Polali Jathre: ಪೊಳಲಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ಕಲ್ಲಂಗಡಿ ಹಣ್ಣು ಬೆಳೆಯೋದು, ಯಾಕೆ? ಇಲ್ಲಿದೆ ವಿವರ

ಮಂಗಳೂರು, ಏಪ್ರಿಲ್‌, 10: ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ಹಿಂದೂ ವ್ಯಕ್ತಿಯ ಮನದಲ್ಲಿ ಸ್ಥಾನ ಪಡೆದಿರುವ ವಿಶೇಷ ಶಕ್ತಿಗಳಾಗಿವೆ. ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸದ್ಯ ಜಾತ್ರಾ ಸಂಭ್ರಮ ನಡೆಯಿತ್ತಿದೆ. ಪೊಳಲಿ ಜಾತ್ರೋತ್ಸವದ ಪ್ರಮುಖ ಆಕರ್ಷಣೆ ಪೊಳಲಿಯ ಕಲ್ಲಂಗಡಿ ಹಣ್ಣುಗಳಾಗಿವೆ.

ಬೇಸಿಗೆಯಲ್ಲಿ ತಿನ್ನಲು ಕಲ್ಲಂಗಡಿ ಹಣ್ಣು, ಕಲ್ಲಂಗಡಿ ಜ್ಯೂಸ್ ದೊರೆತರೆ ಸಾಕು ಜನ ದಗೆಯನ್ನು ಹಾರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ದೇವಸ್ಥಾನ ಪೊಳಲಿ ಕ್ಷೇತ್ರದಲ್ಲಿ ಕಲ್ಲಂಗಡಿ ಹಣ್ಣೇ ಪ್ರಸಾದ ಆಗಿರುತ್ತದೆ. ಇಲ್ಲಿ ಮಾರ್ಚ್‌ನಿಂದ ಎಪ್ರಿಲ್‌ವರೆಗೆ ನಡೆಯುವ ಒಂದು ತಿಂಗಳ ಜಾತ್ರೆಯ ವೇಳೆ ಸಂತೆಯಲ್ಲಿ ಕಲ್ಲಂಗಡಿ ಮಾರಾಟವಾಗುತ್ತದೆ. ಅದನ್ನು ಭಕ್ತರು ಪೊಳಲಿಯ ಪ್ರಸಾದವೆಂದೇ ಭಾವಿಸಿ ಎಷ್ಟು ಹಣಕೊಟ್ಟಾದರೂ ಖರೀದಿ ಮಾಡುತ್ತಾರೆ.

What is special of Polali Jatra Mahotsava?, know details

ಕಲ್ಲಂಗಡಿ ಹಣ್ಣಿನ ವಿಶೇಷತೆ

ಇಲ್ಲಿನ ಕಲ್ಲಂಗಡಿ ಹಣ್ಣನ್ನು ಪುರಾಣದ ರಕ್ತಬೀಜಾಸುರನೆಂದೇ ನಂಬಲಾಗುತ್ತದೆ. ಅದರೊಳಗಿನ ಕೆಂಪು ತಿರುಳು ರಾಕ್ಷಸನ ರಕ್ತವನ್ನು ಸಂಕೇತಿಸಿದರೆ, ಬೀಜಗಳು ಬೀಜಾಸುರಾದಿಗಳನ್ನು ಸಂಕೇತಿಸುತ್ತದೆ. ಪೊಳಲಿ ಹಾಗೂ ಮಳಲಿ ಭಾಗದಲ್ಲಿ ಬೆಳೆಸಲಾಗುವ ಕಲ್ಲಂಗಡಿ ಹಣ್ಣುಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಕೃಷಿಕರೇ ಈ ಹಣ್ಣುಗಳನ್ನು ಬೆಳೆದು ಮಾರಾಟ ಮಾಡುತ್ತಾರೆ. ಇವರು ವೃತ್ತಿಪರ ಕೃಷಿಕರಲ್ಲ, ಇದು ಅವರ ಹವ್ಯಾಸವಷ್ಟೇ.

ಇನ್ನು ಹೊರಗಿನ ಕೃಷಿಕರು ವ್ಯಾಪಾರಕ್ಕೆ ಬಂದರೆ ಕಲ್ಲಂಗಡಿ ಮಾರಾಟವಾಗುವುದೇ ಇಲ್ಲ. ಇದು ಇಲ್ಲಿನ ವಿಶೇಷವಾಗಿದೆ. ಏಕೆಂದರೆ ಸ್ಥಳೀಯ ತಳಿಯ ಆಕಾರ, ಬಣ್ಣಕ್ಕಿಂತ ಇತರ ತಳಿಯ ಕಲ್ಲಂಗಡಿ ಭಿನ್ನವಾಗಿರುತ್ತದೆ. ಪೊಳಲಿಯ ಜೀವನದಿ ಫಲ್ಗುಣಿಯ ಸುತ್ತಮುತ್ತಲಿನ ಮರಳು ಮಣ್ಣಿನ ಕೂಡಿದ್ದು, ಇದು ಕಲ್ಲಂಗಡಿ ಬೆಳೆಯಲು ಉತ್ತಮ ಪ್ರದೇಶವಾಗಿದೆ.

