ಸಲ್ಮಾನ್ ಖಾನ್ ಗೆ ಮತ್ತೆ ಹಿನ್ನಡೆ, ಏ.6ಕ್ಕೆ ವಿಚಾರಣೆ
ಮುಂಬೈ, ಏ.2: ನಟ ಸಲ್ಮಾನ್ ಖಾನ್ ಅವರ ಕಾರು ಚಾಲಕ ನೀಡಿದ್ದ ಹೇಳಿಕೆಯಿಂದ ಹೊಸ ತಿರುವು ಪಡೆದುಕೊಂಡ 2002ರ ಹಿಟ್ ಅಂಡ್ ರನ್ ಕೇಸ್ ನಲ್ಲಿ ಸಲ್ಲೂ ಮತ್ತೆ ಹಿನ್ನಡೆ ಉಂಟಾಗಿದೆ. ಕಾರು ಚಾಲಕ ಅಶೋಕ್ ಸಿಂಗ್ ಹೇಳಿಕೆಗೆ ಸರ್ಕಾರಿ ವಕೀಲರು ವಿರೋಧ ವ್ಯಕ್ತಪಡಿಸಿದ್ದು, ಸುಳ್ಳು ಹೇಳಿಕೆ ಎಂದು ವಾದಿಸಿದ್ದಾರೆ.
ಮಾ.30ರಂದು ಸಲ್ಮಾನ್ ಖಾನ್ ಅವರ ಕಾರು ಚಾಲಕ ನೀಡಿದ ಹೇಳಿಕೆ ಸಲ್ಮಾನ್ ಖಾನ್ ಗೆ ವರವಾಗಿ ಪರಿಣಮಿಸುವ ಸಾಧ್ಯತೆ ಕಂಡು ಬಂದಿತ್ತು. ಅದರೆ, ಪೊಲೀಸರ ಮುಂದೆ ಒಂದು ರೀತಿ ಹೇಳಿಕೆ, ಕೋರ್ಟ್ ಮುಂದೆ ಇನ್ನೊಂದು ರೀತಿ ಹೇಳಿಕೆ ನೀಡಿರುವ ಆಶೋಕ್ ಸಿಂಗ್ ನನ್ನು ನಂಬಬೇಡಿ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದಾರೆ. [ಸಲ್ಲೂ ಪರ ಸಾಕ್ಷಿ ಹೇಳಿದ ಡ್ರೈವರ್]
ಘಟನೆ ನಡೆದ ದಿನ 2002ರ ಸೆಪ್ಟೆಂಬರ್ 28ರಂದು ಸಲ್ಮಾನ್ ಖಾನ್ ಅವರು ಕಾರು ಚಲಾಯಿಸುತ್ತಿರಲಿಲ್ಲ ಎಂದಿದ್ದಾರೆ. ಮಾ.27ರಂದು 49ವರ್ಷ ವಯಸ್ಸಿನ ಸಲ್ಮಾನ್ ಖಾನ್ ಅವರು ಕೋರ್ಟಿಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಅದರೆ, ಈ ಎರಡು ಹೇಳಿಕೆಯನ್ನು ತಿರಸ್ಕರಿಸುವಂತೆ ಕೋರ್ಟಿಗೆ ಸರ್ಕಾರಿ ವಕೀಲರು ಮನವಿ ಸಲ್ಲಿಸಿದ್ದಾರೆ.

ಸರ್ಕಾರಿ ಅಭಿಯೋಜಕ ಪ್ರದೀಪ್ ಘರತ್ ಅವರ ವಾದ ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ.ಡಬ್ಲ್ಯು. ದೇಶಪಾಂಡೆ ಅವರು ಪ್ರಕರಣದ ವಿಚಾರಣೆಯನ್ನು ಏ.6ಕ್ಕೆ ಮುಂದೂಡಿದ್ದಾರೆ. [ಖಾನ್ ಗಳ ಚಿತ್ರಗಳನ್ನು ನಿಷೇಧಿಸಿ: ಸಾಧ್ವಿ ಪ್ರಾಚಿ ಕರೆ]
ಪ್ರಕರಣದಲ್ಲಿ ತಿರುವುಗಳು: 2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಕಾರು ಚಾಲನೆ ಮಾಡಿದ ವೇಳೆ ಸಲ್ಮಾನ್ ಅವರು ಕುಡಿದಿರಲಿಲ್ಲ. ಘಟನೆ ನಂತರ ನಾನು ಅವರನ್ನು ಭೇಟಿ ಮಾಡಿದ್ದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಪ್ರಕರಣಕ್ಕೆ ತಿರುವು ಸಿಕ್ಕಿತ್ತು. ನಂತರ ಕಾರು ಚಾಲಕ ಅಶೋಕ್ ಸಿಂಗ್ ಹೇಳಿಕೆ ಸಲ್ಮಾನ್ ಪರ ಬಂದಿತ್ತು.
ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನದ ಟೈರ್ ಸಿಡಿದು ನಿಯಂತ್ರಣ ತಪ್ಪಿತು, ಅಮೆರಿಕನ್ ಎಕ್ಸ್ ಪ್ರೆಸ್ ಬೇಕರಿ ಮುಂದಿನ ಫುಟ್ ಪಾತ್ ಮೇಲೆ ಸಾಗಿತು ಎಂದು ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದರು.
ಅದರೆ, ಕಾರು ಚಾಲಕ ಸೇರಿ ನಾಲ್ವರು ಪ್ರತ್ಯಕ್ಷ ದರ್ಶಿಗಳು ಈ ಮೊದಲು ಸಲ್ಮಾನ್ ವಿರುದ್ಧ ಸಾಕ್ಷಿ ಹೇಳಿದ್ದರು. 13 ವರ್ಷಗಳ ಕಾಲದ ಈ ಪ್ರಕರಣ ಇನ್ನೇನು ಮುಕ್ತಾಯದ ಘಟ್ಟ ತಲುಪಿದ್ದಂತೆ ಸಾಕ್ಷಿಗಳು ಉಲ್ಟಾ ಹೇಳಿಕೆ ನೀಡುತ್ತಿರುವುದೇಕೆ ಎಂದು ಸರ್ಕಾರಿ ಅಭಿಯೋಜಕ ಪ್ರದೀಪ್ ಪ್ರಶ್ನಿಸಿದ್ದಾರೆ.
ಸಲ್ಮಾನ್ ಪರ ಡಿಫೆನ್ಸ್ ಲಾಯರ್ ಶ್ರೀಕಾಂತ್ ಶಿವಾಡೆ ಅವರು ತಮ್ಮ ವಾದ ಮಂಡನೆ ಮಾಡಬೇಕಿದೆ. ಹೀಗಾಗಿ ಈ ಪ್ರಕರಣ ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಏ.6ರಂದು ವಿಚಾರಣೆ ಮುಂದುವರೆಯಲಿದೆ.












Click it and Unblock the Notifications