ಭೂತ ಕೋಲದ ಹೆಸರಲ್ಲಿ ಟೂರ್ ಪ್ಯಾಕೇಜ್ ಆಫರ್: ಟ್ರಾವೆಲ್ ಏಜೆನ್ಸಿ ವಿರುದ್ಧ ಸಿಡಿದೆದ್ದ ದೈವಾರಾಧಕರು
ಮಂಗಳೂರು, ಡಿಸೆಂಬರ್ 04: ಸುಮಾರು ಮೂರು ಶತಮಾನಗಳಿಗಿಂತ ಹಿಂದಿನ ಇತಿಹಾಸವಿರುವ ಕರಾವಳಿಯ ದೈವಾರಾಧನೆಯನ್ನು ಇಂದಿಗೂ ಶ್ರದ್ಧೆ, ಭಯ ಭಕ್ತಿಯಿಂದ ಆರಾಧಿಸಲಾಗುತ್ತದೆ. ಕಾಂತಾರ ಸಿನಿಮಾದ ಬಳಿಕ ಕರಾವಳಿಯ ದೈವಾರಾಧನೆ ಅಥವಾ ಭೂತಾರಾಧನೆ ಎಲ್ಲೆಡೆ ವ್ಯಾಪಿಸಿತ್ತು. ಈ ವಿಶಿಷ್ಠ ಸಂಪ್ರದಾಯದ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲೂ ಮೂಡಿತ್ತು.
ಕೇವಲ ಕರಾವಳಿ ಭಾಗದಲ್ಲಷ್ಟೇ ಆಚರಿಸುವ ಈ ದೈವಾರಾಧನೆ ಆಚರಣೆ ಹೇಗೆ..? ಈ ಆಚರಣೆ ಹೇಗೆ ಹುಟ್ಟಿಕೊಂಡಿತು..? ದೈವಾರಾಧನೆ ಅಥವಾ ಭೂತ ಕೋಲ ಹೇಗೆ ನಡೆಯುತ್ತದೆ..? ದೈವ ನರ್ತಕರು ಹೇಗೆ ಸಿಂಗಾರಗೊಳ್ಳುತ್ತಾರೆ ಎನ್ನುವ ಕುತೂಹಲ ಅನೇಕರಲ್ಲಿದೆ. ಈ ದೈವಾರಾಧನೆಯನ್ನು ಒಮ್ಮೆ ನೇರವಾಗಿ ನೋಡಬೇಕು ಎನ್ನುವ ಬಯಕೆಯೂ ಹಲವರಲ್ಲಿದೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಟ್ರಾವೆಲ್ ಏಜನ್ಸಿಯೊಂದು ಭೂತ ಕೋಲ ಹೆಸರಿನಲ್ಲಿ ಟ್ರಿಪ್ ಪ್ಯಾಕೇಜ್ ಆಫರ್ ನೀಡಿದೆ.

ಖಾಸಗಿ ಟ್ರಾವೆಲ್ ಏಜೆನ್ಸಿಯಿಂದ ಹೊಸ ಟೂರ್ ಪ್ಯಾಕೇಜ್ ಆಫರ್ ನೀಡಲಾಗಿದೆ. ದೈವಕೋಲದ ವೀಕ್ಷಣೆಗೆ ಟೂರ್ ಪ್ಯಾಕೇಜ್ ಆಫರ್ 'ಭೂತ ಕೋಲ' A night with ancient spirits ಹೆಸರಿನಲ್ಲಿ ಆಫರ್ ನೀಡಿದೆ. ಕರಾವಳಿಯ ಕಲೆ, ಸಂಸ್ಕೃತಿ ವೀಕ್ಷಣೆಗೆ ಟ್ರಾವೆಲ್ ಪ್ಯಾಕೇಜ್ ಪ್ರಕಟ ಮಾಡಿದೆ. ಅದರಲ್ಲಿ ದೈವಾರಾಧನೆ ಜೊತೆ ಪ್ರವಾಸಿತಾಣಗಳನ್ನು ತೋರಿಸುವುದಾಗಿ ಪೋಸ್ಟ್ ಹಾಕಲಾಗಿದ್ದು, ಪ್ರತಿ ವ್ಯಕ್ತಿಗೆ 2,899ರೂ. ಟಿಕೆಟ್ ದರ ವಿಧಿಸಿದೆ.
2,899 ರೂಪಾಯಿ ಕೊಟ್ಟರೆ ಕಂಬಳ, ಭೂತಕೋಲ, ಟ್ರೆಕ್ಕಿಂಗ್ ಸೌಲಭ್ಯ ನೀಡುವುದಾಗಿ ಪೋಸ್ಟರ್ ಮಾಡಿದ್ದಾರೆ. ಈ ಟ್ರಾವೆಲ್ ಆಫರ್ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ತುಳುನಾಡಿನ ನಂಬಿಕೆಯ ದೈವಾರಾಧನೆ ಹೆಸರಲ್ಲಿ ಹೊಸ ದಂಧೆ ಹುಟ್ಟಿಕೊಂಡಿದೆ ಎಂದು ತುಳುನಾಡಿನ ದೈವಾರಾಧಕರು ಸಿಡಿದು ದೇವರ ಹೆಸರಿನಲ್ಲಿ ಇಂತಹ ವ್ಯವಹಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ನಂಬಿಕೆಯ ಹೆಸರಿನಲ್ಲಿ ಅವರು ಬ್ಯುಸಿನೆಸ್ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದೈವ ಕೋಲ, ದೈವಾರಾಧನೆ, ಭೂತಾರಾಧನೆ ಇದು ನಮ್ಮ ನಂಬಿಕೆ. ಧಾರ್ಮಿಕ ಆಚರಣೆ. ಇದು ಯಾವುದೇ ಸಾಂಸ್ಕೃತಿಕ ಚಟುವಟಿಕೆ ಅಲ್ಲ. ಪ್ರವಾಸಿಗರು ದಂಡು ಬಂದು ನೋಡುವ ಉತ್ಸವ ಅಲ್ಲ. ಎಂದಿಗೂ ಇದನ್ನು ಬ್ಯುಸಿನೆಸ್ ಮಾಡಲು ಅವಕಾಶ ನೀಡಲ್ಲ ಎಂದು ತುಳುನಾಡಿನ ದೈವಾರಾಧಕರು ಟ್ರಾವೆಲ್ ಏಜೆನ್ಸಿ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ದೈವ ಕೋಲದ ಹೆಸರಲ್ಲಿ ಟೂರ್ ಪ್ಯಾಕೇಜ್ ಆಫರ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ. ಸಂಬಂಧಿಸಿದ ಟ್ರಾವೆಲ್ ಏಜೆನ್ಸಿ ತಮ್ಮ ಸಾಮಾಜಿಕ ಜಾಲತಾಣದಿಂದ ಈ ಪೋಸ್ಟರ್ ಅನ್ನು ಡಿಲೀಟ್ ಮಾಡಲಾಗಿದೆ.












Click it and Unblock the Notifications