ಮಂಗಳೂರು ಸಮುದ್ರದಿಂದ ಬೆಂಗಳೂರಿಗೆ ನೀರು ತರಲು ಹೊರಟ ರಾಜ್ಯ ಸರಕಾರ
ಬೆಂಗಳೂರು, ಆಗಸ್ಟ್ 31: ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗೂ ಸಂಬಂಧ ಬೆಸೆಯುವ ಸಿದ್ಧತೆಯಲ್ಲಿದೆ ಕರ್ನಾಟಕ ಸರಕಾರ.
"ಮಂಗಳೂರಿನ ಸಮುದ್ರದಲ್ಲಿ ಬೃಹತ್ ಅಣೆಕಟ್ಟು ಕಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿದು ಸಮುದ್ರ ಸೇರುವ ನೇತ್ರಾವತಿ ನದಿಯ ನೀರನ್ನು ಬೆಂಗಳೂರು ನಗರಕ್ಕೆ ತರುವುದು. ಈ ಮೂಲಕ ನಗರದ ಕುಡಿಯುವ ನೀರಿಗೆ ಬೇಡಿಕೆಯನ್ನು ನೀಗಿಸುವುದು." ಹೀಗೊಂದು ಯೋಜನಾ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಸರಕಾರದ ಮುಂದಿಟ್ಟಿದ್ದಾರೆ. ಈ ಯೋಜನೆಯ ಸಾಧ್ಯಾಸಾಧ್ಯತೆಯನ್ನು ಇದೀಗ ರಾಜ್ಯ ಸರಕಾರ ಪರಿಶೀಲನೆ ನಡೆಸುತ್ತಿದೆ.

ಐಐಎಸ್ಸಿ ಹಿರಿಯ ಪ್ರಾಧ್ಯಾಪಕ ಪ್ರೊ. ಟಿ. ಜಿ. ಸೀತಾರಾಂ ಈ ಕಾರ್ಯ ಯೋಜನಾ ವರದಿ ನೀಡಿದ್ದಾರೆ. ಈ ಸಂಬಂಧ ಜಲ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಬುಧವಾರ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸಭೆ ನಡೆಸಿ ಚರ್ಚಿಸಿದ್ದಾರೆ.
ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಕರಾವಳಿ ಪ್ರದೇಶದಲ್ಲಿ ವಾರ್ಷಿಕವಾಗಿ ಸುಮಾರು 300 ರಿಂದ 350 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಸಮುದ್ರದ ಒಳಗಿರುವ ಸುಮಾರು 22 ಟಿಎಂಸಿಯಷ್ಟು ನೀರನ್ನು ಬೆಂಗಳೂರು ಮತ್ತು ಮಂಗಳೂರು ನಗರಗಳಿಗೆ ಕುಡಿಯುವ ಸಲುವಾಗಿ ಪಡೆಯುವ ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಲಾಯಿತು," ಎಂದು ತಿಳಿಸಿದ್ದಾರೆ.
ಅಂದಾಜು 6 ಸಾವಿರ ಕೋಟಿಯ ಯೋಜನೆ ಇದಾಗಿದ್ದು, ಸಮುದ್ರದಲ್ಲಿ ಅಣೆಕಟ್ಟು ಕಟ್ಟಲು 2,500 ಕೋಟಿ ಬೇಕಾಗಬಹುದು ಎಂದು ಪ್ರಾಥಮಿಕ ಅಂದಾಜು ಹಾಕಲಾಗಿದೆ. ಒಟ್ಟು 22 ಟಿಎಂಸಿಯಲ್ಲಿ 20 ಟಿಎಂಸಿ ಬೆಂಗಳೂರಿಗೆ ಹಾಗೂ 2 ಟಿಎಂಸಿ ಮಂಗಳೂರು ನಗರಕ್ಕೆ ಪೂರೈಕೆ ಮಾಡುವ ಆರಂಭಿಕ ಯೋಜನೆ ಹಾಕಿಕೊಳ್ಳಲಾಗಿದೆ.
ಈಗಾಗಲೇ ಮಂಗಳೂರಿನಲ್ಲಿ ಪ್ರೋ ಸೀತಾರಾಂ ನೇತೃತ್ವದ ತಂಡ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಯೋಜನೆಯ ಪ್ರಾತ್ಯಕ್ಷತೆ ನೀಡಿದೆ. ಮುಂದಿನ ಸುತ್ತಿನಲ್ಲಿ ಮೀನುಗಾರರ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಪರಿಸರವಾದಿಗಳ ಜತೆ ಸಮಾಲೋಚನೆ ನಡೆಸಿ ನಂತರ ವಿಸ್ತೃತ ಯೋಜನಾ ವರದಿಯನ್ನು ಅಂತಿಮಗೊಳಿಸಿ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲಾಗುವುದು ಎಂದು ಜಾರ್ಜ್ ಹೇಳಿದ್ದಾರೆ.












Click it and Unblock the Notifications