ಗೋಮಾಂಸ ತಿನ್ನುವೆ ಎಂದ ಸಿ.ಎಂ ಕ್ಷಮೆ ಕೇಳಲಿ: ಶೋಭಾ ಕರಂದ್ಲಾಜೆ
ಉಡುಪಿ, ನವೆಂಬರ್, 03: ಗೋಮಾಂಸ ತಿನ್ನುತ್ತೇನೆ ಎಂದು ಹೇಳಿ ರಾಜ್ಯದ ಜನತೆಗೆ ಮತ್ತು ರೈತರಿಗೆ ನೋವುಂಟು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ರಾಜೀನಾಮೆ ನೀಡಬೇಕು ಇಲ್ಲವೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು,'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಇವರು ಕೇವಲ ಮತಕ್ಕಾಗಿ ರಾಜಕಾರಣ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.['ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ']

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋತಿದ್ದಾರೆ. ಇದರಿಂದ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಮುಖ್ಯಮಂತ್ರಿಯವರು ಕೇವಲ ಮತಕ್ಕಾಗಿ ಏಕಪಕ್ಷೀಯವಾಗಿ ವರ್ತಿಸುವುದು ಸಮಂಜಸವಲ್ಲ ಎಂದು ಕಿವಿಮಾತು ಹೇಳಿದ್ದಾರೆ.
ಬಿಜೆಪಿ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ಯಾವುದೇ ಕೋಮು ಗಲಭೆಗೆ ಅವಕಾಶ ನೀಡಿಲ್ಲ. ಅಂತಹ ಘಟನೆಗಳು ಸಂಭವಿಸಿದ್ದಲ್ಲಿ ತಕ್ಷಣವೇ ಕಠಿಣ ಕ್ರಮ ಕೈಗೊಂಡಿದ್ದೇವೆ. ಆದರೆ ಕಾಂಗ್ರೆಸ್ ಆಡಳಿತಕ್ಕೆ ಬಂದ ತಕ್ಷಣ ಕೆ.ಎಫ್.ಡಿ ಅಡಿಯಲ್ಲಿ ಬಂಧಿತರಾದವರನ್ನು ಬಿಡಿಸಿದೆ. ಇದರಿಂದ ರಾಜ್ಯದಲ್ಲಿ ಕೋಮು ಗಲಭೆ ಅತಿರೇಕಕ್ಕೆ ಏರಿದೆ. ಹಾಗಾಗಿ ಸರ್ಕಾರ ಪಿ.ಎಫ್.ಐ. ಹಾಗೂ ಕೆ.ಎಫ್.ಡಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.['ನಾನು ಬೀಫ್ ತಿನ್ನುತ್ತೇನೆ ಎಂದು ಹೇಳಿಲ್ಲ': ಸಿದ್ದರಾಮಯ್ಯ]
ಪ್ರಶಾಂತ್ ಪೂಜಾರಿಯ ಮೇಲೆ ಯಾವುದೇ ಗೂಂಡಾಗಿರಿ ಕೇಸು ದಾಖಲಾಗಿಲ್ಲ. ತಕ್ಷಣದಲ್ಲಿ ಪ್ರಶಾಂತ್ ಪೂಜಾರಿ ಮನೆಯವರಲ್ಲಿ ಮತ್ತು ಜನರಲ್ಲಿ ಮೀನುಗಾರಿಕೆ ಸಚಿವ ಅಭಯ ಚಂದ್ರ ಜೈನ್ ಅವರು ಕ್ಷಮಾಪಣೆ ಕೇಳಬೇಕು ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಅಧ್ಯಕ್ಷರು ವಿಜಯ ಕುಮಾರ್ ಹೆಗ್ಡೆ, ಜಿಲ್ಲಾ ಪ್ರಧಾನ ಅಧ್ಯಕ್ಷರು ಪ್ರವೀಣ್ ಶೆಟ್ಟಿ, ಉಪಾಧ್ಯಕ್ಷರು ಗೀತಾಂಜಲಿ ಸುವರ್ಣ ಮತ್ತು ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.












Click it and Unblock the Notifications