ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ಮಾಹಿತಿ ಕಲೆಹಾಕಿದ ಸಿಐಡಿ
ಪುತ್ತೂರು, ನ 3: ಪುತ್ತೂರು ನಿವಾಸಿ ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ಹೆಚ್ಚಿನ ಮಾಹಿತಿಯನ್ನು ಸೋಮವಾರ (ನ3) ಸಂಗ್ರಹಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಕಚೇರಿಗೆ ಹಾಜರಾಗುವಂತೆ ಸಿಐಡಿ, ಪ್ರಭಾಕರ್ ಭಟ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಶ್ಯಾಮ್ ಪ್ರಸಾದ್ (51) ಅವರು ಆಗಸ್ಟ್ 31ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರಭಾಕರ್ ಭಟ್ ಅವರಿಗೆ ಶ್ಯಾಮ್ ಪ್ರಸಾದ್ ಕರೆ ಮಾಡಿದ್ದರು. ಈ ಮಾಹಿತಿಯನ್ನು ಆಧರಿಸಿ ಹೆಚ್ಚಿನ ವಿಚಾರಣೆಗೆ ಬರುವಂತೆ ಪ್ರಭಾಕರ್ ಭಟ್ ಅವರಿಗೆ ಸಿಐಡಿ ಸೂಚಿಸಿತ್ತು.
ಪುತ್ತೂರಿನ ಕೆದಿಲ ನಿವಾಸಿಯಾಗಿದ್ದ ಶ್ಯಾಮ ಪ್ರಸಾದ್ ಶಾಸ್ತ್ರಿ ಅವರು ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಶ್ಯಾಮ್ ಪ್ರಸಾದ್ ಮೃತಪಟ್ಟಿದ್ದರು. (ಅಂಶುಮತಿ ಶಾಸ್ತ್ರಿ ಅವಹೇಳನ, ಇಬ್ಬರ ಬಂಧನ)

ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಅವರಿಗೆ ಬ್ಲಾಕ್ ಮೇಲ್ ಮಾಡಿರುವ ಪ್ರಕರಣದ ಆರೋಪಿಯಾಗಿರುವ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ ಅವರಿಗೆ ಸಹ ಬಹಳಷ್ಟು ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಹೇಳಲಾಗುತ್ತಿತ್ತು.
ಶ್ಯಾಮ್ ಪ್ರಸಾದ್ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ಕೂಡಾ ಬೆದರಿಕೆ ಕರೆಯ ಬಗ್ಗೆ ಬರೆದಿದ್ದಾರೆ ಎನ್ನಲಾಗುತ್ತಿದೆ. ಸಿಐಡಿ ಅಧಿಕಾರಿಗಳು ಸೆಪ್ಟಂಬರ್ ಹದಿನೈದರಂದು ಶ್ಯಾಮ್ ಪ್ರಸಾದ್ ಅವರ ಪುತ್ತೂರಿನ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ, ಮಕ್ಕಳ ಮತ್ತು ಸಂಬಂಧಿಕರ ಹೇಳಿಕೆಯನ್ನು ಕಲೆಹಾಕಿದ್ದರು.
ಶ್ಯಾಮ್ ಪ್ರಸಾದ್ ಅವರ ಮೊಬೈಲ್ ಕರೆಯ ಪಟ್ಟಿಯಲ್ಲಿ ಕಲ್ಲಡ್ಕ ಭಟ್ರ ದೂರವಾಣಿ ಸಂಖ್ಯೆ ದಾಖಲಾಗಿರುವುದರಿಂದ ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಬೆಂಗಳೂರು ಕಚೇರಿಗೆ ಬರುವಂತೆ ಸಿಐಡಿ ಅಧಿಕಾರಿಗಳು ಸೂಚಿಸಿದ್ದರು. ಸಿಐಡಿ ಅಧಿಕಾರಿಗಳ ಮುಂದೆ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಶ್ಯಾಮ ಪ್ರಸಾದ್ ಶಾಸ್ತ್ರಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಜೀವ ಬೆದರಿಕೆ, ಆತ್ಮಹತ್ಯೆಗೆ ಪ್ರಚೋದನೆ ಸಂಬಂಧಿಸಿದ ಐಪಿಸಿ ಕಲಂ 506, 306 ಮತ್ತು 67(ಎ) ಅಡಿಯಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಯಾರ ಹೆಸರನ್ನೂ ನಮೂದಿಸದೆ ಅಪರಿಚಿತ 11 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
ರಾಮಚಂದ್ರಾಪುರ ಮಠದ ಯಾವ ಭಕ್ತರು ಶ್ಯಾಮ್ ಪ್ರಸಾದ್ ಶಾಸ್ತ್ರಿಗಳಿಗೆ ಬೆದರಿಕೆ ಹಾಕಿಲ್ಲ. ಈ ಆತ್ಮಹತ್ಯೆಗೂ ಮಠಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಠದ ವಕೀಲರಾದ ಶಂಭುಶಾಸ್ತ್ರಿ ಅವರು ಘಟನೆಗೆ ಸಂಬಂಧಿಸಿದಂತೆ ಸ್ಟಷ್ಟನೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications