ಸೋಮೇಶ್ವರ ಬೀಚ್ ನಲ್ಲಿ ಜೀವ ರಕ್ಷಕರಿಗೆ ನೆಲೆಯು ಇಲ್ಲ ರಕ್ಷಣೆಯೂ ಇಲ್ಲ
ಮಂಗಳೂರಿನಿಂದ ಸುಮಾರು ಹದಿನೈದು ಕಿ.ಮೀ ದೂರದಲ್ಲಿರುವ ಉಳ್ಳಾಲದ ಸೋಮೇಶ್ವರ ಬೀಚ್ ಕರಾವಳಿಯ ರಮ್ಯ ತಾಣಗಳಲ್ಲಿ ಒಂದು. ಇಲ್ಲಿರುವ ಸೋಮನಾಥ ದೇವಾಲಯಕ್ಕೆ ದೊಡ್ಡ ಇತಿಹಾಸವಿದೆ.
ಮಂಗಳೂರು, ಜೂನ್ 10: ಮಂಗಳೂರಿನಿಂದ ಸುಮಾರು ಹದಿನೈದು ಕಿ.ಮೀ ದೂರದಲ್ಲಿರುವ ಉಳ್ಳಾಲದ ಸೋಮೇಶ್ವರ ಬೀಚ್ ಕರಾವಳಿಯ ರಮ್ಯ ತಾಣಗಳಲ್ಲಿ ಒಂದು. ಇಲ್ಲಿರುವ ಸೋಮನಾಥ ದೇವಾಲಯಕ್ಕೆ ದೊಡ್ಡ ಇತಿಹಾಸವಿದೆ. ಈ ದೇವಾಲಯದ ಹಿಂಭಾಗದಲ್ಲಿರುವ ಬೀಚ್ ಕರಾವಳಿಯಲ್ಲಿ ನೀವು ಕಾಣದಿದ್ದ ಸುಂದರ ದೃಶ್ಯಗಳನ್ನು ಕಾಣುವಿರಿ. ಕಲ್ಲು ಬಂಡೆಗಳಿಂದ ಆವರಿಸಿರುವ ಈ ಬೀಚ್ ದೃಶ್ಯಗಳನ್ನು ನೀವು ಹೆಚ್ಚಾಗಿ ಸಿನಿಮಾಗಳಲ್ಲಿ ಕಂಡಿರುವಿರಿ.
ಆದರೆ ಪ್ರವಾಸಿಗರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಇಲ್ಲಿನ ನುರಿತ ಜೀವರಕ್ಷಕರಿಗೆ ಮಾತ್ರ ಇಂದಿಗೂ ಉಳಿದುಕೊಳ್ಳಲು ಕನಿಷ್ಠ "ವಾಚ್ ಟವರ್ " ಕೂಡಾ ಇಲ್ಲದಿರುವುದರಿಂದ ಸುಡು ಬಿಸಿಲು, ಮಳೆ ಗಾಳಿಯನ್ನು ಲೆಕ್ಕಿಸದೆ ಮರಗಳ ನೆರಳಲ್ಲೇ ದಿನಗಳೆಯುವ ಅನಿವಾರ್ಯತೆ ಬಂದಿದೆ.

ಸಮುದ್ರಕ್ಕೆ ಹಾರುವ ಅಥವಾ ಆಕಸ್ಮಿಕವಾಗಿ ಬಿದ್ದವರ ಜೀವ ಉಳಿಸಲು ಹೊರಡುವ ಜೀವರಕ್ಷಕರಿಗೆ ಇಲ್ಲಿ ತಂಗುವುದಕ್ಕೂ ಒಂದು ನೆಲೆ ಇಲ್ಲವಾಗಿದೆ. ಅಷ್ಟೇ ಅಲ್ಲ, ರಕ್ಷಣಗೆ ಧುಮುಕಿ ಮೇಲೆ ಬರುವಷ್ಟರಲ್ಲಿ ಇವರ ಅಮೂಲ್ಯ ಸೊತ್ತುಗಳು ನಾಪತ್ತೆಯಾಗಿ ಬಿಡುತ್ತದೆ. ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯವೇ ದೇವರೆಂದು ಭಾವಿಸಿ ಪ್ರವಾಸಿಗರ ರಕ್ಷಣೆಗೆ ನಿಂತಿರುವ ಜೀವರಕ್ಷಕರಿಗೆ ಪ್ರವಾಸೋದ್ಯಮ ಇಲಾಖೆಯು ಆದಷ್ಟು ಬೇಗನೆ ಸುಸರ್ಜಿತ ವಾಚ್ ಟವರ್ ನಿರ್ಮಿಸಿ ಕೊಡಬೇಕೆನ್ನುವುದು ಸ್ಥಳೀಯರ ಹಾಗು ಜೀವರಕ್ಷಕರ ಆಗ್ರಹ.
ಸಮುದ್ರದ ದಡದ ಎಲ್ಲ ಭಾಗದ ಕಡೆಗೆ ಗಮನ ಹರಿಸಲು ವಾಚ್ ಟವರ್ ಇದ್ದರೆ ಉತ್ತಮ. ಇಲ್ಲದಿದ್ದರೆ ನಮ್ಮ ಅಮೂಲ್ಯ ವಸ್ತುಗಳನ್ನು ಮರಳಿನಲ್ಲಿಯೇ ಬಿಟ್ಟು ಸಮುದ್ರಕ್ಕೆ ಧುಮುಕಬೇಕಿದೆ. ಜೀವ ಉಳಿಸಿದ ಸಂತಸದಲ್ಲಿ ದಡಕ್ಕೆ ಬಂದು ನೋಡಿದರೆ ನಾವು ಕಳೆದುಕೊಂಡಿರುವುದೇ ಹೆಚ್ಚು ಎನ್ನುತ್ತಾರೆ ಜೀವರಕ್ಷಕ ಮೋಹನ್.

ಕಳೆದ ಹಲವು ವರ್ಷಗಳಿಂದ ಸೋಮೇಶ್ವರ ಸಮುದ್ರದಲ್ಲಿ ಅದೆಷ್ಟೋ ಜೀವಗಳನ್ನು ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಈ ಜೀವರಕ್ಷಕರು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಸಿಗರ ಜೀವರಕ್ಷಣೆಯ ಮಹತ್ತರ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಾ ಬಂದಿರುವ ಇವರಿಗೆ ವೇತನ ಸಮಾಧಾನಕರವಾಗಿದೆ. ಆದರೆ ಇವರಿಗೆ ಎದುರಾಗಿರುವ ಸಂಕಷ್ಟ ತಂಗುವುದಕ್ಕೆ ಯಾವುದೇ ನೆಲೆ ಇಲ್ಲದಿರುವುದು. ಈ ಕೊರತೆಯನ್ನು ಸರಕಾರ ಆದಷ್ಟು ಬೇಗ ನಿವಾರಿಸಬೇಕಿದೆ.












Click it and Unblock the Notifications