Vande Bharat; ರೈಲು ನಿರ್ವಹಣೆಗೆ ಮಂಗಳೂರು ನಿಲ್ದಾಣಕ್ಕೆ ಹೊಸ ಸೌಲಭ್ಯ
ಮಂಗಳೂರು, ಸೆಪ್ಟೆಂಬರ್ 15; ಕರ್ನಾಟಕದ ವಿವಿಧ ಮಾರ್ಗದಲ್ಲಿ ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಬೇಕು ಎಂಬ ಬೇಡಿಕೆ ಇದೆ. ಸದ್ಯ ಎರಡು ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸುತ್ತಿದೆ. ಮಂಗಳೂರಿಗೆ ಶೀಘ್ರವೇ ವಂದೇ ಭಾರತ್ ರೈಲು ಸಿಗಲಿದೆ ಎಂಬ ಮಾಹಿತಿ ಇದೆ.
ಪಾಲಕ್ಕಾಡ್ ರೈಲ್ವೆ ವಿಭಾಗ ಕೇರಳದಲ್ಲಿ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಲು ಬಯಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಈ ರೈಲುಗಳ ನಿರ್ವಹಣೆಗೆ ಬೇಕಾದ ಮೂಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, "ಬೆಂಗಳೂರು-ಮಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಮಂಗಳೂರಿಗೆ ವಂದೇ ಭಾರತ್ ರೈಲು ಸಂಪರ್ಕ ಸಿಗಲಿದೆ" ಎಂದು ಹೇಳಿದ್ದಾರೆ. ಬೆಂಗಳೂರು-ಮಂಗಳೂರು, ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಆರಂಭಿಸಬೇಕು ಎಂಬುದು ಬೇಡಿಕೆಯಾಗಿದೆ.
ಮಂಗಳೂರು ನಿಲ್ದಾಣದಲ್ಲಿ ಹೊಸ ಸೌಲಭ್ಯ; ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿರ್ವಹಣೆಗಾಗಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ನಿಲ್ದಾಣದಲ್ಲಿರುವ 3 ಪಿಟ್‌ಲೈನ್‌ಗಳ ಪೈಕಿ ಒಂದರಲ್ಲಿ Over Head equipment(OHE) ಲೈನ್ ಅಳವಡಿಕೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ರೈಲುಗಳ ನಿರ್ವಹಣೆ ಮಾಡುವ ಪಿಟ್‌ಲೈನ್‌ಗಳಿಗೆ ವಿದ್ಯುತ್ ಚಾಲಿನ ಓಹೆಚ್‌ಇ ಸಂಪರ್ಕ ನೀಡುವುದಿಲ್ಲ. ರೈಲುಗಳ ಸ್ವಚ್ಚತೆ, ಮೆಕಾನಿಕಲ್ ಮತ್ತು ಎಲೆಕ್ಟ್ರಿಕ್ ಪರಿಶೀಲನೆ, ರಿಪೇರಿ ಕೆಲಸಗಳಿಗೆ ಪಿಟ್‌ಲೈನ್‌ಗಳಲ್ಲಿ ಓಹೆಚ್‌ಇ ಅಗತ್ಯವಿಲ್ಲ. ಪಿಟ್‌ಲೈನ್‌ಗಳಲ್ಲಿ ನೀರು ಬಳಕೆ ಹೆಚ್ಚಿರುವುದರಿಂದಲೂ ಅಲ್ಲಿಗೆ ವಿದ್ಯುತ್ ಸಂಪರ್ಕ ಕೊಡುವುದಿಲ್ಲ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸದ್ಯ 3 ಪಿಟ್ ಲೈನ್‌ಗಳಿವೆ. ನಿಲ್ದಾಣದಲ್ಲಿ ಎರಡು ಹಳೆಯ ಪಿಟ್ ಲೈನ್ ಇತ್ತು. ಹೊಸದಾಗಿ ಮತ್ತೊಂದು ಪಿಟ್‌ಲೈನ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಹೊಸ ಪಿಟ್‌ಲೈನ್ ಅನ್ನು ವಂದೇ ಭಾರತ್ ರೈಲುಗಳ ನಿರ್ವಹಣೆಗಾಗಿಯೇ ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.
ಡಿಸೆಲ್ ಇಂಜಿನ್ ಪಿಟ್‌ಲೈನ್‌ಗಳಲ್ಲಿ ವಂದೇ ಭಾರತ್ ರೈಲುಗಳ ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ರೈಲ್ವೆ ಇಲಾಖೆ ಒಂದು ಪಿಟ್‌ಲೈನ್‌ಗೆ ಓಹೆಚ್ಇ ಸೌಲಭ್ಯವನ್ನು ನೀಡಿದ್ದು, ಇಲ್ಲಿಯೇ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ತೀರ್ಮಾನಿಸಿದೆ.
ಪಾಲಕ್ಕಾಡ್ ವಿಭಾಗ ಕಳೆದ ಕೆಲವು ತಿಂಗಳ ಹಿಂದೆ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು 60 ಲಕ್ಷ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಒದಗಿಸಲು ಟೆಂಡರ್ ಕರೆದಿತ್ತು. ಒಟ್ಟು 8 ಬೋಗಿಗಳ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಬೇಕಾದ ಸೌಲಭ್ಯವನ್ನು ಇಲ್ಲಿ ಒದಗಿಸಲಾಗುತ್ತಿದೆ.
ಆಗಸ್ಟ್ ತಿಂಗಳಿನಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ ವಂದೇ ಭಾರತ್ ರೈಲುಗಳನ್ನು ಮಂಜೂರು ಮಾಡಲಾಗಿದೆ. ರೈಲ್ವೆ ಮಂಡಳಿಯ ಅಂತಿಮ ಆದೇಶದ ಬಳಿಕ ಈ ರೈಲುಗಳು ಯಾವ ಮಾರ್ಗದಲ್ಲಿ ಓಡಲಿವೆ ಎಂಬುದು ತಿಳಿಯಲಿದೆ.
ಮಂಗಳೂರು-ಮಡಗಾಂವ್ ನಡುವೆ ಮೊದಲ ವಂದೇ ಭಾರತ್ ರೈಲು ಓಡಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮಂಗಳೂರು ಮತ್ತು ಎರ್ನಾಕುಲಂ ನಡುವೆ ಸಹ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಿದೆ. ಯಾವ ಮಾರ್ಗದಲ್ಲಿ ರೈಲು ಓಡಿದರೂ ಸಹ ಮಂಗಳೂರಿಗೆ ವಂದೇ ಭಾರತ್ ಸಂಪರ್ಕ ಸಿಗುವುದಂತೂ ಖಚಿತವಾಗಿದೆ.
2022ರ ನವೆಂಬರ್‌ನಲ್ಲಿ ಕರ್ನಾಟಕಕ್ಕೆ ಮೊದಲ ವಂದೇ ಭಾರತ್ ರೈಲು ಸಿಕ್ಕಿತ್ತು. ಮೈಸೂರು-ಬೆಂಗಳೂರು-ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಈ ರೈಲು ಸಂಚಾರ ನಡೆಸುತ್ತಿದೆ. 2023ರಲ್ಲಿ ರಾಜ್ಯಕ್ಕೆ ಮತ್ತೊಂದು ರೈಲು ಸಿಕ್ಕಿತ್ತು. ಧಾರವಾಡ-ಬೆಂಗಳೂರು ವಯಾ ಹುಬ್ಬಳ್ಳಿ ನಡುವೆ ಈ ರೈಲು ಸಂಚಾರ ನಡೆಸುತ್ತಿದೆ.












Click it and Unblock the Notifications