ಮಂಗಳೂರು: ಪತಿಯ ಕುಕೃತ್ಯಕ್ಕೆ ಹೆಂಡತಿಯ ಬೆಂಬಲ; ವಕೀಲ ರಾಜೇಶ್ ಭಟ್ ಪತ್ನಿ ಬಂಧನ
ಮಂಗಳೂರು, ಡಿಸೆಂಬರ್ 10: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿರುವ ಮಂಗಳೂರಿನ ವಕೀಲ ಕೆ.ಎಸ್.ಎನ್ ರಾಜೇಶ್ ನಾಪತ್ತೆಯಾಗಿ ಎರಡು ತಿಂಗಳು ಸನಿಹವಾಗುತ್ತಿದೆ. ಆದರೂ ಮಂಗಳೂರು ಪೊಲೀಸರ ಕೈಗೆ ಆರೋಪಿ ಸಿಗುತ್ತಿಲ್ಲ.
ಈ ನಡುವೆ ಮಂಗಳೂರು ಪೊಲೀಸರು ಆರೋಪಿ ವಕೀಲ ರಾಜೇಶ್ ಭಟ್ ಪತ್ನಿ ಶಶಿಕಲಾ ರಾಜೇಶ್ ಮತ್ತು ಅಲೋಕ್ ಭಟ್ ಎಂಬಾತನನ್ನು ಬಂಧನ ಮಾಡಿದ್ದಾರೆ. ಲೈಂಗಿಕ ಕಿರುಕುಳ ನಡೆಸಿದ ರಾಜೇಶ್ ಭಟ್‌ಗೆ ಬೆಂಬಲವಾಗಿ ನಿಂತು, ಸಂತ್ರಸ್ತೆಗೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಪೊಲೀಸರು ರಾಜೇಶ್ ಭಟ್ ಪತ್ನಿ ಶಶಿಕಲಾ ರಾಜೇಶ್‌ಳನ್ನು ಬಂಧಿಸಿದ್ದಾರೆ.
ವಕೀಲ ರಾಜೇಶ್ ಭಟ್ ಸೆ.25ರಂದು ಮಂಗಳೂರು ಬಲ್ಮಠದಲ್ಲಿರುವ ತನ್ನ ಕಚೇರಿಯಲ್ಲಿ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಅಕ್ಟೋಬರ್ 20ಕ್ಕೆ ವಕೀಲನ ಮೇಲೆ ಎಫ್ಐಆರ್ ಆಗಿದೆ. ಈ ನಡುವಿನ ಸಮಯದಲ್ಲಿ ಸಂತ್ರಸ್ತೆ ಯುವತಿಗೆ ರಾಜೇಶ್ ಭಟ್ ಪತ್ನಿ ಶಶಿಕಲಾ ಕರೆ ಮಾಡಿ, ಯಾರಿಗೂ ಹೇಳದಂತೆ ಪ್ರಾಣ ಬೆದರಿಕೆ ಹಾಕಿದ್ದಾಳೆ.

