ಲೋಕಸಭೆ ಚುನಾವಣೆ ಹೊತ್ತಲ್ಲಿ ಮಂಗಳೂರಿಗೆ ಕೇಂದ್ರದ ಉಡುಗೊರೆ
ಮಂಗಳೂರು, ಫೆಬ್ರವರಿ 13: ಲೋಕಸಭೆ ಚುನಾವಣೆ ಹತ್ತಿರದಲ್ಲಿರುವಾಗ ಕೇಂದ್ರ ಸರ್ಕಾರ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಈ ಕುರಿತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಮಂಗಳೂರಿನಲ್ಲಿ Central Government Health Scheme (CGHS) ಅಡಿ ವೆಲ್‌ನೆಸ್ ಸೆಂಟರ್ ತೆರೆಯಲು ಒಪ್ಪಿಗೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಂಸದ ನಳಿನ್ ಕುಮಾರ್ ಕಟೀಲ್, "ನಮ್ಮ ಬಹುದಿನ ಬೇಡಿಕೆಯಾದ CGHS ವೆಲ್ ನೆಸ್ ಸೆಂಟರ್ ಅನ್ನು ಮಂಗಳೂರಿನಲ್ಲಿ ತೆರೆಯಲು ನಮ್ಮ ನೆಚ್ಚಿನ ಪ್ರಧಾನಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ" ಎಂದು ಹೇಳಿದ್ದಾರೆ.
"ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ Mansukh Mandaviya ಅವರಿಗೆ ವಂದನೆಗಳು. ಇದರಿಂದ ನಮ್ಮ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ 50ಕ್ಕೂ ಅಧಿಕ ಕೇಂದ್ರ ಸರ್ಕಾರದ ಇಲಾಖೆಗಳ ಸುಮಾರು 5,500 ಉದ್ಯೋಗಿಗಳು, 29,000ಕ್ಕೂ ಅಧಿಕ ನಿವೃತ್ತ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ" ಎಂದು ತಿಳಿಸಿದ್ದಾರೆ.
ಏನಿದು ವೆಲ್ ನೆಸ್ ಸೆಂಟರ್?; ಸಿಜಿಎಚ್‌ಎಸ್ ಯೋಜನೆಯಡಿ ವೆಲ್‌ನೆಸ್ ಸೆಂಟರ್ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಪ್ರಾರಂಭವಾಗಲಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು, ಅವರ ಅವಲಂಬಿತರು ಆರೋಗ್ಯ ಸೇವೆಯನ್ನು ಪಡೆಯಬಹುದು.
ಸ್ವಾತಂತ್ರ್ಯ ಹೋರಾಗಾರರು, ಮಾಜಿ ರಾಜ್ಯಪಾಲರು, ಮಾಜಿ ಲೆಫ್ಟಿನೆಂಟ್ ಗೌರ್ನರ್‌ಗಳು, ಹೈಕೋರ್ಟ್ ನಿವೃತ್ತ ನ್ಯಾಯೂರ್ತಿಗಳು, ರೈಲ್ವೆ ಬೋರ್ಡ್ ಉದ್ಯೋಗಿಗಳು, ಮಾಜಿ ಮತ್ತು ಹಾಲಿ ಸಂಸದರು, ಅಂಚೆ ಇಲಾಖೆ ಉದ್ಯೋಗಿಗಳು ಸಹ ಯೋಜನೆ ಫಲಾನುಭವಿಗಳು.
ಬೇರೆ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಸಿಜಿಎಚ್‌ಎಸ್ ಅಡಿ ಚಿಕಿತ್ಸಾ ವೆಚ್ಚ ಕಡಿಮೆ ಇರುತ್ತದೆ. ಒಪಿಡಿ ದರ 350 ರೂ., ಐಡಿಪಿ ಸಲಹೆ 350 ರೂ., ಐಸಿಯು ಸರ್ವೀಸ್ ಚಾರ್ಜ್ 5,400 ರೂ., ಆಸ್ಪತ್ರೆಯ ಜನರಲ್ ರೂಂ ಬಾಡಿಗೆ 1,500 ರೂ., ಖಾಸಗಿ ರೂಂ ದರ 4,500 ರೂ. ಆಗಿರುತ್ತದೆ.
2023ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಬೇಡಿಕೆಯಂತೆ ಯೋಜನೆಯಡಿ ವಿವಿಧ ಘಟಕಗಳ ವೆಚ್ಚಗಳನ್ನು ಪರಿಷ್ಕರಣೆ ಮಾಡಿತ್ತು. ಐಸಿಯು ಶುಲ್ಕಗಳು ಮತ್ತು ಕೊಠಡಿ ಬಾಡಿಗೆಗಳ CGHS ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿತ್ತು.
CGHS ಅಡಿಯಲ್ಲಿ ಪ್ರಕ್ರಿಯೆಯನ್ನು ಸಹ ಈಗ ಸರಳಗೊಳಿಸಲಾಗಿದೆ. ಮೊದಲು CGHS ಫಲಾನುಭವಿಯು ಸ್ವಾಸ್ಥ್ಯ ಕೇಂದ್ರಕ್ಕೆ ಸ್ವತಃ ಭೇಟಿ ನೀಡಿ ಆಸ್ಪತ್ರೆಗೆ ರೆಫರಲ್ ತೆಗೆದುಕೊಳ್ಳಬೇಕಾಗಿತ್ತು. ಆದರೆ ಫಲಾನುಭವಿಗೆ ಹೋಗಲು ಸಾಧ್ಯವಾಗದಿದ್ದರೆ, ಅವನು ತನ್ನ ಪರವಾಗಿ ಯಾರನ್ನಾದರೂ ತನ್ನ ದಾಖಲೆಗಳೊಂದಿಗೆ ಕೇಂದ್ರಕ್ಕೆ ಕಳುಹಿಸಬಹುದು. ದಾಖಲೆಗಳನ್ನು ಪರಿಶೀಲಿಸಿದ ನಂತರ ಫಲಾನುಭವಿಯನ್ನು ಆಸ್ಪತ್ರೆಗೆ ಹೋಗಲು ವೈದ್ಯಕೀಯ ಅಧಿಕಾರಿ ಸೂಚಿಸಬಹುದು. ಇದಲ್ಲದೆ, CGHS ಫಲಾನುಭವಿಯು ವೀಡಿಯೊ ಕರೆ ಮೂಲಕ ರೆಫರಲ್ ತೆಗೆದುಕೊಳ್ಳಬಹುದು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳೂರು, ಶಿವಮೊಗ್ಗ ಸೇರಿದಂತೆ ದೇಶದ 20 ನಗರದಲ್ಲಿ ವೆಲ್‌ನೆಸ್ ಸೆಂಟರ್ ತೆರೆಯಲು ಒಪ್ಪಿಗೆ ನೀಡಿದೆ. ಈ ಕುರಿತು ಸಚಿವರು ಸಂಸದರಿಗೆ ಪತ್ರವನ್ನು ಬರೆದು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸಚಿವ ಮನ್ಸುಖ್ ಮಾಂಡವೀಯ ಭೇಟಿ ಮಾಡಿ ಮಂಗಳೂರಿನಲ್ಲಿ ವೆಲ್‌ನೆಸ್ ಸೆಂಟರ್ ಆರಂಭಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಈಗ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ.












Click it and Unblock the Notifications