What is special of Polali Jatra Mahotsava?, know details

ಹಿಂದೆ ರಾಸಾಯನಿಕಗಳ ಬಳಕೆಯಿಲ್ಲದೆ ಬೆಳೆ ತೆಗೆಯಲಾಗುತ್ತಿತ್ತು. ಆದರೆ ಬೇಸರದ ಸಂಗತಿಯೆಂದರೆ ಪೊಳಲಿ ತಳಿಯೆಂದು ಖ್ಯಾತಿ ಹೊಂದಿದ್ದ ಕಲ್ಲಂಗಡಿ ತಳಿ ನಾಶವಾಗಿದೆ. ಇದೀಗ ಎಲ್ಲಾ ಹೈಬ್ರೀಡ್ ತಳಿಯದ್ದೇ ಹಾವಳಿ ಹೆಚ್ಚಾಗಿದೆ. ಕಲ್ಲಂಗಡಿ ಬೆಳೆಯುವ ಅವಧಿಯನ್ನು ಲೆಕ್ಕ ಹಾಕಿ ಡಿಸೆಂಬರ್ ಅಂತ್ಯದಿಂದ ಜನವರಿ 25ರೊಳಗೆ ಬೀಜ ಹಾಕಲಾಗುತ್ತದೆ. ನಂತರ ಬಳ್ಳಿ ಬೆಳೆದು ಮಾರ್ಚ್ ಅಂತ್ಯಕ್ಕೆ ಕಾಯಿ ಬಲಿತು ಕಲ್ಲಂಗಡಿ ಹಣ್ಣುಗಳು ದೊರೆಯುತ್ತದೆ. ಈ ಹಣ್ಣುಗಳು ಪೊಳಲಿ ಜಾತ್ರೆಯ ವೇಳೆಗೆ ಮಾರಾಟವಾಗುತ್ತದೆ.

ಜಾತ್ರೆ ಸಮಯದಲ್ಲಿ ಮಾತ್ರ ಹಣ್ಣು ಬೆಳೆಯಲಾಗುತ್ತದೆ

ವಿಶೇಷವೆಂದರೆ ಪೊಳಲಿ ಜಾತ್ರೆಯ ಹೊರತುಪಡಿಸಿ ಬೇರೆ ಸಮಯದಲ್ಲಿ ಬೀಜ ಹಾಕಿದರೂ ಇಲ್ಲಿ ಬಳ್ಳಿ ಬೆಳೆಯುವುದಿಲ್ಲ, ಕಾಯಿಯೂ ಬಿಡುವುದಿಲ್ಲ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಧಾರ್ಮಿಕ ನಂಬಿಕೆಯೊಂದಿಗೆ ಕೃಷಿಕರು ಬೆಳೆಯುತ್ತಿರುವ ಕಲ್ಲಂಗಡಿ ಹಣ್ಣನ್ನು ಭಕ್ತರು ಪ್ರಸಾದ ರೂಪದಲ್ಲಿ ಮನೆಗೆ ತೆಗೆದುಕೊಂಡು ಹೋಗುವುದು ಇಲ್ಲಿನ ವಿಶೇಷವಾಗಿದೆ.

ಪೊಳಲಿ ಚೆಂಡು ಕ್ರೀಡೆಯ ಇತಿಹಾಸ

ಪೊಳಲಿಯ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಅದು ಪೊಳಲಿಯ ಚೆಂಡು. ಶಾಸನಗಳ ಉಲ್ಲೇಖಗಳ ಪ್ರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಸ್ಥಾನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ ಆಗಿದೆ. ಇಲ್ಲಿನ ದೇವಿಯ 9ಅಡಿ ಎತ್ತರದ ಮೃಣ್ಮಯ ಮೂರ್ತಿಯೂ ಅಷ್ಟೇ ಪ್ರಸಿದ್ಧವಾಗಿದೆ.

