ಮಳೆಗಾಗಿ ನೇತ್ರಾವತಿ ನದಿ ದಡದಲ್ಲಿ ವರುಣ ಹೋಮ
ಮಂಗಳೂರು, ಜೂನ್ 06: ನೀರಿನ ಸಮಸ್ಯೆ ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದೀಗ ಹೋಮ ಹವನಗಳ ಮೂಲಕ ಮಳೆಗಾಗಿ ಪ್ರಾರ್ಥಿಸಲಾಗುತ್ತಿದೆ. ನೇತ್ರಾವತಿ ನದಿ ಮತ್ತು ಮೃತ್ಯುಂಜಯ ಹೊಳೆ ಸಂಗಮವಾಗುವ ಧರ್ಮಸ್ಥಳ ಬಳಿಯ ಕಲ್ಮಂಜದ ಪಜಿರಡ್ಕ ಎಂಬಲ್ಲಿ ವರುಣ ಹೋಮವನ್ನು ಇಂದು ನೆರವೇರಿಸಲಾಗಿದೆ.
ಬೆಂಗಳೂರಿನ ಜೋಡಿ ಮುನೇಶ್ವರ ದೇವಸ್ಥಾನದ ತಂಡ ನದಿ ದಡದಲ್ಲಿ ವಿಶೇಷ ಪೂಜೆ ಹಾಗು ವರುಣ ಹೋಮವನ್ನು ನೆರವೇರಿಸಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ12 ಗಂಟೆ ತನಕ ಈ ಹೋಮ ನಡೆದಿದೆ. ಪಜಿರಡ್ಕದ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮಂಡಳಿ ತಂಡಕ್ಕೆ ಸಾಥ್ ನೀಡಿದ್ದು, ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

ಮಳೆಯಿಲ್ಲದೇ ನೇತ್ರಾವತಿ ನದಿ ಬತ್ತಿ ಹೋಗಿದ್ದು, ಈಗ ನೇತ್ರಾವತಿ ನದಿಯಲ್ಲೇ ವರುಣ ಹೋಮ ನಡೆಸಿ ವರುಣ ದೇವ ಕೃಪೆ ತೋರುವಂತೆ ಪ್ರಾರ್ಥನೆ ಮಾಡಿದ್ದಾರೆ. ಜೊತೆಗೆ ಮಳೆಗಾಗಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸರ್ಕಾರದ ವತಿಯಿಂದ ವಿಶೇಷ ಪೂಜೆ ನಡೆಸಲಾಗುತ್ತಿದೆ. ಇತ್ತೀಚೆಗೆ ಶೀಘ್ರ ಮಳೆಗಾಗಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿತ್ತು .












Click it and Unblock the Notifications