• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಶಾಸಕ, ರಂಗುರಂಗಿನ ಮೊಯ್ದೀನ್ ಬಾವಾ ಈಗ ಎಲ್ಲಿದ್ದಾರೆ?

|

ಮಂಗಳೂರು, ಸೆಪ್ಟೆಂಬರ್. 23: ಈ ರಾಜಕಾರಣವೇ ಹಾಗೆ. ಅಧಿಕಾರ ಇದ್ದಾಗ ಎಲ್ಲರೂ ಇರುತ್ತಾರೆ. ಅಧಿಕಾರ ಕಳೆದುಕೊಂಡಾಗ ಹತ್ತಿರ ಸುಳಿಯೋದನ್ನೇ ಬಿಟ್ಟುಬಿಡುತ್ತಾರೆ. ಕರಾವಳಿಯ ರಂಗುರಂಗಿನ ರಾಜಕಾರಣಿ ಅಂತಲೇ ಗುರುತಿಸಿಕೊಂಡ ಮಾಜಿ ಶಾಸಕ ಮೊಯ್ದೀನ್ ಬಾವಾಗೂ ಈಗ ಅದೇ ಸ್ಥಿತಿ.

ಕಳೆದ ಬಾರಿ ಮಂಗಳೂರು ಉತ್ತರ ಶಾಸಕರಾಗಿದ್ದಾಗ ಮೊಯ್ದೀನ್ ಬಾವಾ, ಕರಾವಳಿಯಲ್ಲಿಯೇ ಅತಿ ಹೆಚ್ಚು ಅಭಿವೃದ್ಧಿ ಅನುದಾನಗಳನ್ನು ತಮ್ಮ ಕ್ಷೇತ್ರಕ್ಕೆ ತಂದು ಸುರಿದವರೆಂಬ ಹೆಸರು ಗಳಿಸಿದ್ದರು. ಹೀಗಾಗಿ ಕಾಂಗ್ರೆಸ್ಸಿನ ಮುಖಂಡರಿಂದ ಹಿಡಿದು ಪುಡಿ ರಾಜಕಾರಣಿಗಳೆಲ್ಲ ಬಾವಾ ಹಿಂದೆ-ಮುಂದೆ ಸುತ್ತಿಕೊಳ್ಳುತ್ತಿದ್ದರು.

ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಮೊಯ್ದೀನ್ ಬಾವಾ ಈಗ ಯಾರಿಗೂ ಬೇಡವಾಗಿದ್ದಾರೆ. ವಿಶೇಷ ಅಂದರೆ ಹಿಂದೆಲ್ಲ ಬಾವಾ ಅವರ ಜೊತೆಗೇ ಬಾಲಂಗೋಚಿಗಳಾಗಿ ತಿರುಗಾಡುತ್ತಿದ್ದವರು ಈಗ ಬಾವಾರಿಂದ ದೂರ ಸರಿದಿದ್ದಾರೆ.

ಮೊಯ್ದೀನ್ ಬಾವಾ ಸನ್ಮಾನಕ್ಕೆ ವಿರೋಧ, ರೌದ್ರವತಾರ ತಾಳಿದ ದೈವ

ಅಷ್ಟೇ ಅಲ್ಲ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನಲ್ಲೇ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ ಎಂಬ ಸಂಶಯ ಕೂಡ ಮೂಡುತ್ತಿದೆ.

ಇತ್ತೀಚೆಗೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲಿ ಹಾಲಿ, ಮಾಜಿಗಳೆಲ್ಲ ಗೋಷ್ಠಿಗೆ ಹಾಜರಾಗಿ ಹೊಸ ಕೆಪಿಸಿಸಿ ಅಧ್ಯಕ್ಷರ ಹತ್ತಿರ ಜಾಗ ಮಾಡಿಕೊಂಡಿದ್ದರು.

ಆದರೆ, ಮೊನ್ನೆಯಷ್ಟೆ ಮಾಜಿ ಆಗಿರುವ ಮೊಯ್ದೀನ್ ಬಾವಾ ಅವರಿಗೆ ಅಲ್ಲಿ ಕೂರುವುದಕ್ಕೂ ಜಾಗ ಇರಲಿಲ್ಲ. ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳೇ ಹಿಂದೆ ಸರಿಯಲು ಸೂಚಿಸಿದ್ದು ಸ್ವತಃ ಬಾವಾಗೆ ಇರಿಸುಮುರಿಸು ಉಂಟುಮಾಡಿತ್ತು.

