್ಟ್ರ ಕೊರೊನಾ ಸೋಂಕು ನಿಯಂತ್ರಣ ಕಾರ್ಯಪಡೆ ಪತ್ತೆ ಮಾಡಿದೆ.
'ಕೆಲವು ಕೊರೊನಾ ರೋಗಿಗಳಲ್ಲಿ ಹೊಸ ಲಕ್ಷಣಗಳು ಕಂಡುಬರುತ್ತಿವೆ. ಬಾಯಿ ಒಣಗುವಿಕೆ, ತಲೆನೋವು, ಶ್ರವಣ ತೊಂದರೆ, ಚರ್ಮದ ಸಮಸ್ಯೆಯಂಥ ಹೊಸ ಲಕ್ಷಣಗಳು ಕಂಡುಬರಬಹುದು. ಈ ಬಗ್ಗೆ ವೈದ್ಯರು ಗಮನ ಹರಿಸಬೇಕು' ಎಂದು ಕೊರೊನಾ ಕಾರ್ಯಪಡೆ ಸದಸ್ಯ ಡಾ. ರಾಹುಲ್ ಪಂಡಿತ್ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಹದಿನೇಳು ತಿಂಗಳುಗಳು ಕಳೆದ ನಂತರವೂ ಹೊಸ ಹೊಸ ಲಕ್ಷಣಗಳೊಂದಿಗೆ ಸೋಂಕು ಕಾಣಿಸಿಕೊಳ್ಳುತ್ತಲೇ ಇದೆ. ಈ ಲಕ್ಷಣಗಳ ಮೇಲೆ ಗಮನ ಹರಿಸಲೇಬೇಕಿದೆ. ಆಗ ಸೋಂಕು ಪತ್ತೆ ಕಾರ್ಯ ಹಾಗೂ ಚಿಕಿತ್ಸೆ ಸುಲಭವಾಗುವುದು ಎಂದು ಪಂಡಿತ್ ಹೇಳಿದ್ದಾರೆ.
ಸೋಂಕಿನಿಂದ ಉಂಟಾಗುವ ಉರಿಯೂತ ಅಥವಾ ಹೆಪ್ಪುಗಟ್ಟುವಿಕೆ ವಾಸನಾ ಗ್ರಹಿಕೆಯ ಮೇಲೆ ಪರಿಣಾಮ ಬೀರಿದಂತೆಯೇ ಶ್ರವಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಆರ್‌ಎನ್ ಕೂಪರ್ ಆಸ್ಪತ್ರೆಯ ಇಎನ್‌ಡಿ ಮುಖ್ಯಸ್ಥ ಡಾ. ಸಮೀರ್ ಭಾರ್ಗವ ಕೂಡ ಹೇಳಿದ್ದಾರೆ. ಈ ಲಕ್ಷಣಗಳುಳ್ಳ ಕೆಲವು ಪ್ರಕರಣಗಳು ಈಚೆಗೆ ಕಂಡುಬರುತ್ತಿವೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಎರಡನೇ ಅಲೆ ಸಂದರ್ಭ, ಡೆಲ್ಟಾ ರೂಪಾಂತರದಿಂದಾಗಿ ಕೆಲವು ಗ್ಯಾಸ್ಟ್ರೋಇಂಟೆಸ್ಟಿನಲ್ ಲಕ್ಷಣಗಳು ಗೋಚರಿಸಿದ್ದವು ಬೇಧಿ, ಸುಸ್ತು, ವಾಂತಿಯಂಥ ಕೆಲವು ಹೊಸ ಲಕ್ಷಣಗಳು ಕಾಣಿಸಿಕೊಂಡಿದ್ದವು. ಜ್ವರದೊಂದಿಗೆ ಇಂಥ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು.

ಇದೀಗ ತೀವ್ರ ತಲೆನೋವು ಕೂಡ ಸೋಂಕಿನ ಗುಣಲಕ್ಷಣಗಳಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ತೀವ್ರತಲೆನೋವು, ಶ್ರವಣ ದೋಷ, ಬಾಯಿ ಒಣಗುವಿಕೆ, ಚರ್ಮದಲ್ಲಿ ಅತಿಯಾದ ತುರಿಕೆ, ಎಂಜಿಲು ಕಡಿಮೆಯಾಗುವುದು ಇತರೆ ಲಕ್ಷಣಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಸಲ್ಲದು ಎಂದು ಸಲಹೆ ನೀಡಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣ: ದೇಶದಲ್ಲಿ ಸೋಮವಾರ 38,948 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ದೇಶದಲ್ಲಿ ವಾರದ ಕೊರೊನಾ ಪಾಸಿಟಿವಿಟಿ ದರ ಶೇ.2.58ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.2.76ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸೋಂಕಿನ ವಿರುದ್ಧ ಲಸಿಕಾ ಕಾರ್ಯಗತಿ ಹೇಗೆ ನಡೆಯುತ್ತಿದೆ?: ಕೋವಿಡ್ -19 ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಈ ವರ್ಷದ ಡಿಸೆಂಬರ್ ವೇಳೆಗೆ ದೇಶದ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ತಿಳಿಸಿದ್ದಾರೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಪೂರೈಕೆ ಹಾಗೂ ಲಭ್ಯತೆಯೊಂದಿಗೆ ಲಸಿಕಾ ಅಭಿಯಾನದ ವೇಗವನ್ನು ತೀವ್ರಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 68,46,69,521 ಜನರಿಗೆ ಲಸಿಕೆಯನ್ನು ನೀಡಲಾಗಿದೆ.
ಸುಮಾರು 1.56 ಕೋಟಿ ಡೋಸ್ ಲಸಿಕೆ ಪೈಪ್ ಲೈನ್ ನಲ್ಲಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications