ಮೂಡಬಿದಿರೆಯಲ್ಲಿ ಹೆಗ್ಗಡೆ ಅವರಿಗೆ ಆತ್ಮೀಯ ಸನ್ಮಾನ
ಮೂಡಬಿದಿರೆ, ಏ. 13 : ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ನಾಡಿನ ಸಮಸ್ತ ಜನರ ಅಭಿಮಾನದ ಅಭಿವಂದನೆ ಸಮಾರಂಭ ಮೂಡುಬಿದಿರೆಯ ಪ್ಯಾಲೇಸ್ ಗ್ರೌಂಡ್‌ನಲ್ಲಿ ಭಾನುವಾರ ಅಭೂತಪೂರ್ವವಾಗಿ ನಡೆಯಿತು.
ಶಿಸ್ತುಬದ್ಧ ನುಡಿಸಿರಿ, ವಿರಾಸತ್, ಕನ್ನಡ ಸಾಹಿತ್ಯ ಸಮ್ಮೇಳನ ಇತ್ಯಾದಿಗಳ ಮೂಲಕ ಜನಮನಗೆದ್ದಿರುವ ಆಳ್ವಾಸ್ ಪ್ರತಿಷ್ಠಾನ ಹಾಗೂ ಅಭಿವಂದನ ಸಮಿತಿ ನೇತತ್ವದಲ್ಲಿ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾಯಿತು. [ಚಿತ್ರಗಳು : ರಾಷ್ಟ್ರಪತಿಯಿಂದ 'ಪದ್ಮ' ಪ್ರಶಸ್ತಿ ಪ್ರದಾನ]

ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಸ್ಮರಣಿಕೆ, ಶಾಲು, ಅಭಿನಂದನ ಪತ್ರವನ್ನು ನೀಡಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸನ್ಮಾನ ಮಾಡಿದರು. ಹೇಮಾವತಿ ವಿ.ಹೆಗ್ಗಡೆ ಅವರಿಗೆ ಮಂಜುಳಾ ಅಭಯಚಂದ್ರ ಜೈನ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಆರತಿ ಬೆಳಗಿ ಸನ್ಮಾನಿಸಿದರು. [ಪದ್ಮವಿಭೂಷಣ ವೀರೇಂದ್ರ ಹೆಗ್ಗಡೆಗೆ ಭವ್ಯ ಸ್ವಾಗತ]

ವೀರೇಂದ್ರ ಹೆಗ್ಗಡೆ ಅವರು ಆದರ್ಶ ಧರ್ಮಾಧಿಕಾರಿ. ಧರ್ಮರಾಜನಂತೆ ಅಜಾತಶತ್ರು. ಹೆಗ್ಗಡೆ ಅವರಿಗೂ ಶತ್ರುಗಳಿರಬಹುದು. ಆದರೆ, ಅವರು ಶತ್ರುಗಳನ್ನೂ ಪ್ರೀತಿಸಿದ ಮಾನವತಾವಾದಿ. ಸರ್ವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಕೆಲಸ ಮಾಡಲು ಸ್ಫೂರ್ತಿ ತುಂಬಿದೆ : ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ನನ್ನ ಸಾಧನೆಗೆ ಕುಟುಂಬದ ಸದಸ್ಯರ ಬೆಂಬಲ ಮತ್ತು 21 ತಲೆಮಾರುಗಳ ದಾನ ಧರ್ಮದ ಪರಂಪರೆಯ ಹಿನ್ನೆಲೆ ಕಾರಣ ಎಂದು ಹೇಳಿದರು.

ಶ್ರೀ ಕ್ಷೇತ್ರದಲ್ಲಿ ಎಲ್ಲ ಸಿಬ್ಬಂದಿಯೂ ತೆರೆಮರೆಯಲ್ಲಿ ನಿಂತು ಕೆಲಸ ಮಾಡಿದ್ದರಿಂದ ನಾನು ಈ ಹಂತಕ್ಕೆ ಬರುವಂತಾಗಿದೆ. ಸರ್ಕಾರ ರಾಜಧರ್ಮದಂತೆ ಪದ್ಮವಿಭೂಷಣ ನೀಡಿದೆ. ಅಲ್ಲಿ ಕೇವಲ ಮೂರು ನಿಮಿಷದಲ್ಲಿ ಪ್ರಶಸ್ತಿ ಪ್ರದಾನ ನಡೆದು ಹೋಗಿದ್ದರೆ, ಇಲ್ಲಿ ಮೂರು ಗಂಟೆ ಅವಧಿಯ ಭಾವನಾತ್ಮಕವಾಗಿ ಅಭಿನಂದನೆ ನಡೆದಿದೆ ಎಂದರು.

ಈ ಪ್ರಶಸ್ತಿ ಇನ್ನಷ್ಟು ಸೇವೆ ಮಾಡಲು ಸ್ಫೂರ್ತಿ ಕೊಟ್ಟಿದೆ. 45 ವರ್ಷಗಳ ಸಾರ್ವಜನಿಕ ಸೇವಾ ಬದುಕಿನಲ್ಲಿ ಕೆಲವು ಅಗ್ನಿಪರೀಕ್ಷೆಗಳು ಎದುರಾಗಿದ್ದು, ದೇವರ ದಯೆಯಿಂದ ಸಮರ್ಥವಾಗಿ ಎದುರಿಸಿದ್ದೇವೆ. ಮಂಜುನಾಥನ ದಯೆಯಿಂದ ಎಲ್ಲಾ ಕಾರ್ಯಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.

ಮೂಡುಬಿದರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ನಿಟ್ಟೆ ವಿವಿ ಕುಲಾದಿಪತಿ ಎನ್.ವಿನಯ ಹೆಗ್ಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ.ವೀರಪ್ಪ ಮೊಯ್ಲಿ, ಎಚ್.ಡಿ.ಕುಮಾರಸ್ವಾಮಿ, ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications