ಮುಂಬೈ ಸ್ಫೋಟದ ಪಾತಕಿ ಅಬು ಸಲೇಂಗೆ ಜೂನ್ 16 'ಡಿ' ಡೇ
1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಫಿ ಭೂಗತ ಪಾತಕಿ ಅಬು ಸಲೇಂ ಹಾಗೂ ಇತರ 6 ಮಂದಿ ಭವಿಷ್ಯ ಜೂನ್ 16ರಂದು ನಿರ್ಧಾರವಾಗಲಿದೆ. ಮುಂಬೈನ ವಿಶೇಷ ನ್ಯಾಯಾಲಯ ಜೂನ್ 16ಕ್ಕೆ ಅಂತಿಮ ತೀರ್ಪು ಪ್ರಕಟಿಸಲಿದೆ.
ಮುಂಬೈ, ಮೇ 30: 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಫಿ ಭೂಗತ ಪಾತಕಿ ಅಬು ಸಲೇಂ ಹಾಗೂ ಇತರ 6 ಮಂದಿ ಭವಿಷ್ಯ ಜೂನ್ 16ರಂದು ನಿರ್ಧಾರವಾಗಲಿದೆ. ಮುಂಬೈನ ವಿಶೇಷ ನ್ಯಾಯಾಲಯ ಜೂನ್ 16ಕ್ಕೆ ಅಂತಿಮ ತೀರ್ಪು ಪ್ರಕಟಿಸಲಿದೆ.
1995ರಲ್ಲಿ ನಡೆದ ಬಿಲ್ಡರ್ ಪ್ರದೀಪ್ ಜೈನ್ ಹತ್ಯೆ ಪ್ರಕರಣದಲ್ಲಿ ಅಬು ಸಲೇಂಗೆ ಜೀವಾವಧಿ ಶಿಕ್ಷೆಯಾಗಿದೆ. ಸದ್ಯ ಪಾತಕಿ ರಾಯ್ಗಡದ ತಲೋಜಾ ಸೆಂಟ್ರಲ್ ಜೈಲಿನಲ್ಲಿದ್ದಾನೆ.
ಸರಣಿ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಟಾಡಾ ಕೋರ್ಟ್ ನ್ಯಾಯಾಧೀಶರಾದ ಜಿ.ಎ.ಸನಪ್ ಅವರು ಎಲ್ಲಾ 7 ಆರೋಪಿಗಳ ಹಾಜರಾತಿಯಲ್ಲಿ ಅಂತಿಮ ತೀರ್ಪು ಪ್ರಕಟಣೆ ದಿನಾಂಕ ಘೋಷಿಸಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್, ಯಾಕೂಬ್ ಮೆಮನ್ ಸೇರಿ 100 ಮಂದಿ ಅಪರಾಧಿಗಳೆಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. 2015ರಲ್ಲಿ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಲಾಗಿದೆ. ಸಂಜಯ್ ದತ್ 2016ರ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
1993ರ ಮಾರ್ಚ್ 12ರಂದು ಮುಂಬೈನ ವಿವಿಧೆಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ, 257 ಮಂದಿ ಸಾವನ್ನಪ್ಪಿ, 700 ಜನರು ಗಾಯಗೊಂಡಿದ್ದರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ಬಲಗೈ ಬಂಟ ಟೈಗರ್ ಮೆಮೊನ್ ಈ ಕೃತ್ಯ ನಡೆಸಿದ್ದರು.
ಸುಮಾರು 3000 ಕೆಜಿ ಆರ್ ಡಿ ಎಕ್ಸ್ ಪೂರೈಕೆ ಮಾಡಿದ ಆರೋಪ ಅಬು ಸಲೇಂ ಮೇಲಿದೆ. ಪೋರ್ಚುಗಲ್ ನಲ್ಲಿ ತಲೆ ಮರೆಸಿಕೊಂಡಿದ್ದ ಅಬು ಸಲೇಂನನ್ನು 2005ರಲ್ಲಿ ಭಾರತಕ್ಕೆ ಕರೆ ತರಲಾಗಿತ್ತು.(ಐಎಎನ್ಎಸ್)












Click it and Unblock the Notifications