ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಏಕಿಲ್ಲ?
ಮಂಗಳೂರು, ಜೂ. 06 : ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಲು ಏಕೆ ಸಾಧ್ಯವಿಲ್ಲ? ಎಂದು ಕರ್ನಾಟಕ ಹೈಕೋರ್ಟ್ ರೈಲ್ವೆ ಇಲಾಖೆಗೆ ಪ್ರಶ್ನಿಸಿದೆ. ಶಿರಾಡಿ ಘಾಟ್ ಕಾಮಗಾರಿ ನಡೆಯುವಾಗ ವಿಶೇಷ ರೈಲಿನ ಸಂಚಾರವನ್ನು ಆರಂಭಿಸಬಹುದಲ್ಲವೇ? ಎಂದು ಕೋರ್ಟ್ ವಿವರಣೆ ಕೇಳಿದೆ.
ಬೆಂಗಳೂರು ಮೂಲದ ಮೂವರು ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ರಾಮ ಮೋಹನ ರೆಡ್ಡಿ ಅವರ ವಿಭಾಗೀಯ ಪೀಠ ರೈಲು ಸೇವೆ ಬಗ್ಗೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ವಿವರಣೆ ನೀಡುವಂತೆ ಆದೇಶಿಸಿದೆ. [ಶಿರಾಡಿ ಘಾಟ್ ಕಾಮಗಾರಿಯ ಚಿತ್ರಗಳು]

ಆರು ತಿಂಗಳಿನಲ್ಲಿ ಶಿರಾಡಿ ಘಾಟ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ಹೇಳಿತ್ತು. ಆದರೆ, ಇದುವರೆಗೂ ಕಾಮಗಾರಿ ಮುಗಿದಿಲ್ಲ. ಇದರಿಂದ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ವಕೀಲರು ಅರ್ಜಿಯಲ್ಲಿ ಹೇಳಿದ್ದರು. [ಶಿರಾಡಿ ಘಾಟ್ : ಸಚಿವರು ಕೊಟ್ಟ ಗಡುವು ಮುಕ್ತಾಯ]
ಈ ಮಾರ್ಗದಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ವಿಶೇಷ ರೈಲು ಸೇವೆಯನ್ನು ಆರಂಭಿಸಲು ರೈಲ್ವೆ ಇಲಾಖೆಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಒಂದು ವಾರದೊಳಗೆ ಈ ಕುರಿತು ವಿವರಣೆ ನೀಡಬೇಕು ಎಂದು ರೈಲ್ವೆ ಇಲಾಖೆಗೆ ಸೂಚನೆ ನೀಡಿದೆ.
ಅಂದಹಾಗೆ ಕಾಂಕ್ರಿಟ್ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟ್‌ನಲ್ಲಿ 2015ರ ಜ.2ರಿಂದಲೇ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. 2015ರ ಮೇ 15ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತ್ತು. ಆದರೆ, ಗುಡುವು ಮುಗಿದರೂ ಕಾಮಗಾರಿ ಪೂರ್ಣಗೊಂಡಿಲ್ಲ.












Click it and Unblock the Notifications