ಹಿಂದೆಲ್ಲ ತನ್ನ ಹಿಂದೆ ಸುತ್ತಿಕೊಂಡಿದ್ದವರು ದಿನೇಶ್ ಗುಂಡೂರಾವ್ ಜೊತೆಗೆ ಕುಳಿತಿರಬೇಕಾದರೆ, ಮಾಜಿ ಶಾಸಕನಾಗಿ ಹಿಂದೆ ನಿಂತುಕೊಳ್ಳುವಂತಾಗಿದ್ದು ಬಾವಾಗೆ ಬೇಸರ ತರಿಸಿತ್ತು. ಹೀಗಾಗಿ ಒಂದಷ್ಟು ಹೊತ್ತು ಹಿಂಬದಿಯಲ್ಲಿ ನಿಂತಿದ್ದ ಬಾವಾ

ಕೆಲಹೊತ್ತಲ್ಲಿ ಅವಮಾನ ತಾಳಲಾರದೇ ಕಾಂಗ್ರೆಸ್ ಕಚೇರಿಯಿಂದಲೇ ಹೊರನಡೆದಿದ್ದರು. ಈ ಬಗ್ಗೆ ಮೊಯ್ದೀನ್ ಬಾವಾರನ್ನು ಒನ್ ಇಂಡಿಯಾ ಮಾತಿಗೆಳೆದಾಗ, ತನಗಾದ ನೋವನ್ನು ಒಂದೇ ಮಾತಿನಲ್ಲಿ ಬಾವಾ ಹೇಳಿಕೊಂಡಿದ್ದು ಹೀಗೆ....

 ರಾಜಕೀಯದಿಂದ ದೂರ ಸರಿಯುತ್ತಾರಾ?

ರಾಜಕೀಯದಿಂದ ದೂರ ಸರಿಯುತ್ತಾರಾ?

'ನಮ್ಮ ಕಾಂಗ್ರೆಸ್ ಸಂಸ್ಕೃತಿ ಗೊತ್ತಲ್ಲ ನಿಮಗೆ. ಅಧಿಕಾರ ಇದ್ದಾಗ ಎಲ್ಲರೂ ಜೊತೆಗಿರುತ್ತಾರೆ. ಇಲ್ಲದಾಗ ಬದಿಗೆ ಸರಿಸುತ್ತಾರೆ. ಶಾಸಕನಾಗಿ ಅಧಿಕಾರದಲ್ಲಿದ್ದಾಗ ಕಾಡಿ ಬೇಡಿ ಸರಕಾರದಿಂದ ನನಗೆ ಸಾಧ್ಯವಾಗಿದ್ದನ್ನೆಲ್ಲ ಮಾಡಿದ್ದೆ. ಅತಿ ಹೆಚ್ಚು ಅನುದಾನ ತರಿಸಿ, ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿದ್ದೆ. ಆದರೆ ಜನರು ಚುನಾವಣೆಯಲ್ಲಿ ನನ್ನ ಕೈ ಹಿಡಿಯಲಿಲ್ಲ.

ಆದರೆ, ಈಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಯೇ ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ. ಮಾಜಿ ಶಾಸಕನೆಂಬ ಗೌರವವನ್ನೂ ನೀಡುತ್ತಿಲ್ಲ. ಹೀಗಾಗಿ ಮಂಗಳೂರಿನ ಕಾಂಗ್ರೆಸ್ ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದೇನೆ. ಈಗೇನಿದ್ದರೂ ಸುರತ್ಕಲ್ ಮತ್ತು ನನ್ನ ಮನೆಯ ಅಸುಪಾಸಿನಲ್ಲಷ್ಟೇ ಓಡಾಡಿಕೊಂಡಿದ್ದೇನೆ' ಎಂದು ಸಕ್ರಿಯ ರಾಜಕೀಯದಿಂದಲೇ ದೂರ ಸರಿಯುವ ಸುಳಿವು ನೀಡಿದ್ದಾರೆ.

