ಮಂಗಳೂರು : ವ್ಯಾಪಾರಿಗಳ ಜಗಳದಲ್ಲಿ ಜನರಿಗೆ ಮೀನಿನ ಲಾಭ
ಮಂಗಳೂರು, ಅಕ್ಟೋಬರ್ 08 : ಉಪ್ಪಿನಂಗಡಿಯ ಆಲಂಕಾರು ಪೇಟೆಯಲ್ಲಿ ಮೀನಿನ ಸುಗ್ಗಿ ಆರಂಭವಾಗಿದೆ. ಇಬ್ಬರು ವ್ಯಾಪಾರಿಗಳ ನಡುವಿನ ಪೈಪೋಟಿಯಿಂದಾಗಿ ಸ್ಥಳೀಯರಿಗೆ ಹೆಚ್ಚು ಉಪಯೋಗವಾಗುತ್ತಿದ್ದು, ಕಡಿಮೆ ಬೆಲೆಗೆ ಮೀನು ತಿನ್ನುವ ಅವಕಾಶ ಸಿಕ್ಕಿದೆ.
ಕಳೆದ ಕೆಲವು ದಿನಗಳಿಂದ ಭಾರೀ ದರ ಏರಿಕೆ ಕಂಡಿದ್ದ ಬಂಗಡೆ ಮೀನು ಬುಧವಾರ ಬೆಳಗ್ಗೆ ಅಲಂಕಾರಿನಲ್ಲಿ 100 ರೂಪಾಯಿಗೆ 4ಕೆಜಿ ದೊರೆಯುತ್ತಿತ್ತು. ಸಂಜೆಯ ವೇಳೆಗೆ ಮಾರುಕಟ್ಟೆಯಲ್ಲಿ 100 ರೂಪಾಯಿಗೆ 5ಕೆಜಿ ಬಂಗಡೆ ಮತ್ತು ಭೂತಾಯಿ ಮೀನು ಮಾರಾವಾಗಿದೆ. [ಮಂಗಳೂರು : 8 ಲಕ್ಷ ರೂ.ಗಳ ಮೀನು ಕಳವು!]

ಮಾರುಕಟ್ಟೆ ಮತ್ತು ರಸ್ತೆ ಬದಿ ವ್ಯಾಪಾರಿಗಳ ನಡುವಿನ ತೀವ್ರ ಪೈಪೋಟಿಯೇ ಮೀನನ ದರ ಇಳಿಕೆಗೆ ಕಾರಣವಾಗಿದೆ. 'ಇಬ್ಬರ ಪೈಪೋಟಿಯಿಂದಾಗಿ ಗ್ರಾಹಕರಿಗೆ ಲಾಭವಾಗುತ್ತಿದೆ. ಕಡಿಮೆ ಬೆಲೆಗೆ ಸಿಕ್ಕಿದ ಮೀನು ತೆಗೆದುಕೊಂಡು ಹೋಗುತ್ತಿದ್ದೇವೆ' ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು. [ಕರಾವಳಿ ತೀರ ಮಂಗಳೂರಿನಲ್ಲಿ ತಿನ್ನಲು ಮೀನು ಸಿಕ್ತಿಲ್ಲ!]
ಪೈಪೋಟಿಗೆ ಕಾರಣವೇನು? : ಆಲಂಕಾರು ಪೇಟೆಯಲ್ಲಿನ ಖಾಸಗಿ ಮೀನು ಮಾರುಕಟ್ಟೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಉಪ್ಪಿನಂಗಡಿ ಮೂಲದ ವ್ಯಾಪಾರಿಯೊಬ್ಬರು ಮೀನು ಮಾರಾಟ ಮಾಡುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳ ಹಿಂದೆ ಉಪ್ಪಿನಂಗಡಿ ಮೂಲದ ಮತ್ತೊಬ್ಬ ವ್ಯಾಪಾರಿ ಮಾರುಕಟ್ಟೆ ಸಮೀಪವೇ ಲಾರಿ ನಿಲ್ಲಿಸಿಕೊಂಡು ವ್ಯಾಪಾರ ಆರಂಭಿಸಿದ್ದಾರೆ.
ಮಾರುಕಟ್ಟೆಯಲ್ಲಿನ ಮೀನಿಗಿಂತ ಲಾರಿಯ ಮೀನಿನ ವ್ಯಾಪಾರಿಯ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ಜನರು ಅತ್ತ ಹೋಗಲು ಆರಂಭಿಸಿದರು. ಇದರಿಂದಾಗಿ ಇಬ್ಬರ ನಡುವೆ ಸಣ್ಣ ಜಗಳ ಆರಂಭವಾಗಿತ್ತು. ಆದರೆ, ಲಾರಿಯ ವ್ಯಾಪಾರಿ ಮಾತ್ರ ಮೀನು ಮಾರಾಟ ಮುಂದುವರೆಸಿದ್ದ. [ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ]
ಖಾಸಗಿ ಮಾರುಕಟ್ಟೆಯ ಮಾಲೀಕ ಇಬ್ಬರ ಜಗಳ ನೋಡಿ, ಮಾರುಕಟ್ಟೆ ವ್ಯಾಪಾರಿಯನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಈಗ ವ್ಯಾಪಾರಿಗಳು ರಸ್ತೆಬದಿಯಲ್ಲಿಯೇ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ವಿವಾದ ನೋಡಿ ಗ್ರಾಮ ಪಂಚಾಯಿತಿ ವ್ಯಾಪಾರಿಗಳ ಸಭೆ ಕರೆದು ಅನುಮತಿ ಪಡೆಯುವಂತೆ ಸೂಚನೆ ನೀಡಿತು.
ಪಂಚಾಯತಿಯ ನಿಯಮದಂತೆ ಎಲ್ಲಾ ಹಸಿ ಮೀನು ಮಾರಾಟಗಾರರು 2016ರ ಮಾರ್ಚ್ 31ರ ತನಕದ ಪರವಾನಿಗೆಗಾಗಿ 20 ಸಾವಿರ ರೂ. ಪಾವತಿ ಮಾಡಬೇಕಾಗಿತ್ತು. ಆಗ, ಖಾಸಗಿ ಮಾರುಕಟ್ಟೆ ಮಾಲೀಕ ಕೆಲಲಾರಿಯಲ್ಲಿ ಮೀನು ಮಾರುತ್ತಿದ್ದವರಿಗೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಇದರಿಂದ ಕೋಪಗೊಂಡಿರುವ ಹಳೆಯ ಮಾರುಕಟ್ಟೆ ಮೀನು ವ್ಯಾಪಾರಿ ದರ ಕಡಿತ ಮಾಡಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈತನಿಗೆ ಬುದ್ಧಿ ಕಲಿಸಬೇಕೆಂದು ನೂತನ ಮಾರುಕಟ್ಟೆ ವ್ಯಾಪಾರಿಯೂ ದರ ಕಡಿತಮಾಡಿದ್ದಾರೆ. ಇದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮೀನು ಸಿಗುತ್ತಿದೆ.












Click it and Unblock the Notifications