ಆಗಸ್ಟ್ 15ರಿಂದ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತ
ಮಂಗಳೂರು, ಜೂ.24 : ಶಿರಾಡಿ ಘಾಟ್ ರಸ್ತೆಯ ಕಾಂಕ್ರಿಟ್ ಕಾಮಗಾರಿ ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, ಆ.15ರಿಂದ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳವಾರ ಶಿರಾಡಿ ಘಾಟ್ ರಸ್ತೆಯ ಕಾಮಗಾರಿ ಪ್ರಗತಿ ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದರು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಮಗಾರಿ ವಿಳಂಬವಾಯಿತು. ಆಗಸ್ಟ್ 15ಕ್ಕೆ ವಾಹನ ಸಂಚಾರಕ್ಕೆ ಮಾರ್ಗ ಮುಕ್ತವಾಗಲಿದೆ ಎಂದರು. [ಶಿರಾಡಿಯಲ್ಲಿ ವಾಹನ ಸಂಚಾರಕ್ಕೆ ಹೊಸ ಮುಹೂರ್ತ]

ಶಿರಾಡಿ ಘಾಟ್ ಬಂದ್ ಆಗಿರುವುದರಿಂದ ಚಾರ್ಮಾಡಿ ಹಾಗೂ ಮೈಸೂರು ರಸ್ತೆಗೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದರಿಂದ ರಸ್ತೆ ಕುಸಿತ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇಗ ಕಾಮಗಾರಿ ಮುಗಿಸಿ ವಾಹನ ಸಂಚಾರ ಆರಂಭಿಸಲು ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದರು. [ಕಾಂಕ್ರಿಟ್ ರಸ್ತೆ ಕಾಮಗಾರಿ ಚಿತ್ರಗಳು]
11 ಕಿ.ಮೀ.ಪೂರ್ಣಗೊಂಡಿದೆ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ಮಾತನಾಡಿ, 13 ಕಿ.ಮೀ. ರಸ್ತೆಯಲ್ಲಿ ಒಟ್ಟು 11.04 ಕಿ.ಮೀ. ಕಾಮಗಾರಿ ಪೂರ್ಣವಾಗಿದೆ. 1.60 ಕಿ.ಮೀ ಬಾಕಿಯಿದ್ದು ಶೀಘ್ರವೇ ಮುಕ್ತಾಯಗೊಳ್ಳಲಿದೆ ಎಂದು ವಿವರಣೆ ನೀಡಿದರು. [ಬೆಂಗಳೂರು-ಮಂಗಳೂರು ನಡುವೆ ಹೆಚ್ಚು ರೈಲು ಓಡಿಸಿ]

ಪ್ರತಿದಿನ 300ರಿಂದ 400 ಮೀಟರ್ ಕಾಮಗಾರಿ ನಡೆಯುತ್ತಿತ್ತು. ಆದರೆ, ಈಗ ಮಳೆಯಿಂದಾಗಿ 260 ಮೀಟರ್ ಕಾಮಗಾರಿ ನಡೆಯುತ್ತಿದೆ. ಮಳೆ ಬಿಡುವು ಕೊಟ್ಟರೆ 13 ದಿನಗಳೊಳಗೆ ಬಾಕಿಯಿರುವ 1.60 ಕಿ.ಮೀ. ಕಾಮಾಗರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
2ನೇ ಹಂತಕ್ಕೆ ಟೆಂಡರ್ : ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ 13 ಕಿ.ಮೀ. ಕಾಂಕ್ರಿಟೀಕರಣ ಕಾಮಗಾರಿಗಾಗಿ ಆಂಧ್ರದ ಕಂಪೆನಿಯೊಂದಕ್ಕೆ ಟೆಂಡರ್ ನೀಡಲಾಗಿದೆ. 85 ಕೋಟಿ ರೂ. ವೆಚ್ಚದ ಈ ಕಾಮಗಾರಿಯು ಸರ್ಕಾರದ ಅನುಮೋದನೆ ಹಂತದಲ್ಲಿದೆ ಎಂದು ತಿಳಿಸಿದರು.

ಅಂದಹಾಗೆ 13 ಕಿ.ಮೀ.ಕಾಂಕ್ರಿಟ್ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟ್‌ನಲ್ಲಿ 2015ರ ಜನವರಿ 2ರಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. 2015ರ ಮೇ 15ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ.












Click it and Unblock the Notifications