ಫೇಸ್ಬುಕ್ನಲ್ಲಿ ಅಶ್ಲೀಲ ಬರಹ ಶೇರ್ ಮಾಡಿ ಸಿಕ್ಕಿಬಿದ್ದ
ಮಂಗಳೂರು, ಮೇ 7 : ಮಹಿಳೆಯರ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಾಕಿ ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಈತ ಬೇರೆಯವರು ಹಾಕಿದ ಫೋಟೋಗಳನ್ನ ಶೇರ್ ಮಾಡಿ ಕಮೆಂಟ್ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರಿನ ಬಾಲಕೃಷ್ಣರಾಜ್ ನೀರ್ಚಾಲ್ ಎಂಬುವವರನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಮೇ 5ರಂದು ಪೆರಾಜೆ ಸಮೀಪ ಮದುವೆಗೆ ಆಗಮಿಸಿದ್ದ ಬಾಲಕೃಷ್ಣರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. [ಫೇಸ್ ಬುಕ್ ಸಂಸ್ಥಾಪಕನಿಗೆ ಕೇರಳೀಯರ ಮನವಿ]

ಘಟನೆ ವಿವರ : ಶಾಂತಾರಾಮ ಎಂಬುವವರು ಬಾಲಕಿಯರ, ಮಹಿಳೆಯರ ಫೇಸ್ಬುಕ್ ಅಕೌಂಟ್ನಿಂದ ಫೋಟೋಗಳನ್ನು ಕದ್ದು ಅವುಗಳನ್ನು ಗ್ರೂಪ್ನಲ್ಲಿ ಹಾಕಿ, ಅನವಶ್ಯಕವಾಗಿ ಕಮೆಂಟ್ಗಳನ್ನು ಮಾಡುತ್ತಿದ್ದರು. ಈ ಪೋಸ್ಟ್ಗಳನ್ನು ಬಾಲಕೃಷ್ಣರಾಜ್ ಶೇರ್ ಮಾಡುತ್ತ ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದರು. [ಮಂಗಳೂರಿನಲ್ಲಿ ಫೇಸ್ ಬುಕ್ ಉಗ್ರರು!]
ವಿಟ್ಲದ ಬಾಲಕಿಯ ಚಿತ್ರವನ್ನೂ ಇದೇ ರೀತಿ ಬಳಸಿ, ಕಮೆಂಟ್ ಮಾಡಿರುವುದರ ವಿರುದ್ಧ ಆಕೆಯ ತಂದೆ ದಾಖಲೆಗಳನ್ನು ನೀಡಿ ಏ. 13ರಂದು ವಿಟ್ಲ ಠಾಣೆಗೆ ದೂರು ನೀಡಿದ್ದರು. ವಿಟ್ಲದ ಪೊಲೀಸರು ಬಾಲಕೃಷ್ಣರಾಜ್ನನ್ನು ಬಂಧಿಸಲು ಬೆಂಗಳೂರಿಗೆ ಹೋಗಿದ್ದರೂ ಆತ ಸಿಕ್ಕಿರಲಿಲ್ಲ.
ಮೇ 5ರಂದು ಬಾಲಕೃಷ್ಣರಾಜ್ ಸಂಬಂಧಿಕರ ಮದುವೆಗೆ ಪೆರಾಜೆಗೆ ಆಗಮಿಸಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ರಾತ್ರಿ 12 ಗಂಟೆಗೆ ದಾಳಿ ಮಾಡಿ, ಆತನನ್ನು ವಶಕ್ಕೆ ಪಡೆದು, ವಿಟ್ಲ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಬಾಲಕೃಷ್ಣರಾಜ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆತನಿಗೆ ಎಚ್ಚರಿಕೆ ಕೊಟ್ಟ ಬಳಿಕ, ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.












Click it and Unblock the Notifications