ರಾಜೇಶ್ ಭಟ್ ಸಮಾಜದ ಪ್ರಮುಖ ವ್ಯಕ್ತಿ. ಎಲ್ಲಾ ಪ್ರಭಾವಿಗಳ ಸಂಪರ್ಕ ರಾಜೇಶ್ ಭಟ್‌ಗೆ ಇದೆ. ಹೀಗಾಗಿ ದೂರು ನೀಡಿದರೆ ಮತ್ತೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾಳೆ. ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ರಾಜೇಶ್ ಭಟ್ ಪತ್ನಿ ಶಶಿಕಲಾ ರಾಜೇಶ್‌ಳನ್ನು ಬಂಧನ ಮಾಡಿದ್ದಾರೆ.
ಇನ್ನೋರ್ವ ಆರೋಪಿ ಅಲೋಕ್ ಎಂಬಾತನನ್ನೂ ಬೆಂಗಳೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಫ್ಐಆರ್ ದಾಖಲಾದ ಬಳಿಕ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದು, ಈ ವೇಳೆ ಆತನಿಗೆ ಸಹಕರಿಸಿದ ಆರೋಪದಲ್ಲಿ ಅಲೋಕ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈತ ಈ ಮೊದಲು ರಾಜೇಶ್ ಭಟ್‌ಗೆ ಸಹಕರಿಸಿದ ಅಚ್ಯುತ್ ಎಂಬಾತನ ಮಗನಾಗಿದ್ದಾನೆ. ಅಚ್ಯುತ್‌ನಿಂದ ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಜೇಶ್ ಜೊತೆ ಮಾತನಾಡಿರುವ ಬಗ್ಗೆ ಮತ್ತು ತಲೆಮರೆಸಿಕೊಳ್ಳಲು ಉಪಾಯ ಹೂಡಿರುವ ಬಗ್ಗೆ ಮಾತುಕತೆಗಳ ಆಡಿಯೋ ಕೂಡಾ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಆದರೆ ಇಬ್ಬರೂ ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ರಾಜೇಶ್ ಭಟ್ ತಲೆಮರೆಸಿಕೊಂಡೇ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ಪೊಲೀಸರು ರಾಜೇಶ್ ಭಟ್‌ಗೆ ಸೇರಿದ ಹನ್ನೊಂದು ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದುಕೊಂಡು ಅವುಗಳನ್ನು ನಿಷ್ಕ್ರಿಯ ಮಾಡಿದ್ದಾರೆ. ಹೀಗಾಗಿ ತಲೆಮರೆಸಿಕೊಂಡಿರುವ ರಾಜೇಶ್ ಭಟ್ ಪತ್ತೆಗಾಗಿ ವಿವಿಧ ಉಪಾಯಗಳನ್ನು ಪೊಲೀಸರು ಹೂಡಿದ್ದಾರೆ.
ಆರೋಪಿ ರಾಜೇಶ್‌ನ ಪತ್ತೆಗಾಗಿ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಆಯುಕ್ತ ರಂಜಿತ್ ಬಂಡಾರು ನೇತೃತ್ವದಲ್ಲಿ ನಾಲ್ಕು ತಂಡಗಳು ಈಗಾಗಲೇ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ನಡೆಸಿದ್ದಾರೆ. ಆದರೆ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದಾರೆ. ರಾಜೇಶ್ ಭಟ್ ಗೌಪ್ಯ ಸ್ಥಳದಲ್ಲಿ ಪ್ರಭಾವಿಗಳ ಕೃಪಾಕಟಾಕ್ಷದಲ್ಲಿ ತಲೆಮರೆಸಿಕೊಂಡಿರುವುದು ಪೊಲೀಸರ ಪ್ಲಾನ್‌ಗಳನ್ನೆಲ್ಲಾ ಉಲ್ಟಾ ಮಾಡಿದೆ. ಹೀಗಾಗಿ ರಾಜೇಶ್ ಭಟ್‌ಗಾಗಿ ಮತ್ತಷ್ಟು ಶೋಧ ಮುಂದುವರಿಸಿದ್ದಾರೆ. ಆರೋಪಿ ವಿರುದ್ಧ ನಿರ್ಣಾಯಕ ಕಾರ್ಯಾಚರಣೆಗೆ ಪೊಲೀಸರು ಮುಂದಾಗಿದ್ದಾರೆ.

ಆರೋಪಿ ರಾಜೇಶ್ ಭಟ್‌ಗಾಗಿ ಈಗಾಗಲೇ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ಮಾಹಿತಿಯ ಪ್ರಕಾರ ಆರೋಪಿ ವಿವಿಧ ವೇಷ ಧರಿಸಿ ತೀರ್ಥಕ್ಷೇತ್ರಗಳಿಗೆ ಹೋಗಿರುವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಪೊಲೀಸರ ತಂಡ ವಿವಿಧ ತೀರ್ಥಕ್ಷೇತ್ರಗಳಿಗೂ ಹೋಗಿದೆ. ಕೆಲವು ಅನುಮಾನಾಸ್ಪದ ಸ್ಥಳಗಳಲ್ಲಿ ಸಿಸಿಟಿವಿ ಪರಿಶೀಲನೆ ಮಾಡಿದರೂ, ಮಾಸ್ಕ್ ಧರಿಸಿದ ಕಾರಣ ಪತ್ತೆಯಾಗದೇ ಬರೀಕೈಲಿ ಮರಳಿದ್ದಾರೆ.
ರಾಜೇಶ್ ಭಟ್ ಬಂಧನಕ್ಕೆ ಒತ್ತಾಯ ತೀವ್ರವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ ಆರೋಪಿ ಮಾತ್ರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ. ಪರಾರಿಯಾಗಿ ಎರಡು ತಿಂಗಳುಗಳೇ ಹತ್ತಿರವಾದರೂ, ಆರೋಪಿ ಇನ್ನೂ ಕೈಗೆ ಸಿಗದಿರುವುದು ತನಿಖೆಯ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ.











Click it and Unblock the Notifications