ಒಂದು ತಿಂಗಳುಗಳ ಕಾಲ ನಡೆಯುವ ಇಲ್ಲಿನ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ ಕೊನೆಯ ಐದು ದಿನಗಳ ಕಾಲ ನಡೆಯುವ 'ಪೊಳಲಿ ಚೆಂಡು' ಆಗಿದೆ. ಇದು ಸ್ಥಳೀಯ ಭಾಷೆಯಲ್ಲಿ 'ಪುರಲ್ದಪ್ಪೆನ ಚೆಂಡು' ಎಂದೇ ಪ್ರಖ್ಯಾತಿ ಪಡೆದಿದೆ. ಪುರಾಣಗಳ ಪ್ರಕಾರ ದೇವಿಯು ಚಂಡಿಕೆಯಾಗಿ ಲೋಕ ಕಂಟಕರಾದ ಚಂಡ-ಮುಂಡರ ರುಂಡವನ್ನು ಕಡಿದು ಚೆಂಡಾಡುತ್ತಾಳೆ. ಇದರ ಪ್ರತೀಕವಾಗಿ ಪೊಳಲಿಯ ಜಾತ್ರಾ ಮಹೋತ್ಸವದ ಸಂದರ್ಭ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಚೆಂಡಾಡುವ ಸಂಪ್ರದಾಯವಿದೆ.

ಮಣೇಲ್ ಹಾಗೂ ಅಮ್ಮುಂಜೆ ಎಂಬ ಎರಡು ಊರಿನವರು ಈ ಚೆಂಡಾಟವನ್ನು ಆಡುತ್ತಾರೆ. ಚೆಂಡಾಡಲು ಕೈಕಂಬ ಮಟ್ಟಿ ಮನೆತನದವರು ಎರಡೂ ಕಡೆಯವರನ್ನು ಆಹ್ವಾನಿಸುವ ಸಂಪ್ರದಾಯವಿದೆ. ಪರ್ತಕಂಡ ಬ್ರಾಹ್ಮಣ ಮನೆತನದವರು ಚೆಂಡನ್ನು ಗದ್ದೆಗೆ ಎಸೆಯುತ್ತಾರೆ‌. ಆಟದ ಆಸಕ್ತಿ ಉಳ್ಳವರು ಮಣೇಲ್-ಅಮ್ಮುಂಜೆ ಊರಿನ ತಂಡದೊಂದಿಗೆ ಸೇರುತ್ತಾರೆ. ಮೂರು ಗೋಲು ಆಗುವವರೆಗೆ ಚೆಂಡಾಡುವ ಸಂಪ್ರದಾಯವಿದೆ. ಇಲ್ಲಿನ ಯುವಕರಿಗೆ ಚೆಂಡಾಟ ಆಡುವುದೇ ಗಮ್ಮತ್ತಾಗಿರುತ್ತದೆ.

ಈ ಚೆಂಡನ್ನು ಮೂಡುಬಿದಿರೆಯ ಸಮಗಾರ ಮನೆತನದವರು ತಯಾರಿಸುತ್ತಾರೆ. ಹೋರಿಯ ಚರ್ಮದ ಹೊರಹೊದಿಕೆಯಿರುವ ಈ ಚೆಂಡನ್ನು ಚರ್ಮ ಹಾಗೂ ತೆಂಗಿನ ನಾರಿನಿಂದ ತಯಾರಿಸಲಾಗುತ್ತದೆ. ಮೊದಲು ದಪ್ಪ ಚರ್ಮವನ್ನು ಆಯ್ಕೆ ಮಾಡಿ ಅದನ್ನು ವೃತ್ತಾಕಾರವಾಗಿ ಕತ್ತರಿಸಿ ಅರ್ಧದವರೆಗೆ ಚರ್ಮದ ದಾರದಿಂದ ಹೊಲಿಯಲಾಗುತ್ತದೆ. ಬಳಿಕ ಅದಕ್ಕೆ ತೆಂಗಿನನಾರು ತುಂಬಿಸಿ ಬಿಗಿದು ಚೆಂಡಿನಾಕಾರಕ್ಕೆ ತಂದು ಸಂಪೂರ್ಣವಾಗಿ ಹೊಲಿಯಲಾಗುತ್ತದೆ. ಹೀಗೆ ಪ್ರತೀ ವರ್ಷವೂ ಹೊಸದಾಗಿ ಚೆಂಡನ್ನು ತಯಾರಿಸಲಾಗುತ್ತದೆ.

ವಿಶೇಷವೆಂದರೆ ಪೊಳಲಿ ಚೆಂಡಿನ ಆಟ ಆಡುವಾಗ ನಾಲ್ಕು ಹನಿಯಾದರೂ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಹಲವಾರು ದೇವಾಲಯಗಳ ಜಾತ್ರೆಯ ವೇಳೆ ಚೆಂಡು ಉತ್ಸವ ಇರುತ್ತದೆ. ಆದರೆ ಪೊಳಲಿಯ ಚೆಂಡಿನಷ್ಟು ಯಾವುದೂ ಪ್ರಸಿದ್ಧಿಯಲ್ಲ ಅನ್ನೋದೇ ಇಲ್ಲಿನ ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+