ಮಂಗಳೂರು ಮಹಿಳೆಗೆ ಮಾರಕ ಮೆರ್ಸ್ ಸೋಂಕು ಇಲ್ಲ
ಮಂಗಳೂರು, ಮೇ.29: ಮಂಗಳೂರಿನ 63 ವರ್ಷದ ಮಹಿಳೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಹರಡುತ್ತಿರುವ ಮಾರಕ ವೈರಸ್ ಮಿಡ್ಲ್ ಈಸ್ಟ್ ರೆಸ್ಪರೆಟರಿ ಸಿಡ್ರೋಮ್(ಮೆರ್ಸ್) ಸೋಂಕು ಅಂಟಲಾಗಿದೆ ಎಂಬುದನ್ನು ವೈದ್ಯರು ಅಲ್ಲಗೆಳೆದಿದ್ದಾರೆ.
ಮಹಿಳೆ ಮೇ.11ಕ್ಕೆ ಉಮ್ರಾ ಯಾತ್ರೆ ಕೈಗೊಂಡಿದ್ದರು. ಮೇ.22ಕ್ಕೆ ಸೌದಿಯಿಂದ ಮರಳಿದ್ದರು. ಎರಡು ದಿನದ ಬಳಿಕ ಮಹಿಳೆಗೆ ಜ್ವರ, ಶೀತ ಕಾಣಿಸಿಕೊಂಡಿದ್ದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ತಪಾಸಣೆ ನಡೆಸಿ ಮಹಿಳೆಯ ರಕ್ತದಲ್ಲಿ ಮೆರ್ಸ್ ಸೋಂಕಿನ ಲಕ್ಷಣಗಳು ಇಲ್ಲ ಎಂದು ಕುಟುಂಬ ಕಲ್ಯಾಣ ಕಚೇರಿ ಅಧಿಕಾರಿ ಎಚ್‌ಎಸ್ ಶಿವಕುಮಾರ್ ತಿಳಿಸಿದ್ದಾರೆ.
ಅಧಿಕೃತವಾಗಿ ಮೆರ್ಸ್ ಸೋಂಕು ಇಲ್ಲದಿರುವಿಕೆಯನ್ನು ಖಚಿತ ಪಡಿಸಲು ವೈದ್ಯರು ರಕ್ತದ ಮಾದರಿಯನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಬಯೋಲಾಜಿಕಲ್ಸ್(ಎನ್‌ಐಬಿ)ಗೆ ಕಳುಹಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಕೊಲ್ಲಿ ರಾಷ್ಟ್ರಗಳಿಂದ ಮಾರಕ ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಎಂಇಆರ್‌ಎಸ್) ವೈರಸ್ ರಾಜ್ಯದಲ್ಲಿ ಹರಡದಂತೆ ತಡೆಯಲು ವಿಮಾನ ನಿಲ್ದಾಣಗಳಲ್ಲಿ ಶಂಕಿತ ಸೋಕಿತರ ತಪಾಸಣೆ ಕಾರ್ಯ ಮೇ.24 ಶನಿವಾರದಿಂದಲೇ ಆರಂಭವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರಿನ ವಿಮಾನನಿಲ್ದಾಣದಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಶನಿವಾರದಿಂದ ತಪಾಸಣೆ ನಡೆಸುತ್ತಿದ್ದು, ಸೋಂಕು ಹರಡದಂತೆ ತಡೆಗೆ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕಳೆದ ವಾರ ಮೆರ್ಸ್ ವೈರಸ್‌ಗೆ ವಿಶ್ವದಲ್ಲಿ 656 ಜನರಿಗೆ ತಗಲಿದ್ದು, 199 ಜನ ಮೃತಪಟ್ಟಿದ್ದರು. ಈ ವಾರ ಸಂಖ್ಯೆ ಹೆಚ್ಚಾಗಿದ್ದು 670 ಜನರಿಗೆ ತಗಲಿದ್ದರೆ, 207 ಮೃತಪಟಿದ್ದಾರೆ.
ಎಂಇಆರ್‌ಎಸ್ 2012ರಲ್ಲಿ ಪತ್ತೆಯಾಗಿದ್ದು ಸಾರ್ಸ್ ಸೋಂಕುಗಿಂತ ಅಪಾಯಕಾರಿಯಾಗಿದೆ. ವಿಶ್ವದ ವಿಜ್ಞಾನಿಗಳು ಈ ಸೋಂಕು ಪತ್ತೆಯಾದ ದಿನದಿಂದ ಇಲ್ಲಿಯವರೆಗೆ ಸಂಶೋಧನೆ ನಡೆಸುತ್ತಿದ್ದು, ಇದುವರೆಗೂ ಯಾವ ಪ್ರಾಣಿಯಿಂದ ಈ ಸೋಂಕು ಹರಡುತ್ತದೆ ಎನ್ನುವುದನ್ನು ತಿಳಿಸಿಲ್ಲ.
ಮೆರ್ಸ್ ವೈರಸ್ ಕುರಿತ ಕ್ಷಣ ಕ್ಷಣದ ಮಾಹಿತಿ ತಿಳಿಸಲು ವೆಬ್‌ಸೈಟನ್ನು ರೂಪಿಸಲಾಗಿದ್ದು, ಈ ವೆಬ್‌ಸೈಟ್‌ನ ಪ್ರಕಾರ ಭಾರತದಲ್ಲಿ ಇದುವರೆಗೂ ಈ ಸೋಂಕು ಎಲ್ಲಿಯೂ ಪತ್ತೆಯಾಗಿಲ್ಲ.
ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು:coronamap.com












Click it and Unblock the Notifications