ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧಅಪಪ್ರಚಾರ; ಜೈಲು ಸೇರಿದ ಸೋಮನಾಥ ನಾಯಕ್
ಮಂಗಳೂರು, ಅಕ್ಟೋಬರ್ 31: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಡಿಯಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಜೈಲು ಸೇರಿದ್ದಾರೆ. ಬೆಳ್ತಂಗಡಿ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಸೋಮನಾಥ ನಾಯಕ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಡಾ.ವೀರೇಂದ್ರ ಹೆಗ್ಗಡೆ ಅವರು ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿದ್ದಾರೆಂದು ಆರೋಪ ಮಾಡಿದ್ದ ಸೋಮನಾಥ ನಾಯಕ್ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹೆಗ್ಗಡೆ ವಿರುದ್ಧ ಮಾತನಾಡಿದ್ದರು.
ಸೋಮನಾಥ ನಾಯಕ್ ವಿರುದ್ಧ ಹೆಗ್ಗಡೆ ಕುಟುಂಬ ಬೆಳ್ತಂಗಡಿ ಕೋರ್ಟ್‌ಗೆ ದೂರು ನೀಡಿದ್ದು, ದೂರು ಆಲಿಸಿದ ಕೋರ್ಟ್ ಅಪಪ್ರಚಾರ ಮಾಡದಂತೆ ಪ್ರತಿಬಂಧಕಾಜ್ಞೆ ವಿಧಿಸಿತ್ತು. ಆದರೆ ಅದನ್ನು ಉಲ್ಲಂಘಿಸಿ ಮತ್ತೆ ಆರೋಪ ಮುಂದುವರೆಸಿದ್ದ ಸೋಮನಾಥ ನಾಯಕ್ ಸಾಮಾಜಿಕ ತಾಣಗಳಲ್ಲೂ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡಿದ್ದರು.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿಯ ಸಂಸ್ಥೆಗಳ ಕುರಿತು ಗೌರವಕ್ಕೆ ಚ್ಯುತಿ ತರುವ ಯಾವುದೇ ರೀತಿಯ ಬರವಣಿಗೆ ಅಥವಾ ಹೇಳಿಕೆ ನೀಡಬಾರದೆಂದು ಈ ಹಿಂದೆ ಬೆಳ್ತಂಗಡಿ ಸಿವಿಲ್ ನ್ಯಾಯಾಲಯ ಸೋಮನಾಥ ನಾಯಕ್ ಮತ್ತು ಇತರ 5 ಮಂದಿಯ ವಿರುದ್ಧ ಪ್ರತಿಬಂಧಕಾಜ್ಞೆ ಮಾಡಿತ್ತು. ಆದರೂ ಸೋಮನಾಥ ನಾಯಕ್ ಆರೋಪಗಳನ್ನು ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮುಖೇನ ಟೀಕೆ, ಆರೋಪ ಮಾಡುತ್ತಲೇ ಇದ್ದರು.
ಈ ವಿಚಾರವನ್ನು ಕ್ಷೇತ್ರದ ಪರವಾಗಿ ನ್ಯಾಯಾಲಯದ ಮುಂದಿಡಲಾಯಿತು. ಸುದೀರ್ಘ ವಿಚಾರಣೆ ನಡೆದು ಸೋಮನಾಥ ನಾಯಕ್ ದೋಷಿ ಎಂದು ಪರಿಗಣಿಸಿದ ನ್ಯಾಯಾಲಯ ಸೋಮನಾಥ ನಾಯಕ್‌ಗೆ 3 ತಿಂಗಳ ಸಜೆ, ಕ್ಷೇತ್ರಕ್ಕೆ 4.5 ಲಕ್ಷ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿ, ನಾಯಕ್ ಆಸ್ತಿಯನ್ನು ಮುಟ್ಟುಗೋಲು ಕೂಡ ಹಾಕಿಕೊಂಡಿತ್ತು.
ತನಗೆ ಬೆಳ್ತಂಗಡಿ ನ್ಯಾಯಾಲಯ ವಿಧಿಸಿದ ಜೈಲು ಶಿಕ್ಷೆ, ಆಸ್ತಿ ಮುಟ್ಟುಗೋಲು ಹಾಗೂ ದಂಡನೆ ರದ್ದುಗೊಳಿಸುವಂತೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಆದರೆ ಹೈಕೋರ್ಟ್ ಕೂಡ ಬೆಳ್ತಂಗಡಿ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ ಸೋಮನಾಥ್ ನಾಯಕ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೂ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡಾ ಬೆಳ್ತಂಗಡಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಹೀಗಾಗಿ ಸೋಮನಾಥ ನಾಯಕ್ ಅಪಾರ ಬೆಂಬಲಿಗರ ಜೊತೆ ಬೆಳ್ತಂಗಡಿ ಕೋರ್ಟ್‌ಗೆ ಶರಣಾಗಿದ್ದಾರೆ. ಮೂರು ತಿಂಗಳ ಸೆರೆ ವಾಸಕ್ಕೆ ಮಂಗಳೂರು ಜೈಲಿಗೆ ಕಳುಹಿಸಿದ ಬೆಳ್ತಂಗಡಿ ನ್ಯಾಯಾಲಯ, ಮೂರು ತಿಂಗಳ ಜೈಲು ಶಿಕ್ಷೆ ಜೊತೆಗೆ 4.5ಲಕ್ಷ ಪರಿಹಾರ ನೀಡಲು ಆದೇಶ ನೀಡಿದೆ.












Click it and Unblock the Notifications