ಮಂಗಳೂರು : 5 ಕೋಟಿ ದರೋಡೆ ತನಿಖೆ ಎಲ್ಲಿಗೆ ಬಂತು?
ಮಂಗಳೂರು, ನವೆಂಬರ್ 23 : ಮಂಗಳೂರಿನ ಕಿನ್ನಿಗೋಳಿಯಲ್ಲಿ ಎಸ್‌ಕೆ ಗೋಲ್ಡ್ ಸ್ಮಿತ್ ಸಹಕಾರಿ ಬ್ಯಾಂಕ್‌ನಿಂದ 5 ಕೋಟಿ ಮೌಲ್ಯದ ಹಣ ಮತ್ತು ಚಿನ್ನಾಭರಣವನ್ನು ದೋಚಿ ಎರಡು ದಿನಗಳು ಕಳೆದಿವೆ. ಪ್ರಕರಣದ ತನಿಖೆಯನ್ನು ತ್ವರಿತವಾಗಿ ನಡೆಸಲು ಮುಲ್ಕಿ ಪೊಲೀಸರಿಗೆ ಸಿಬ್ಬಂದಿ ಕೊರತೆ ಎದುರಾಗಿದೆ.
ಎಸ್‌ಕೆ ಗೋಲ್ಡ್ ಸ್ಮಿತ್ ಸಹಕಾರಿ ಬ್ಯಾಂಕ್ ಇರುವ ಬಹುಮಹಡಿ ಕಟ್ಟಡದ ಕಾರ್ಮಿಕರೇ ಈ ದರೋಡೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಮುಲ್ಕಿ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ ಅಪರಾಧಿಗಳನ್ನು ಹಿಡಿಯುತ್ತಾರೆ ಎಂದು ಜನರು ನಂಬುತ್ತಿಲ್ಲ. [ಕಿನ್ನಿಗೋಳಿಯಲ್ಲಿ ಬ್ಯಾಂಕ್ ದರೋಡೆ]

ಇದಕ್ಕೆ ಕಾರಣವೂ ಇದೆ, ಮುಲ್ಕಿ ಪೊಲೀಸ್ ಠಾಣೆ ಮೊದಲಿನಿಂದಲೂ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಠಾಣಾ ವ್ಯಾಪ್ತಿಯಲ್ಲಿ ಇದುವರೆಗೆ ಅನೇಕ ಆತ್ಮಹತ್ಯೆ, ಕೊಲೆ ಪ್ರಕರಣಗಳು ನಡೆದರೂ ನಿಜವಾದ ಕಳ್ಳರನ್ನು ಇದುವರೆಗೂ ಪೊಲೀಸರಿಗೆ ಬಂಧಿಸಲು ಸಾಧ್ಯವಾಗಿಲ್ಲ ಎಂಬುದು ಸಾರ್ವಜನಿಕರು ಆರೋಪವಾಗಿದೆ. [ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ]
ಠಾಣೆ ಮೊದಲೇ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಬ್ಯಾಂಕ್‌ನಲ್ಲಿ ದರೋಡೆ ನಡೆಯುವ ಹಿಂದಿನ ದಿನ ಠಾಣೆಯ ಪೊಲೀಸರ ಒಂದು ತಂಡ ಆಯುಕ್ತರ ಆದೇಶದ ಮೇರೆಗೆ ಸರ್ಕಲ್ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಬಳ್ಳಾರಿಗೆ ಪ್ರಕರಣವೊಂದರ ತನಿಖೆಗೆ ತೆರಳಿದೆ. ಇದರಿಂದ ಬ್ಯಾಂಕ್ ದರೋಡೆ ತನಿಖೆಗೆ ಹಿನ್ನಡೆ ಉಂಟಾಗಿದೆ.
ಪ್ರತಿಭಟನೆಗೆ ಸಿದ್ಧತೆ : ಎಸ್‌ಕೆ ಗೋಲ್ಡ್ ಸ್ಮಿತ್ ಸಹಕಾರಿ ಬ್ಯಾಂಕಿನಲ್ಲಿ ಸುಮಾರು 3000ವರೆಗೆ ಸ್ಕೀಂ ಸದಸ್ಯರು ಇದ್ದು ದರೋಡೆ ನಂತರ ಮುಂದೇನು? ಎಂಬ ಗೊಂದಲದೊಂದಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತನಿಖೆ ಬೇಗ ಪೂರ್ಣಗೊಳಿಸಿ, ನಮ್ಮ ಹಣ ಮತ್ತು ಚಿನ್ನಾಭರಣಗಳನ್ನು ಕೊಡಿ ಎಂದು ಒತ್ತಾಯಿಸಲು ಬ್ಯಾಂಕ್‌ನ ಗ್ರಾಹಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ನವೆಂಬರ್ 20ರ ಶುಕ್ರವಾರ ತಡರಾತ್ರಿ ಮಂಗಳೂರಿನ ಕಿನ್ನಿಗೋಳಿಯಲ್ಲಿರುವ ಎಸ್‌ಕೆ ಗೋಲ್ಡ್ ಸ್ಮಿತ್ ಸಹಕಾರಿ ಬ್ಯಾಂಕ್‌ಗೆ ನುಗ್ಗಿರುವ ಕಳ್ಳರು ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. 25 ಲಕ್ಷ ಹಣ ಸೇರಿದಂತೆ 5 ಕೋಟಿ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.












Click it and Unblock the Notifications