ಶಾಸಕ ಮೊಯ್ದೀನ್ ಭಾವಾ ದೇವಸ್ಥಾನ ಭೇಟಿ: ಮೂಲಭೂತವಾದಿಗಳ ವಿರೋಧ

 ಬಿಎಂ ಫಾರೂಕ್ ಬಾವಾರ ಕಿರಿಯ ಸಹೋದರ

ಬಿಎಂ ಫಾರೂಕ್ ಬಾವಾರ ಕಿರಿಯ ಸಹೋದರ

ಇಷ್ಟಕ್ಕೂ ಮೊಯ್ದೀನ್ ಬಾವಾ ಅವರು ಸಾಮಾನ್ಯ ವ್ಯಕ್ತಿಯಲ್ಲ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರಿನ ಖ್ಯಾತ ಉದ್ಯಮಿ ಬಿಎಂ ಫಾರೂಕ್, ಇದೇ ಮೊಯ್ದೀನ್ ಬಾವಾರ ಕಿರಿಯ ಸಹೋದರ.

ಮೊಯ್ದೀನ್ ಬಾವಾ ಕಳೆದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದಾಗಲೂ ಖರ್ಚು ನೋಡಿಕೊಂಡಿದ್ದು ಇದೇ ಫಾರೂಕ್. ಸದ್ಯ ಸಿಎಂ ಎಚ್ ಡಿ ಕುಮಾರಸ್ವಾಮಿ ಆಪ್ತನಾಗಿರೋ ಫಾರೂಕ್ ವಿಧಾನ ಪರಿಷತ್ ಸದಸ್ಯ ಕೂಡ. ಇನ್ನೊಂದೆಡೆ ಕರಾವಳಿಯಲ್ಲಿ ನೆಲೆ ಇಲ್ಲದ ಜೆಡಿಎಸ್ ಪಕ್ಷವನ್ನು ಕಾಲೂರಿಸುವಂತೆ ಮಾಡಲು ಕುಮಾರಸ್ವಾಮಿಯೂ ಪಣ ತೊಟ್ಟಿದ್ದಾರೆ.

ಕೊಲ್ಲಿ ರಾಷ್ಟ್ರಗಳಲ್ಲೂ ಮಂಗಳೂರಿನ ಮೊಯ್ದೀನ್ ಬಾವಾ ಚುನಾವಣೆ ಪ್ರಚಾರ

ಜೆಡಿಎಸ್ ಗೆ ಲಾಭ

ಜೆಡಿಎಸ್ ಗೆ ಲಾಭ

ಒಂದೆಡೆ , ಎಂಎಲ್ ಸಿ ಭೋಜೇಗೌಡ, ಮತ್ತೊಂದೆಡೆ ಬಿಎಂ ಫಾರೂಕ್ ಗೆ ಪಕ್ಷದ ಉಸ್ತುವಾರಿ ಕೊಟ್ಟು ಕರಾವಳಿಯಲ್ಲೂ ಜೆಡಿಎಸ್ ಬಲಪಡಿಸುವ ಹೊಣೆಗಾರಿಕೆ ವಹಿಸಲಾಗಿದೆ. ಇದೇ ವೇಳೆ, ಮಂಗಳೂರಿನಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಮೊಯ್ದೀನ್ ಬಾವಾರನ್ನು ಕಾಂಗ್ರೆಸಿನಲ್ಲಿಯೇ ಸೈಡ್ ಲೈನ್ ಮಾಡಿದರೆ ಜೆಡಿಎಸ್ ಲಾಭ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಅನ್ನುವಂತಿಲ್ಲ.

 ಮುಂದಿನ ನಡೆ ಕುತೂಹಲ

ಮುಂದಿನ ನಡೆ ಕುತೂಹಲ

ಇದೇನಿದ್ದರೂ, ರಾಜಕೀಯ ಲೆಕ್ಕಾಚಾರ. ಮೊಯ್ದೀನ್ ಬಾವಾ ಅಂತೂ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನಲ್ಲಿ ಸೈಡ್ ಲೈನ್ ಆಗಿದ್ದಂತೂ ಸತ್ಯ. ಹೀಗಾಗಿ ಬಾವಾರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.

English summary
Mangaluru south constituency's former MLA Mohiuddin Bava neglected By Congess party. Here is the details of Mohiuddin Bava,s story
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X