ಮಂಜುನಾಥನ ಸನ್ನಿಧಿಗೆ ಸಿದ್ದು, ಮೈತ್ರಿ ಸರಕಾರದ ಮುಂದಿನ ದೃಶ್ಯ ಏನು?
Recommended Video

ಮಂಗಳೂರು ಜೂನ್ 28: ಕರ್ನಾಟಕ ರಾಜಕಾರಣದ ಬಹು ಚರ್ಚಿತ, ರೋಚಕ- ನಿರೀಕ್ಷಿತ ಸಿನಿಮಾ ಗುರುವಾರ ಬಿಡುಗಡೆ ಆಗಿದೆ. ಮುಂದೆ ಏನೇನಾಗುತ್ತದೋ ಎಂಬುದನ್ನು ಕಾಲದ ರಜತ ಪರದೆ ಮೇಲೆ ನೋಡಿಯೇ ಅನುಭವಿಸಬೇಕು. ಅಂದ ಹಾಗೆ ಆ ಸಿನಿಮಾ ಹೆಸರು 'ಸಿದ್ದರಾಮಯ್ಯ'. ಪ್ರಕೃತಿ ಚಿಕಿತ್ಸಾಲಯದಲ್ಲಿ ಹನ್ನೆರಡು ದಿನಗಳ ಸುದೀರ್ಘ ವಿಶ್ರಾಂತಿ ನಂತರ ಅವರ ಬಿಡುಗಡೆ ಆಗಿದೆ.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದ ಎಲ್ಲ ಭಿನ್ನಮತ- ಅಸಮಾಧಾನ ಮಧ್ಯೆಯೂ ವಿಶ್ರಾಂತಿ ಪಡೆಯುವ ಸಲುವಾಗಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದ ಸಿದ್ದರಾಮಯ್ಯ, 12 ದಿನಗಳಿಂದ ಉಜಿರೆಯ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸಾಲಯದಿಂದ ಹೊರಟು ಸಿದ್ದರಾಮಯ್ಯ ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ದರ್ಶನ ಮಾಡಲಿದ್ದಾರೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ದೇವಾಲಯಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆಯುವ ಮೂಲಕ ಚುನಾವಣೆಗೂ ಮುನ್ನ ಮೀನು, ಮಾಂಸ ತಿಂದು ಕ್ಷೇತ್ರ ಪ್ರವೇಶ ಮಾಡಿದ್ದರೆಂಬ ಅಪವಾದಕ್ಕೆ ಪ್ರಾಯಶ್ಚಿತ್ತ ಮಾಡಲಿದ್ದಾರೆ. ಇನ್ನು ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಅಖಾಡಕ್ಕೆ ಪ್ರವೇಶಕ್ಕೂ ಮುನ್ನ ಧರ್ಮಸ್ಥಳದಲ್ಲಿ ಮಂಜುನಾಥನ ಆಶೀರ್ವಾದ ಪಡೆಯಲಿದ್ದಾರೆ.

ಮಧ್ಯಾಹ್ನದ ಪೂಜೆಯಲ್ಲಿ ಸಿದ್ದರಾಮಯ್ಯ ಭಾಗಿ
ದೇವಾಲಯದಲ್ಲಿ ಮಂಜುನಾಥನ ದರ್ಶನ ಪಡೆದು, ಮಧ್ಯಾಹ್ನದ ಪೂಜೆಯಲ್ಲಿ ಪಾಲ್ಗೊಳ್ಳಲಿರುವ ಸಿದ್ದರಾಮಯ್ಯ, ಆ ನಂತರ ಅಲ್ಲೇ ಊಟ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಅಭಯಚಂದ್ರ ಜೈನ್, ಎಂಎಲ್ ಸಿ ಹರೀಶ್ ಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಇರಲಿದ್ದಾರೆ.

ಬೆಂಗಳೂರಿನಲ್ಲಿ ಬೆಂಬಲಿಗರ ಸಭೆ ನಡೆಯಲಿದೆಯಾ?
ಆ ನಂತರ ಸಂಜೆ ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಿದ್ದರಾಮಯ್ಯ, ರಾತ್ರಿ 8 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ. ಮಂಗಳೂರಿನಲ್ಲಿರುವ ಕಾವೂರಿನ ಕುರುಬರ ಭವನದಲ್ಲಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಈಗಾಗಲೇ ಮೈತ್ರಿ ಸರಕಾರದ ಬಗ್ಗೆ ಅಪಸ್ವರ ಎತ್ತಿರುವ ಸಿದ್ದು, ಬೆಂಗಳೂರಿಗೆ ತೆರಳಿದ ಬಳಿಕ ಬೆಂಬಲಿಗರ ಸಭೆಯನ್ನೂ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಶಾಂತಿವನದಲ್ಲೇ ಭೇಟಿಯಾದ ಬೆಂಬಲಿಗರು
ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಬಜೆಟ್ ಮಂಡನೆ ವಿಚಾರವಾಗಿ ಆಡಿದ ಮಾತು ಹಾಗೂ ಇತ್ತೀಚೆಗೆ ಬಿಡುಗಡೆಯಾಗಿದ್ದ ಸರಕಾರದ ಅಸ್ತಿತ್ವದ ಬಗೆಗಿನ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸಚಿವರು ಹಾಗೂ ಶಾಸಕರು ಬುಧವಾರದಂದು ಶಾಂತಿವನದಲ್ಲೇ ಭೇಟಿ ಆಗಿದ್ದಾರೆ.

ಕಾಂಗ್ರೆಸ್ ಮನೆಯೊಳಗೆ ಎಷ್ಟೊಂದು ಬಾಗಿಲು!
ಕಾಂಗ್ರೆಸ್ ನೊಳಗೆ ಈಗಿನ ಮೈತ್ರಿ ಸರಕಾರ ಮುಂದುವರಿಸಿಕೊಂಡು ಹೋಗುವ ಇರಾದೆ ಇರುವಂಥ ಪ್ರಬಲ ಮುಖಂಡರು ಒಂದು ಕಡೆ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ನಡೆ- ನುಡಿ ಆತಂಕ ಹೆಚ್ಚಿಸುತ್ತಲೇ ಇದೆ.












Click it and Unblock the Notifications