ಶಿವಸೇನೆಯ ಉದ್ಧವ್ ಠಾಕ್ರೆಯಿಂದ ಬಿಜೆಪಿಗೆ ಮತ್ತೆ ತಪರಾಕಿ!
ಮುಂಬೈ, ಜನವರಿ 10: "ಮೊದಲು ರೈತರ ಸಮಸ್ಯೆಗಳನ್ನು ಪರಿಹರಿಸಿ. ನಂತರ ಮೈತ್ರಿ ಬಗ್ಗೆ ಮಾತನಾಡಿ" ಎಂದು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಬಿಜೆಪಿಗೆ ತಪರಾಕಿ ಕೊಟ್ಟಿದ್ದಾರೆ!
ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಪುಡಿ ಪುಡಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಠಾಕ್ರೆ, "ಮೊದಲು ರೈತರ ಸಮಸ್ಯೆಗಳನ್ನು ಪರಿಹರಿಸಿ, ನಂತರ ಮೈತ್ರಿ ಬಗ್ಗೆ ಮಾತನಾಡಿ" ಎಂದು ಖಡಕ್ಕಾಗಿ ಹೇಳಿದ್ದಾರೆ.
ಮಹಾರಾಷ್ಟ್ರದ ಮರಾಠಾವಾಡದಲ್ಲಿ ರೈತರ ಸಭೆಯೊಂದರಲ್ಲಿ ಬುಧವಾರ ಠಾಕ್ರೆ ಮಾತನಾಡುತ್ತಿದ್ದರು. 'ರೈತರ ಸಾಲಮನ್ನಾ ಎಂಬುದು ಕಾಗದದ ಘೋಷಣೆಯಾಗಿದೆ ಅಷ್ಟೆ. ಬೆಳೆವಿಮೆ ಎಂಬುದು ಬಹುದೊಡ್ಡ ಹಗರಣವಾಗಿದೆ. ಇದರಿಂದ ಎಷ್ಟು ರೈತರಿಗೆ ಲಾಭವಾಗಿದೆ ಹೇಳಿ' ಎದು ಅವರು ಪ್ರಶ್ನಿಸಿದರು.

ಗುರುವಾರ ಮಹಾರಾಷ್ಟ್ರದ ಸೋಲಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಠಾಕ್ರೆ ಅವರು ನೀಡಿದ ಹೇಳಿಕೆ ಬಿಜೆಪಿ ವಲಯದಲ್ಲಿ ಇರಿಸುಮುರಿಸುಂಟುಮಾಡಿದೆ.
"ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಪುಡಿ ಪುಡಿ ಮಾಡುತ್ತೇನೆ" ಎಂದಿದ್ದ ಅಮಿತ್ ಶಾ ಹೇಳಿಕೆ ಶಿವಸೇನೆ ನಾಯಕರನ್ನು ಕೆರಳಿಸಿದೆ. ಶಿವಸೇನೆ ಮುಖಂಡ ರಾಮದಾಸ್ ಕದಮ್ ಈ ಹೇಳಿಕೆ ಪ್ರತಿಕ್ರಿಯೆ ನೀಡಿ, "ನಮ್ಮ ತಂಟೆಗೆ ಬಂದರೆ ಬಿಜೆಪಿಯನ್ನು ನಾವು ಹೂತು ಹಾಕುತ್ತೇವೆ" ಎಂಬ ಹೇಳಿಕೆ ನೀದಿದ್ದರು.












Click it and Unblock the Notifications